Quantcast
Channel: VijayKarnataka
Viewing all articles
Browse latest Browse all 6795

ಈ ದುರಂತ ನಮಗೆಲ್ಲರಿಗೂ ಪಾಠ: ದುನಿಯಾ ವಿಜಿ

$
0
0

ಮಾಸ್ತಿಗುಡಿ ದುರಂತದ ನಂತರ ಘಟನೆಗೆ ಸಂಬಂಧಿಸಿ ಕೆಲ ಬೆಳವಣಿಗೆಗಳು ನಡೆಯುತ್ತಿವೆ. ಇಡೀ ಪ್ರಕರಣವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿರುವ ನಟ ದುನಿಯಾ ವಿಜಯ್‌, ತಾವೇ ಮುಂದೆ ನಿಂತು ಅವುಗಳಿಗೆ ಪರಿಹಾರಗಳನ್ನೂ ಹುಡುಕುತ್ತಿದ್ದಾರೆ.

- ಶರಣು ಹುಲ್ಲೂರು

ದುರಂತದಲ್ಲಿ ಜಲ ಸಮಾಧಿಯಾದ ಇಬ್ಬರೂ ಕಲಾವಿದರು ಮಣ್ಣಲ್ಲಿ ಮಣ್ಣಾಗಿದ್ದಾರೆ. ತಮ್ಮ ನೆಚ್ಚಿನ ಹುಡುಗರನ್ನು ಕಳೆದುಕೊಂಡ ವಿಜಯ್‌ ಮಾತ್ರ ಇನ್ನೂ ಆ ಶಾಕ್‌ನಿಂದ ಹೊರಬಂದಿಲ್ಲ. ಬರುವುದಕ್ಕೂ ಆಗದಷ್ಟು ದುಃಖದಲ್ಲಿದ್ದಾರೆ ಅವರು. ಅವರು ಮುಂದೇನು ಮಾಡುತ್ತಾರೆ? ನಡೆಗಳೇನು? ಘಟನೆಯಿಂದ ಅವರು ಕಲಿತ ಪಾಠಗಳೇನು? ಸಾವನ್ನಪ್ಪಿದವರ ಕುಟುಂಬಗಳ ಬಗ್ಗೆ ಅವರೇನು ಚಿಂತಿಸಿದ್ದಾರೆ? ಇತ್ಯಾದಿ ವಿಷಯಗಳ ಬಗ್ಗೆ ವಿಜಯ್‌ ಲವಲವಿಕೆ ಜತೆ ಮಾತಾಡಿದ್ದಾರೆ.

*ಗೆಳೆಯರು ಕಣ್ಣೆದುರೇ ಜಲ ಸಮಾಧಿಯಾದರು. ಸ್ಥಳದಲ್ಲೇ ಇದ್ದಾಗ ನಿಮಗೆ ಆ ಕ್ಷಣದಲ್ಲಿ ಅನಿಸಿದ್ದೇನು?

ಅವರು ಕೇವಲ ಗೆಳೆಯರಷ್ಟೇ ಆಗಿರಲಿಲ್ಲ. ಮಕ್ಕಳಂತೆ ನೋಡಿಕೊಂಡಿದ್ದೆ. ಆ ಕ್ಷಣವನ್ನು ನೆನಪಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಆ ನೋವು ಸಾಯುವ ತನಕ ನನ್ನಿಂದ ಮರೆಯೋದಕ್ಕೆ ಸಾಧ್ಯವಿಲ್ಲ. ಮೂವರು ನೀರಿಗೆ ಬಿದ್ದಿದ್ದೆವು. ಎಲ್ಲವೂ ಕ್ಷಣಾರ್ಧದಲ್ಲೇ ನಡೆದು ಹೋಯಿತು. ಈಗ ಅದರ ಬಗ್ಗೆ ಏನೇ ಮಾತಾಡಿದರೂ ಅದು ಸುಳ್ಳು ಅನಿಸುತ್ತಿದೆ. ಆ ನೋವು ನನ್ನಲ್ಲೇ ಉಳಿದುಕೊಳ್ಳಲಿ. ಉಳಿದು ಹೋಗಲಿ...

*ಅನಿಲ್‌ ಮತ್ತು ಉದಯ್‌ ದೇಹಗಳನ್ನು ಹುಡುಕಲು ನೀವೇ ನೀರಿಗೆ ಇಳಿದಿದ್ದಿರಿ. ಆಗಿನ ನಿಮ್ಮ ಮನಸ್ಥಿತಿ ಹೇಗಿತ್ತು?

ನಾನು ಆಗ ಹೇಗಿದ್ದೇನೋ ಅಂತ ನನಗೇ ಗೊತ್ತಿಲ್ಲ. ಇಬ್ಬರನ್ನೂ ಕಳೆದುಕೊಂಡಿದ್ದ ನೋವು ಸಖತ್‌ ಬಾಧಿಸುತ್ತಿತ್ತು. ಆ ಹುಡುಗರು ಕಂಡಿದ್ದ ಕನಸುಗಳೆಲ್ಲ ನೆನಪಾಗುತ್ತಿದ್ದವು. ನನ್ನ ಸುತ್ತ ಏನೆಲ್ಲ ನಡೆಯುತ್ತಿದ್ದರೂ, ಅದರ ಅರಿವು ನನಗಿರಲಿಲ್ಲ. ಅವರನ್ನು ಹುಡುಕಬೇಕು ಅನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಆ ಮೂರ್ನಾಲ್ಕು ದಿನಗಳ ಕಾಲ ನಾನು ಹೇಗೆ ಇದ್ದೆ ಅಂತ ನನಗಷ್ಟೇ ಗೊತ್ತು. ವಿಜಯ್‌ ಆಳಲೇ ಇಲ್ಲ ಯಾರೋ ಮಾತನಾಡಿಕೊಂಡರಂತೆ. ಯಾರು ಏನು ಬೇಕಾದರೂ ಅಂದುಕೊಳ್ಳಲಿ.

* ನೀವು ನಿರ್ಮಾಪಕರ ಪರ ನಿಂತಿದ್ದೀರಿ ಅನ್ನುವ ಮಾತಿದೆಯಲ್ಲ?

ನಾನು ಯಾರ ಪರವೂ ನಿಂತಿಲ್ಲ. ಇಂತಹ ಮಾತುಗಳೇ ನನ್ನನ್ನು ಮತ್ತಷ್ಟು ಘಾಸಿಗೊಳಿಸುತ್ತಿವೆ. ನಿರ್ಮಾಪಕ ಸುಂದರ ಗೌಡ ಸಿನಿಮಾಗಾಗಿ ದುಡ್ಡು ಹಾಕಿದ್ದಾರೆ. ಅವರನ್ನು ಅರೆಸ್ಟ್‌ ಮಾಡುವುದು ಸರಿ ಅಲ್ಲ ಅಂತ ನಾನು ಹೇಳಿದ್ದೇನೆ ಅನ್ನುವುದು ನಿಜ. ಅವರೇನು ತಪ್ಪು ಮಾಡಿದ್ದಾರೆ? ಸಿನಿಮಾಗೆ ಏನು ಬೇಕೋ ಎಲ್ಲವನ್ನೂ ಅವರು ಕೊಟ್ಟಿದ್ದಾರೆ. ಹಾಗಾಗಿ ನಿರ್ಮಾಪಕರನ್ನು ಅರೆಸ್ಟ್‌ ಮಾಡಿದ್ದು ಸರಿ ಅಲ್ಲ ಅಂತ ಹೇಳಿದ್ದೇನೆ.

* ಅಗಲಿದ ನಿಮ್ಮ ಗೆಳೆಯರಿಬ್ಬರ ಕುಟುಂಬದ ಜವಾಬ್ದಾರಿ ಹೊರುವವರು ಯಾರು? ಅದಕ್ಕೇನು ಮಾಡುತ್ತೀರಿ?

ಅನಿಲ್‌, ಉದಯ್‌ ಕುಟುಂಬವನ್ನು ಹಾಗೆಯೇ ಒಂಟಿಯಾಗಿ, ದಿಕ್ಕಿಲ್ಲದೆ ಬಿಡಲಿಕ್ಕೆ ಆಗುವುದಿಲ್ಲ. ಅದು ನಮ್ಮ ಕುಟುಂಬ. ಆ ಮನೆಗಳ ಎಲ್ಲರ ಜವಾಬ್ದಾರಿ ನನ್ನದೇ.

* ಇಂಥ ದುರ್ಘಟನೆ ನಡೆಯುತ್ತೆ ಅಂತ ಸುಳಿವು ಕೂಡ ನಿಮಗೆ ಇರಲಿಲ್ಲವಾ?

ನಿಜ ಹೇಳುತ್ತೇನೆ. ನಮಗೆ ಯಾವ ಸುಳಿವೂ ಇರಲಿಲ್ಲ. ಎಲ್ಲವೂ ಸರಿ ಹೋದ ಮೇಲೆ ಖಂಡಿತಾ ಅದರ ಬಗ್ಗೆ ಮಾತಾಡುತ್ತೇನೆ. ಜನರು ತಮಗೆ ಹೇಗೆ ಅನಿಸುತ್ತಿದೆಯೋ ಹಾಗೆ ಮಾತನಾಡುತ್ತಿದ್ದಾರೆ. ನನ್ನ ಜಾಗದಲ್ಲಿ ನಿಂತುಕೊಂಡು ಒಂದು ಕ್ಷಣ ಆಲೋಚನೆ ಮಾಡಲಿ. ಆಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

* ನಾಯಕನಿಗೆ ಮಾತ್ರ ಲೈಫ್‌ ಜಾಕೆಟ್‌ ಇತ್ತು. ಸಹ ಕಲಾವಿದರಿಗೂ ಅದನ್ನು ಹಾಕಬಹುದಿತ್ತಲ್ಲ. ಜನ ಹಾಗಂತ ಕೇಳುತ್ತಿದ್ದಾರಲ್ಲ?

ಅದು ನಿಜ. ಆದರೆ, ಆ ಸನ್ನಿವೇಶವೇ ಹಾಗಿತ್ತು. ಅನಿಲ್‌ ಮತ್ತು ಉದಯ್‌ ಮೈಮೇಲೆ ಬಟ್ಟೆ ಇರಲಿಲ್ಲ. ನಾನು ಹಾಕಿಕೊಂಡಿದ್ದೆ. ಹಾಗಾಗಿ ನನಗೆ ಲೈಫ್‌ ಜಾಕೆಟ್‌ ನೀಡಲಾಗಿತ್ತು. ಈ ಕುರಿತು ರವಿವರ್ಮ ಅವರಿಗೆ ಸಾಕಷ್ಟು ಬೈದಿದ್ದೇನೆ. ಟೆಕ್ನಾಲಜಿ ಬಳಸಿಕೊಂಡು ಏನು ಬೇಕಾದರೂ ಮಾಡಬಹುದಿತ್ತುಅಂತಲೂ ಹೇಳಿದ್ದೇನೆ.

* ರವಿವರ್ಮಾ ಮತ್ತು ನಾಗಶೇಖರ್‌ ಬಗ್ಗೆ ಏನು ಹೇಳುತ್ತೀರಿ?

ಈಗ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ನಾನೇ ರವಿವರ್ಮ ಮತ್ತು ನಾಗಶೇಖರ್‌ ಅವರನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಸರೆಂಡರ್‌ ಮಾಡಿಸಿದ್ದೇನೆ. ಸಹ ನಿರ್ದೇಶಕ ಸಿಗಬೇಕು. ಅವನಿಗಾಗಿಯೂ ಹುಡುಕುತ್ತಿದ್ದೇನೆ. ಕಾನೂನು ಎಲ್ಲದರ ಬಗ್ಗೆಯೂ ಮಾತಾಡುತ್ತದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲಿ.

* ಈ ಘಟನೆಯಿಂದ ಮಾಸ್ತಿಗುಡಿ ಟೀಮ್‌ ಕಲಿತ ಪಾಠ ಏನು?

ಎರಡು ಜೀವದ ಹುಡುಗರನ್ನು ಕಳೆದುಕೊಂಡು ನೋವು ಯಾವತ್ತಿಗೂ ಹೋಗಲ್ಲ. ರಿಸ್ಕಿ ಸ್ಟಂಟ್‌ಗಳನ್ನು ಯಾರೂ ಮಾಡಬಾರದು ಮತ್ತು ಸಾಹಸ ನಿರ್ದೇಶಕರೂ ಆ ರೀತಿಯ ಸ್ಟಂಟ್‌ಗಳನ್ನು ಕಂಪೋಸ್‌ ಮಾಡಬಾರದು ಅನಿಸುತ್ತಿದೆ. ಇದು ಮಾಸ್ತಿಗುಡಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೆ ಪಾಠವಾಗಲಿ.

* ಸಿನಿಮಾ ಸಂಪೂರ್ಣ ಮುಗಿದಿದೆಯಾ?

ಹೌದು. ಶೂಟಿಂಗ್‌ ಸಂಪೂರ್ಣ ಮುಗಿದಿದೆ. ಆ ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಆಗಲೇ ಈ ದುರಂತ ನಡೆದು ಹೋಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!