ಅಶೋಕ್ ನಿರ್ದೇಶನದ 6-5=2 ಚಿತ್ರದ ಬಗ್ಗೆ ಗೊತ್ತು. ಈ ಸಿನಿಮಾದ ಪ್ರೊಡಕ್ಷನ್ ಸಂಸ್ಥೆಯೇ ಇದೀಗ ಲವ್, ಥ್ರಿಲ್ಲರ್, ಆ್ಯಕ್ಷನ್, ಹಾರರ್ ಇರುವ ಚಿತ್ರ 'ಕರ್ವ'ದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದೆ. ತಿಲಕ್ ನಾಯಕನಾದರೆ, ಅನಿತಾ ಆಂಬ್ರೋಸ್, ಅನು, ಪೂನಂ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ.
'ಇಲ್ಲಿಯವರೆಗೆ ನಾನು ನಟಿಸಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಸಿಕ್ಕಿದೆ. ಬೇರೆ ಭಾಷೆಗಳ ಸಿನಿಮಾಗಳನ್ನು ಹೊಗಳುತ್ತೇವೆ. ಆದರೆ, ಕನ್ನಡದಲ್ಲೂ ಅಂಥದ್ದೊಂದು ಸಿನಿಮಾ ಮಾಡೋದು ಸಾಧ್ಯವಿದೆ ಅನ್ನೋದನ್ನು ಈ ಚಿತ್ರ ತೋರಿಸಲಿದೆ. ರಿಚ್ ಪ್ರೊಡಕ್ಷನ್, ಒಳ್ಳೆಯ ಸ್ಕ್ರಿಪ್ಟ್ ಇದೆ. ಯೂಥ್‌ಗೆ ಇಷ್ಟವಾಗುವ ಸಿನಿಮಾ. ಇಂಥದೇ ಜೋನರ್ ಚಿತ್ರ ಅಂತ ಹೇಳುವ ಬದಲು ಫುಲ್ ಎಂಟರ್‌ಟೇನ್‌ಮೆಂಟ್ ಸಿನಿಮಾ ಎನ್ನಬಹುದು' ಎನ್ನುತ್ತಾರೆ ತಿಲಕ್. ಇದು ನವನೀತ್ ನಿರ್ದೇಶನದಲ್ಲಿ ತೆರೆಗೆ ಬರಲಿದೆ.
ನಾಯಕಿಯಾಗಿ ನಟಿಸಿರುವ ಕೊಡಗಿನವರಾದ ಅನು ಅವರಿಗೆ ಇದು ಮೊದಲ ಚಿತ್ರ. ಇನ್ನು ಅನಿತಾ ಆಂಬ್ರೋಸ್ ಈಗಾಗಲೇ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಜೊತೆ ನಟಿಸಿದ ಅನುಭವ ಇರುವ ನಾಯಕಿ ನಟಿ ಪೂನಂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಿಲಕ್ ಈಗಾಗಲೇ 5 ಚಿತ್ರಗಳಲ್ಲಿ ನಟಿಸಿದ್ದು, ಎಲ್ಲವೂ ತೆರೆಗೆ ಬರಲು ಸಿದ್ಧವಾಗಿವೆ. ಈಗ ಶಿವು ಜಮಖಂಡಿ ನಿರ್ದೇಶಿಸುತ್ತಿರುವ 'ನನ್ನ ನಿನ್ನ ಪ್ರೇಮ್ ಕಹಾನಿ' ಚಿತ್ರದಲ್ಲಿ ಬಿಝಿ. ಹಿಮಾಯತ್ ಖಾನ್ ನಿರ್ದೇಶನದ ಜಸ್ಟ್ ಆಕಸ್ಮಿಕದಲ್ಲಿ ಸೈಂಟಿಸ್ಟ್, ಸೀನಿ ನಿರ್ದೇಶನದಲ್ಲಿ ಪಲ್ಲವಿ ಟಾಕೀಸ್‌ನಲ್ಲಿ ಪೊಲೀಸ್ ಆಫೀಸರ್, ಶ್ರೀನಾಥ್‌ರ 'ಲವ್ ಆನ್ ಎನ್‌ಎಚ್ 4', ವೇಮಗಲ್ ಜಗನ್ನಾಥ್‌ರಾವ್‌ರ ಅನ್ವೇಷಿ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಆಗಿ ನಟಿಸಿರುವ ತಿಲಕ್ ಈ ವರ್ಷ ಆರು ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ಹೊಸ ಚಿತ್ರಕ್ಕೆ ಸಹಿ ಮಾಡದೆ ಪ್ರಮೋಷನ್‌ಗೆ ರೆಡಿಯಾಗುತ್ತಿದ್ದಾರೆ.
ತಿಲಕ್ ಮತ್ತು ಸಂಜನಾ, 'ಗಂಡ ಹೆಂಡತಿ' ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಅದಾದ ನಂತರ ಬಿಗ್ ಬಾಸ್ ರಿಯಾಲಿಟಿ ಷೋ ಮೂಲಕ ಜನಪ್ರಿಯತೆ ಗಳಿಸಿದ ತಿಲಕ್, ಅಲ್ಲಿಂದ ಹೊರಬಂದ ತಕ್ಷಣ ಅನೇಕ ಆಫರ್‌ಗಳು ಬಂದರೂ ನಿಧಾನವಾಗಿ ಮುಂದಕ್ಕೆ ಹೆಜ್ಜೆ ಇಟ್ಟರು. ಈಗ ನಟಿ ಸಂಜನಾ ಮತ್ತು ತಿಲಕ್ ಒಟ್ಟಿಗೆ 'ಜಸ್ಟ್ ಆಕಸ್ಮಿಕ' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವಿನ್ನೂ ಬಿಡುಗಡೆಯಾಗಬೇಕಿದೆ.
- ಪದ್ಮಾ ಶಿವಮೊಗ್ಗ