ಮತ್ತೊಂದು ಪ್ರಯೋಗಕ್ಕೆ ಸಜ್ಜಾಗಿದೆ ಸ್ಯಾಂಡಲ್‌ವುಡ್. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯನ್ನು, ಕೆಲವೇ ಪಾತ್ರಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕ ಅಭಯ ಚಂದ್ರ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ಅನೇಕ ಪ್ರಯೋಗಗಳು ನಡೆದಿವೆ. ಅದಕ್ಕೆ ಹೊಸ ಸೇರ್ಪಡೆ ಅಭಯ್ ಚಂದ್ರ ನಿರ್ದೇಶನದ ಜವ ಚಿತ್ರ. ಒಂದು ಮನೆಯಲ್ಲಿ, ಒಂದು ರಾತ್ರಿ ನಡೆಯುವ ಕತೆಯನ್ನು ಏಳೇ ಏಳು ಪಾತ್ರಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕರು. ಹಾಗಾಗಿ ಈ ಸಿನಿಮಾ ಕೂಡ ಹೊಸ ರೀತಿಯಲ್ಲಿ ಮೂಡಿ ಬರಲಿದೆಯಂತೆ. 'ಸಾಮಾನ್ಯವಾಗಿ ಯಮನನ್ನು ಜವರಾಯ ಅಂತ ಕರೆಯುತ್ತಾರೆ. ಅದಕ್ಕೆ ಹೊಸ ರೀತಿಯ ಅರ್ಥ ಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಆಗುತ್ತಿದೆ. ಥ್ರಿಲ್ಲರ್ ಮಿಸ್ಟರಿ ಇಲ್ಲಿದ್ದರೂ, ಎಲ್ಲರೂ ನೋಡುವಂತಹ ಸಿನಿಮಾ ಇದಾಗಲಿದೆ' ಅಂತಾರೆ ನಿರ್ದೇಶಕರು. ಅದೊಂದು ಮನೆ. ಆ ಮನೆಯಲ್ಲಿ ಹಲವು ಘಟನೆಗಳು ನಡೆಯುತ್ತವೆ. ಒಂದು ರಾತ್ರಿ ನಡೆಯಲಿರುವ ಕತೆಗೆ ಏಳು ಪಾತ್ರಗಳು ಎದುರುಗೊಳ್ಳುತ್ತವೆ. ಆ ಘಟನೆಗಳು ತುಂಬಾ ಮಹತ್ವದ್ದಾಗಿವೆಯಂತೆ. ಮೊನ್ನೆಯಷ್ಟೇ ಮೂರು ಬಗೆಯ ಪೋಸ್ಟರ್‌ಗಳನ್ನು ಸಿನಿಮಾ ತಂಡ ರಿಲೀಸ್ ಮಾಡಿದ್ದು, ಸ್ವಲ್ಪಭಾಗದ ಕತೆಯನ್ನು ಈ ಪೋಸ್ಟರ್‌ನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಕತೆಯನ್ನು ಸಿದ್ದಪಡಿಸಲು ನಿರ್ದೇಶಕರು 18 ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ಕಲಾತ್ಮಕ, ಕಮರ್ಷಿಯಲ್ ಮಾದರಿಯಲ್ಲಿ ಸಿನಿಮಾ ಮಾಡಬೇಕಂಬ ಅದಮ್ಯ ಬಯಕೆಯಿಂದಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರಂತೆ ನಿರ್ದೇಶಕರು. ದಿಲೀಪ್‌ರಾಜ್, ಭವಾನಿ ಪ್ರಕಾಶ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮೂರು ಜನರು ರಂಗಭೂಮಿ ಕಲಾವಿದರೇ ಇರುವುದು ಮತ್ತೊಂದು ವಿಶೇಷ. ಸಾಯಿಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದು, ಅವರಿಲ್ಲಿ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿಗೆ ವಿನಯ್ ಚಂದ್ರ ಸಂಗೀತ ನೀಡಿದ್ದಾರೆ. ಉಷಾ ಉತ್ತಪ್ ಕೂಡ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ನಂದಕುಮಾರ್ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬರಲಿದೆ.
↧
ಜವರಾಯನ ಪ್ರಯೋಗ
↧