Quantcast
Channel: VijayKarnataka
Viewing all articles
Browse latest Browse all 6795

ಸಂಪಾದಕೀಯ: ಪೊಲೀಸರಿಗೂ ಬೇಕು ರಕ್ಷೆ

$
0
0

ಪೊಲೀಸರೆಂದರೆ ದಪ್ಪ ಚರ್ಮದವರು, ಸೂಕ್ಷ್ಮತೆ, ಸಂವೇದನೆ, ಸ್ಪಂದನೆ ಇಲ್ಲದವರು; ಸಿನಿಮಾಗಳ ಕಾಮಿಡಿ ದೃಶ್ಯದಲ್ಲಿ ತೋರಿಸುವಂತೆ ಎಲ್ಲ ಮುಗಿದ ಮೇಲೆ ಸ್ಥಳಕ್ಕೆ ಓಡಿ ಬರುವವರು, ಒರಟಾಗಿ ವರ್ತಿಸುವವರು ಎಂಬ ಚಿತ್ರ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಕಾನೂನು ಸುವ್ಯವಸ್ಥೆ ರಕ್ಷಣೆ, ಅಪರಾಧಗಳನ್ನು ತಡೆಗಟ್ಟುವುದಕ್ಕೆ ವಹಿಸುವ ಮುಂಜಾಗ್ರತೆ ಹಾಗೂ ದುಷ್ಕೃತ್ಯಗಳು ಜರುಗಿದ ನಂತರ ಅವುಗಳ ತನಿಖೆ ಇತ್ಯಾದಿ ನೂರೆಂಟು ಕೆಲಸಗಳು ಅವರ ಹೆಗಲೇರಿದೆ.

ನಾಗರಿಕ ಪ್ರಜ್ಞೆ ಶೋಚನೀಯ ಅವಸ್ಥೆಯಲ್ಲಿರುವ ನಮ್ಮಂಥ ದೇಶಗಳಲ್ಲಿ ಪೊಲೀಸರಾಗಿ ಕಾರ್ಯ ನಿರ್ವಹಿಸುವುದು ದೊಡ್ಡ ಸವಾಲು. ಈ ವೃತ್ತಿಯಲ್ಲಿ ಒತ್ತಡ, ಆತಂಕ, ತಲೆಬೇನೆ ಎಂಬುದು ಅಂತರ್ಗತವಾಗಿರುತ್ತದೆ. ಯಾವುದೇ ಪೊಲೀಸ್‌ ಠಾಣೆಗೆ ಹೋದರೂ ದೂರುದಾರರ ಸಂದಣಿ, ಗಡಿಬಿಡಿ, ಗೊಂದಲ ಮನೆ ಮಾಡಿರುತ್ತದೆ. ಮೇಲ್ನೋಟಕ್ಕೆ ಒಂದು ಕೆಲಸ ಎಂದೆನಿಸಿದರೂ ಅದು ಹತ್ತಾಗಿ, ನೂರಾಗಿ ಮನಸ್ಸು ಜೇನುಗೂಡಾಗುತ್ತದೆ. ಪೊಲೀಸರೂ ಮನುಷ್ಯರೇ ಅಲ್ಲವೇ? ಅತಿಯಾದ ಕಾರ್ಯಭಾರ ಮತ್ತು ಒತ್ತಡ ಎಂಬುದು ಅವರನ್ನು ಅನಾರೋಗ್ಯವಷ್ಟೇ ಅಲ್ಲ; ಆತ್ಮಹತ್ಯೆಗೂ ದೂಡುತ್ತಿದೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ ದಾಖಲೆಯೊಂದನ್ನು ಬಿಡುಗಡೆ ಮಾಡಿದ್ದು, 2012ರಿಂದ 14ರ ಅವಧಿಯಲ್ಲಿ ತಮಿಳುನಾಡಿನಲ್ಲಿ 116 ಮಂದಿ ಪೇದೆಗಳು ಮತ್ತು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂರು ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ತಮ್ಮನ್ನು ಕೊಂದುಕೊಂಡವರ ಪ್ರಮಾಣ 39. ದಕ್ಷಿಣದಲ್ಲಿ ಕರ್ನಾಟಕ ಎರಡು ಹಾಗೂ ಇಡೀ ದೇಶದಲ್ಲಿ 5 ನೇ ಸ್ಥಾನ ಗಳಿಸಿದೆ. ವೈಯಕ್ತಿಕ ಕಾರಣಗಳಿಂದ ಈ ದುರಂತಗಳು ಸಂಭವಿಸಿದೆಯೇ ಹೊರತು, ವೃತ್ತಿ ಪರಿಸರದ ತೊಂದರೆಗಳಿಂದಲ್ಲ ಎಂದು 'ಉನ್ನತ' ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ. ಆದರೆ ಪೊಲೀಸ್‌ ಸಿಬ್ಬಂದಿಗಳ ಕೊರತೆಯನ್ನು ಯಾರೂ ಕೂಡ ಮುಚ್ಚಿಡಲಾಗದು.

ಒಂದು ಲಕ್ಷ ಜನವಸತಿ ಇರುವೆಡೆ 300 ಪೊಲೀಸರು ಇರಬೇಕು ಎಂದು ವಿಶ್ವಸಂಸ್ಥೆ ಹೇಳಿದೆ. ಈ ಲೆಕ್ಕವನ್ನು ತೆಗೆದುಕೊಂಡರೆ ಅನೇಕ ಊರುಗಳಲ್ಲಿ ಕಾನೂನು ಪಾಲನೆ ಸಿಬ್ಬಂದಿಗಳ ಸಂಖ್ಯೆ 25-30 ದಾಟುವುದಿಲ್ಲ. ಇದು ತಳಪಾಯದ ಹಂತದಲ್ಲಿನ ಕೊರತೆ. ಇನ್ನು ಐಪಿಎಸ್‌ ಶ್ರೇಣಿಯಲ್ಲೂ ಅಧಿಕಾರಿಗಳ ಕೊರತೆ ಇದ್ದೇ ಇದೆ. ಹೆಚ್ಚುವರಿ ಸಿಬ್ಬಂದಿ ಇರಲಿ, ಮಂಜೂರಾದ ಹುದ್ದೆಗಳೇ ಭರ್ತಿಯಾಗದ ಪರಿಸ್ಥಿತಿ ಇದೆ. ಕಡಿಮೆ ಸಿಬ್ಬಂದಿ ಅತಿಯಾದ ಕಾರ್ಯಭಾರವನ್ನು ಹೊತ್ತುಕೊಂಡಾಗ ಅಲ್ಲಿ ಖಾಸಗಿ ಮತ್ತು ವೃತ್ತಿ ಎಂಬ ಗಡಿರೇಖೆಗಳೇ ಅಳಿಸಿ ಹೋಗುತ್ತವೆ ಎಂಬುದನ್ನು ತಿಳಿಯುವುದಕ್ಕೆ ದೊಡ್ಡ ಪಾಂಡಿತ್ಯ ಬೇಕಿಲ್ಲ. ಇದರಿಂದ ಕಾರ್ಯದಕ್ಷತೆಯಷೇ ಕುಂಠಿತಗೊಳ್ಳುವುದಿಲ್ಲ, ಪೊಲೀಸರ ಆರೋಗ್ಯ ಕೂಡ ಕ್ಷೀಣಿಸುತ್ತದೆ. ಇದು ಖಿನ್ನತೆ ಮತ್ತು ಆತ್ಮಹತ್ಯೆ ಪ್ರವೃತ್ತಿಗೂ ಹಾದಿ ಮಾಡಿಕೊಡುತ್ತದೆ.

ಈಗ ಲಭ್ಯವಿರುವ ಅಂಕಿ ಅಂಶಗಳು ಇದನ್ನು ಸಂಶಯಕ್ಕೆಡೆ ಇಲ್ಲದಂತೆ ಸಾಬೀತುಗೊಳಿಸಿದೆ. ಸಿಬ್ಬಂದಿ ಹೆಚ್ಚಳ ತುರ್ತಾಗಿ ಆಗಬೇಕಾಗಿದೆ. ಇದರಿಂದ ಒತ್ತಡವಿಲ್ಲದೆ ಅವರು ಕೆಲಸ ಮಾಡಬಹುದು. ಪೊಲೀಸರು ಹೆಚ್ಚು ಹೆಚ್ಚಾಗಿ ಕಣ್ಣಿಗೆ ಬಿದ್ದರೆ ರೇಪ್‌, ರಾಬರಿ, ಕೊಲೆಯಲ್ಲದೆ ರಸ್ತೆ, ಬೀದಿಗಳಲ್ಲಿ ನಡೆಯುವ ಅಪರಾಧಗಳಿಗೂ ಕಡಿವಾಣ ಬೀಳುತ್ತದೆ. ಇದಲ್ಲದೆ ಭಯೋತ್ಪಾದಕ ದಾಳಿಗಳಿಗೂ ತಡೆ ಹಾಕಿದಂತಾಗುತ್ತದೆ. ಪೊಲೀಸ್‌ ಸಿಬ್ಬಂದಿ ತೀವ್ರ ಕೊರತೆ ಇರುವ ಮಹಾರಾಷ್ಟ್ರದಂಥ ರಾಜ್ಯಗಳು ಉಗ್ರ ದಾಳಿಗೆ ಸಿಲುಕಿವೆ. ಕೇವಲ ಸಿಬ್ಬಂದಿ ಹೆಚ್ಚಳವೊಂದೇ ಅಲ್ಲ, ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರಿಗೆ ತಕ್ಕ ತರಬೇತಿ ಕೂಡ ನೀಡಬೇಕು.

ಅಪರಾಧ ಮತ್ತು ಶಿಕ್ಷೆ ಪ್ರಮಾಣವನ್ನು ಗಮನಿಸಿದರೆ ಅಲ್ಲೂ ಕೂಡ ನಮ್ಮ ವೈಫಲ್ಯ ಎದ್ದು ಕಾಣುತ್ತದೆ. ಅಪರಾಧಿಗಳು ಸುಲಭವಾಗಿ ನುಣಿಚಿಕೊಳ್ಳುವ ಅವಕಾಶಗಳು ಸಾಕಷ್ಟಿವೆ. ಅಪರಾಧ ಪತ್ತೆ ವಿಷಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಲಕರಣೆಗಳು ಕ್ರಾಂತಿಕಾರಿ ಪಾತ್ರ ವಹಿಸುತ್ತಿವೆ. ಆದರೆ ಅವುಗಳನ್ನು ಬಳಸುವುದಕ್ಕೆ ಪೊಲೀಸರನ್ನು ಸಜ್ಜುಗೊಳಿಸುವ ಕಾರ್ಯ ಫಲಪ್ರದವಾಗಿ ಆಗಿಲ್ಲ. ಸಿಬ್ಬಂದಿ ಹೆಚ್ಚಳದ ಜತೆಗೆ ಕಾರ್ಯ ನಿರ್ವಹಣೆಯಲ್ಲೂ ಸುಧಾರಣೆಗಳನ್ನು ತಂದರೆ, ಮಾತ್ರ ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸಬಹುದು. ಅನಾರೋಗ್ಯಕರ ಪೊಲೀಸ್‌ ವ್ಯವಸ್ಥೆಯ ಪರಿಣಾಮಗಳು ಅನಂತವಾಗಿರುತ್ತವೆ ಎಂಬುದನ್ನು ಮರೆಯಬಾರದು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>