ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ತಂಡ ಉತ್ತಮ ಬಜೆಟ್ ನೀಡಲು ಎಲ್ಲಿಲ್ಲದ ಕಸರತ್ತು ನಡೆಸಿದೆ. ಆದರೆ, ಈ ವರ್ಷದ ವಿಶೇಷವೆಂದರೆ ಇದುವರೆಗೆ ಯಾವ ಪ್ರಧಾನಿಯೂ ಭಾಗಿಯಾಗದಷ್ಟು ಬಜೆಟ್ ಪ್ರಕ್ರಿಯೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ಪ್ರತಿ ಆಗುಹೋಗುಗಳನ್ನೂ ಗಮನಿಸಿದ್ದಾರೆ. ಅದಕ್ಕೆ ಈ ಹಿಂದಿನ ಸರಕಾರದ ಬಜೆಟ್ ಪ್ರಕ್ರಿಯೆಗಿಂತಲೂ ಈ ವರ್ಷದ್ದು ಸ್ವಲ್ಪ ವಿಭಿನ್ನ ಹಾಗೂ ಕಷ್ಟವಾಗಿತ್ತಂತೆ.
ಬಜೆಟ್ ಬಗ್ಗೆ ಒಂದು ಸ್ಪಷ್ಟ ಚಿತ್ರಣ ನೀಡುವ ಪ್ರಧಾನಿ, ಉಳಿದೆಲ್ಲ ಜವಾಬ್ದಾರಿಗಳನ್ನು ವಿತ್ತ ಸಚಿವರ ಮೇಲೆ ಬಿಡುತ್ತಾರೆ. ಆದರೆ, ಮೋದಿ ಎಲ್ಲರಿಗಿಂತ ವಿಭಿನ್ನ ನಾಯಕನೆಂದು ಈ ವಿಷಯದಲ್ಲಿಯೂ ತೋರಿಸಿದ್ದು, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಮೋದಿ ನೀತಿ ನಿಯಮ ರೂಪಿಸುವಾಗ ಸಕ್ರಿಯವಾಗಿರುತ್ತಿದ್ದರು. ಗಂಟೆಗಟ್ಟಲೆ ಕುಳಿತಿರುತ್ತಿದ್ದರು.
ವಿಶ್ವದಲ್ಲಿಯೇ ಆರ್ಥಿಕವಾಗಿ ತ್ವರಿತವಾಗಿ ಬೆಳೆಯುತ್ತಿರುವ ದೇಶವೆಂಬ ಕಾರಣಕ್ಕೆ ಇಡೀ ವಿಶ್ವವೇ ಭಾರತದ ಮೇಲೆ ಕಣ್ಣಿಟ್ಟಿದ್ದು, ಭವಿಷ್ಯದ ಉಜ್ವಲ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಎಂಥದ್ದೇ ಕ್ಲಿಷ್ಟ ವಿಷಯವನ್ನು ಮೋದಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆಂದು ಅವರನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿದೆ. ಆರ್ಥಿಕ ಕೊರತೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಮೋದಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಒಟ್ಟಾರೆ ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಭದ್ರತೆ ಹಾಗೂ ಕೃಷಿ ನೀತಿಯನ್ನು ಬದಲಾವಣೆಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎನ್ನಲಾಗುತ್ತಿದೆ.
ಬಜೆಟ್ ಮಂಡನೆಯಾಗುವ ಮುನ್ನ ಶಿಫಾರಸುಗಳನ್ನು ಮೋದಿ ಹಾಗೂ ಜೇಟ್ಲಿ ಸಮಗ್ರವಾಗಿ ಪರಿಶೀಲಿಸಿದ್ದು, ಆರ್ಥಿಕ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಹೊಸದಿಲ್ಲಿ: ಈ ವರ್ಷದ ಬಜೆಟ್ ಮಂಡನೆಯಾಗಲು ಇನ್ನು 10 ದಿನಗಳಿವೆ. ನಿನ್ನೆ ತಾನೇ ಹಲ್ವಾ ಪ್ರಕ್ರಿಯೆಯೂ ಮುಗಿದಿದ್ದು, ಇದೀಗ ಬಜೆಟ್ ಪ್ರತಿಗಳು ಮುದ್ರಣಗೊಳ್ಳುತ್ತಿವೆ.