*ನಾಳೆ ಕೇಂದ್ರ ಸಂಪುಟದಲ್ಲಿ 7ನೇ ವೇತನ ಆಯೋಗದ ಶಿಫಾರಸಿಗೆ ಅನುಮೋದನೆ ಸಂಭವ ಹೊಸದಿಲ್ಲಿ: ವರ್ಷಾರಂಭದಿಂದಲೂ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ಇದರಿಂದ ಕೇಂದ್ರ ಸರಕಾರದ 48 ಲಕ್ಷ ನೌಕರರು ಮತ್ತು 55 ಲಕ್ಷ ಪಿಂಚಣಿದಾರರ ವೇತನ 15%ನಿಂದ 23% ಏರಿಕೆ ಆಗಲಿದೆ. ಹೊಸದಿಲ್ಲಿಯಲ್ಲಿ ಬುಧವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ. 2016 ಜನವರಿ 1ರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗಲಿವೆ ಎಂದು ಮೂಲಗಳು ಖಚಿತಪಡಿಸಿವೆ. 7ನೇ ವೇತನ ಆಯೋಗ ಶಿಫಾರಸು ಮಾಡಿರುವ ಹೊಸ ವೇತನ ಶ್ರೇಣಿಯ ಜಾರಿಯಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 1.02 ಲಕ್ಷ ಕೋಟಿ ರೂ. ಹೊರೆ ಬೀಳಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2016-17ನೇ ಬಜೆಟ್‌ನಲ್ಲಿ, 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗಾಗಿ 70 ಸಾವಿರ ಕೋಟಿ ರೂ. ಮೀಸಲಿರಿಸಿದ್ದರು. ಕೇಂದ್ರ ಸರಕಾರ ತನ್ನ ನೌಕರರಿಗೆ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಮತ್ತು ಇತರೆ ಭತ್ಯೆಗಳ ಪರಿಷ್ಕರಣೆ ಮಾಡುವ ಸಂಬಂಧ ವೇತನ ಆಯೋಗ ರಚಿಸುತ್ತದೆ. ಯುಪಿಎ ಸರಕಾರ 2014 ಫೆಬ್ರವರಿಯಲ್ಲಿ 7ನೇ ವೇತನ ಆಯೋಗ ರಚಿಸಿತ್ತು.
↧
ಕೇಂದ್ರ ನೌಕರರ ವೇತನ ಹೆಚ್ಚಳ ನಿಶ್ಚಿತ
↧