ಇತ್ತೀಚಿನ ದಿನಗಳಲ್ಲಿ ಕಾಲ್‌ಗರ್ಲ್ ಬದುಕಿನ ಬಗ್ಗೆ ತುಂಬಾ ಸಿನಿಮಾಗಳು ನಿರ್ಮಾಣ ಆಗುತ್ತಿವೆ. 'ಮಸ್ತ್ ಮೊಹಬ್ಬತ್' ಚಿತ್ರದ ಕತೆಯೂ ಹಾಗೆಯೇ ಇದೆ. ಹಾಗಂತ ಇದು ಗಂಭೀರ ಚಿತ್ರವೇನೂ ಅಲ್ಲ. ಅವಳ ನರಕದ ಬದುಕನ್ನೂ ಇದು ಅನಾವರಣಗೊಳಿಸುವುದಿಲ್ಲ. ನಾಯಕಿಯ ಪಾತ್ರಕ್ಕೆ ಅಂಥದ್ದೊಂದು ಹಿನ್ನೆಲೆ ಕೊಟ್ಟು, ತೆಳುವಾದ ಪ್ರೇಮಕತೆಯನ್ನು ಹೇಳಿದ್ದಾರೆ ನಿರ್ದೇಶಕ ಮೋಹನ್ ಮಾಳಗಿ. ಹೀಗಾಗಿ ಸಿನಿಮಾ ಮುಗಿದ ನಂತರ ಇದು ಕಾಲ್‌ಗರ್ಲ್ ಬದುಕಿನ ಕತೆಯೋ, ಅಥವಾ ಮಾಮೂಲು ಲವ್‌ಸ್ಟೋರಿಯೋ ಎಂಬ ಗೊಂದಲ ಪ್ರೇಕ್ಷಕರಿಗೆ ಆಗುವುದು ಸಹಜ.
ಶ್ರೀಧರ್ (ನೆನಪಿರಲಿ ಪ್ರೇಮ್) ಒಬ್ಬ ಯುವ ಉದ್ಯಮಿ. ಕೆಲಸವೇ ಅವನ ಪ್ರಪಂಚ. ರಿಲ್ಯಾಕ್ಸ್‌ಗಾಗಿ ಅವನು ಊಟಿಗೆ ಹೋಗುತ್ತಾನೆ. ಅಲ್ಲಿ ಮಾಯಾ (ವಂದನಾ ಗುಪ್ತಾ) ಎಂಬ ಹುಡುಗಿಯ ಪರಿಚಯ ಆಗುತ್ತದೆ. ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಇಬ್ಬರೂ ಪ್ರೀತಿಯ ಉತ್ತುಂಗದಲ್ಲಿರುವಾಗ ಶ್ರೀಧರ್‌ಗೆ ತಾನು ಪ್ರೀತಿಸುತ್ತಿರುವ ಹುಡುಗಿ ಕಾಲ್‌ಗರ್ಲ್ ಎಂದು ಗೊತ್ತಾಗುತ್ತದೆ. ಅಲ್ಲಿಂದ ಕತೆಯು ಬೇರೆ ದಿಕ್ಕಿಗೆ ಸಾಗಿದರೂ, ಸಿನಿಮಾದಲ್ಲಿ ಹೊಸತೇನೂ ಇಲ್ಲ ಅನಿಸುತ್ತದೆ.
ಪ್ರೇಮ್ ಇಲ್ಲಿ ಕಂಪೆನಿಯೊಂದರ ಸಿಇಓ ಆಗಿ ಅಭಿನಯಿಸಿದ್ದಾರೆ. ಕತೆಯಲ್ಲೇ ಗಟ್ಟಿತನ ಇರದ ಕಾರಣ, ಪಾತ್ರವು ಮನಸ್ಸಲ್ಲಿ ಉಳಿಯುವುದಿಲ್ಲ. ಆದರೂ, ಕೊಟ್ಟ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕಿ ವಂದನಾ ಗುಪ್ತಾಗೆ ನಟಿಸಲು ಅವಕಾಶ ಸಿಕ್ಕಿದ್ದರೂ, ಅವರು ಗ್ಲಾಮ್ ಲುಕ್‌ಗೆ ಸೀಮಿತವಾಗಿ ಉಳಿಯುತ್ತಾರೆ. ಚಿಕ್ಕಣ್ಣ ಮತ್ತು ರಾಜು ತಾಳಿಕೋಟಿಯ ನಡುವಿನ ಮಾತಿನ ಜುಗಲ್ಬಂದಿ ನಗಿಸುವುದಕ್ಕಿಂತ ಮಾತಾಗಿಯೇ ಉಳಿಯುತ್ತದೆ.
ಊಟಿಯ ಸೌಂದರ‌್ಯವನ್ನು ಸೆರೆ ಹಿಡಿಯುವುದರಲ್ಲಿ ಸಿನಿಮಾಟೋಗ್ರಾಫರ್ ವಿಜಯ್ ಸೋತಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಶೀರ್ಷಿಕೆ ಗೀತೆ ಗುನುಗುವಂತೆ ಮಾಡುತ್ತದೆ.
-ಶರಣು ಹುಲ್ಲೂರು