Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ಜನಪ್ರತಿನಿಧಿಗಳ ಗೂಂಡಾಗಿರಿ

$
0
0

ಎಲ್ಲ ಪ್ರಾಣಿಗಳು ಸಮಾನ, ಆದರೆ ಕೆಲವು ಪ್ರಾಣಿಗಳು ಹೆಚ್ಚು ಸಮಾನ ಎನ್ನುತ್ತಾನೆ ಪ್ರಖ್ಯಾತ ಕಾದಂಬರಿಕಾರ ಜಾರ್ಜ್‌ ಆರ್ವೆಲ್‌. ಎಲ್ಲ ನಾಗರಿಕರು ಸಮಾನ ಎಂದು ಘೋಷಿಸಿ ಕೆಲವರಿಗೆ ಮಾತ್ರ ವಿಶೇಷ ಅಧಿಕಾರ ಮತ್ತು ಅವಕಾಶಗಳನ್ನು ಒದಗಿಸುವ ಸರಕಾರದ ಬೂಟಾಟಿಕೆ ಪ್ರವೃತ್ತಿಯನ್ನು ತನ್ನ 'ಅನಿಮಲ್‌ ಫಾರ್ಮ್‌' ಕೃತಿಯಲ್ಲಿ ಆತ ಲೇವಡಿ ಮಾಡುತ್ತಾನೆ. ಅಧಿಕಾರ ದಂಡ ಕೈಗೆ ಸಿಕ್ಕ ಕೂಡಲೇ ನಮ್ಮ ಜನಪ್ರತಿನಿಧಿಗಳಷ್ಟೇ ಅಲ್ಲ; ಅವರು ಕುಟುಂಬ, ಬಂಧು ಬಳಗವೆಲ್ಲ ಪಾಳೇಗಾರರಂತೆ ವರ್ತಿಸುವುದು, ಎಲ್ಲರನ್ನು ತಮ್ಮ ಅಡಿಯಾಳುಗಳಂತೆ ಭಾವಿಸುವುದು, ಒಂದು ವೇಳೆ ದಂಡ ನಮಸ್ಕಾರ ಹಾಕದಿದ್ದರೆ ಗೂಂಡಾಗಿರಿ ನಡೆಸುವುದು ಸಾಮಾನ್ಯ ಎನ್ನುವಂತಾಗಿದೆ. ಜಂಗಲ್‌ ರಾಜ್‌ ಎನ್ನುವ ಕುಖ್ಯಾತಿಗೆ ಪಾತ್ರವಾಗಿದ್ದ ಬಿಹಾರದಲ್ಲಿ ರಾಜಕಾರಣಿಯೊಬ್ಬರ ಮಗನ ಕಾರನ್ನು ಓವರ್‌ಟೇಕ್‌ ಮಾಡಿದನೆಂಬ ಕಾರಣಕ್ಕೆ 12ನೇ ತರಗತಿಯ ವಿದ್ಯಾರ್ಥಿಯನ್ನು ನಡುಬೀದಿಯಲ್ಲಿ ಸಿನಿಮೀಯ ರೀತಿಯಲ್ಲಿ ಗುಂಡಿಟ್ಟು ಕೊಲೆ ಮಾಡಿದ ಘಟನೆ ನಮ್ಮ ರಾಜಕಾರಣಿಗಳ ದರ್ಪ, ದೌಲತ್ತು ಮತ್ತು ಧಿಮಾಕಿಗೆ ಸಾಕ್ಷಿ.

ಜೆಡಿಯು ಶಾಸಕಿ ಮನೋರಮಾ ದೇವಿ ಅವರ ಪುತ್ರ ರಾಕಿ ಕುಮಾರ್‌ ಯಾದವ್‌ ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಹಿಂದಿಕ್ಕಿದ ಎಂಬ ಕಾರಣಕ್ಕೆ ಸಚ್ಚದೇವ್‌ ಎಂಬ ಹದಿಹರೆಯದ ಯುವಕನನ್ನು, ರಾಕಿ ಕೊಲೆ ಮಾಡಿದ್ದಾನೆ, ಈ ಕೃತ್ಯ ಜರುಗುವಾಗ ಆತನ ತಂದೆ ಮತ್ತು ಶಾಸಕಿಯ ಬೆಂಗಾವಲು ಪಡೆ ಕೂಡ ಇತ್ತು ಎಂಬುದು ಗಮನಾರ್ಹ. ಈ ಘಟನೆ ಅಪರೂಪ ಖಂಡಿತ ಅಲ್ಲ; ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಕಾರ್ಮಿಕ ಸಚಿವರಾಗಿದ್ದವರೊಬ್ಬರು ಇಂಥದ್ದೇ ಕಾರಣಕ್ಕೆ ಯುವಕನೊಬ್ಬನ ಕಪಾಳಕ್ಕೆ ಬಾರಿಸಿದ್ದರು. ಪುಣ್ಯಕ್ಕೆ ಅವರು ಜೀವ ತೆಗೆಯುವ ಮಟ್ಟಕ್ಕೆ ಹೋಗಲಿಲ್ಲ. ಚುನಾವಣೆ ಸಮಯದಲ್ಲಿ ನಯ, ವಿನಯ ಪ್ರದರ್ಶಿಸುವ ಕೆಲ ಮಂದಿ ಗೆದ್ದ ಕೂಡಲೇ 'ರಾಜಾಧಿರಾಜ'ರಂತೆ ವರ್ತಿಸುತ್ತಾರೆ. ಕೊಲ್ಲುವ, ಹೊಡೆಯುವ ಕ್ರೌರ್ಯ ಒಂದೆಡೆಯಾದರೆ, ನಾವು ಹೇಳಿದ್ದನ್ನು ನೀವು ಕೇಳಿಸಿಕೊಳ್ಳಬೇಕು, ಪ್ರಶ್ನೆ ಮಾಡಬಾರದು, ಕುಂದನ್ನು ಎತ್ತಿ ತೋರಿಸಬಾರದು ಎನ್ನುವ ಶಾಸಕರು ಮತ್ತು ಸಚಿವರಿಗೇನು ಕಡಿಮೆ ಇಲ್ಲ. ಇದು ಸಾಮಾನ್ಯ ಜನರಿಗೆ ನೀಡುವ ಹಿಂಸೆ ಕಡಿಮೆಯದ್ದೇನೂ ಅಲ್ಲ. ಕಣ್ಣು ಕೋರೈಸುವ ಸೌಲಭ್ಯ, ಹಿಂಬಾಲಕ ಗಡಣ, ಎಲ್ಲಿ ಹೋದರೂ ಸಂದಾಯವಾಗುವ ನಮಸ್ಕಾರಗಳು, ಅಧಿಕಾರಸ್ಥರ ಮುಂದೆ ನಡು ಬಗ್ಗಿಸಿಕೊಂಡೇ ಇರುವ ನೌಕರಶಾಹಿ - ಈ ಎಲ್ಲ ಕಾರಣಗಳಿಂದ ನಮ್ಮ ಜನಪ್ರತಿನಿಧಿಗಳು ತಮ್ಮನ್ನು ತಾವು ಸೂಪರ್‌ ಹೀರೊಗಳೆಂದು ಭಾವಿಸುವುದಕ್ಕೆ ಇಂಬು ನೀಡುತ್ತವೆ. ಸರಕಾರವೆಂದರೆ ಕೊಡುವುದು ಮತ್ತು ಜನರು ಸ್ವೀಕರಿಸುವವರು ಎಂಬ ಸ್ಥಾಪಿತ ನಂಬಿಕೆ ಕೂಡ ಧಿಮಾಕಿನ ವರ್ತನೆಗಳನ್ನು ಪೋಷಿಸುತ್ತವೆ. ಸರಕಾರದ ಯಾವುದೇ ಯೋಜನೆಗಳನ್ನು ಗಮನಿಸಿದರೂ ಅಲ್ಲಿ ಇಂಥ ವಿಂಗಡಣೆ ಇದ್ದು, ಸ್ವೀಕರಿಸುವ ಪ್ರಜೆಗಳನ್ನು ದೀನರು, ದುರ್ಬಲರ ನೆಲೆಯಲ್ಲಿಯೇ ಪರಿಗಣಿಸಲಾಗುತ್ತದೆ. ಈ ಎಲ್ಲ ಅಂಶಗಳು ಅಧಿಕಾರಸ್ಥರನ್ನು ಕಾಯಿದೆ, ಕಾನೂನಿಗೆ ಅತೀತರನ್ನಾಗಿಸುತ್ತದೆ. ಲಂಗೂ ಲಗಾಮಿಲ್ಲದ ವರ್ತನೆಗಳಿಗೆ ದೂಡುತ್ತದೆ. ಬಿಹಾರದಲ್ಲಿ ನಡೆದಿರುವ ಕೃತ್ಯದ ಹಿಂದಿರುವುದು ಇಂಥ ಮನಸ್ಥಿತಿಯೇ ಆಗಿದೆ.

ಎಲ್ಲರೂ ಸಮಾನರು ಎಂಬ ತತ್ವದ ಆಚರಣೆಯೇ ಪ್ರಜಾಪ್ರಭುತ್ವ. ಸರಕಾರದ ಎಲ್ಲ ನೀತಿ ನಿರ್ಧಾರಗಳಲ್ಲೂ ನಾಗರಿಕರು ಸಕ್ರಿಯ ಪಾತ್ರ ವಹಿಸುವ ಅಧಿಕಾರ ಅವರಿಗೆ ಇದ್ದೇ ಇರುತ್ತದೆ. ಸರಕಾರ ಎಂಬುದು ಜನರ ಸೇವೆಗಾಗಿ ಇರುವ ಒಂದು ಸಾಧನವಷ್ಟೇ. ಯಾವುದೇ ಕಾರಣಕ್ಕೆ ನಮ್ಮ ಪ್ರತಿನಿಧಿಗಳು ಜನರ ಮೇಲೆ ಪರಮಾಧಿಕಾರ ಚಲಾಯಿಸಬಾರದು. ಶಾಸಕರು, ಸಚಿವರಿಗೆ ಇರುವ ಅಧಿಕಾರ ಏನ್ನನೇ ಆಗಲಿ, ಅಂಗೀಕರಿಸುವ, ದೃಢೀಕರಿಸುವ ಸ್ವರೂಪದ್ದು ಮಾತ್ರ. ಈ ಮಾತುಗಳು ತುಂಬ ಆದರ್ಶವಾಗಿ ಕಾಣಬಹುದು. ಏಕೆಂದರೆ ನಾವು ಪ್ರತಿನಿತ್ಯ ನೋಡುತ್ತಿರುವುದುಇದಕ್ಕಿಂತ ಸಂಪೂರ್ಣವಾದ ಭಿನ್ನವಾದ ಚಿತ್ರ. ಹಾಗೆಂದು ತಪ್ಪನ್ನೇ ಸರಿ ಎನ್ನಲಾಗದು. ಪ್ರಜಾಪ್ರಭುತ್ವದ ತಿರುಳು ನಮ್ಮ ಜನಮಾನಸದಲ್ಲಿ ಬೇರೂರುವ ವರೆಗೆ ಜನಪ್ರತಿನಿಧಿಗಳ ಗೂಂಡಾಗಿರಿ ನಡೆಯುತ್ತಲೇ ಇರುತ್ತದೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>