-ಎಚ್.ಮಹೇಶ್
ಬಹು ನಿರೀಕ್ಷೆಯ ರಥಾವರ ಚಿತ್ರ ಪ್ರೇಕ್ಷಕನ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಟಿ ವಿಚಾರದಲ್ಲಿ ಉಗ್ರಂ ಚಿತ್ರದ ಸೀಕ್ವೆಲ್‌ನಂತೆ ಕಂಡು ಬಂದರೂ ರಥಾವರ ಮಾಸ್ ಪ್ರೇಕ್ಷಕರನ್ನು ಖುಷಿ ಪಡಿಸಿದೆ. ಭುವನ್ ಗೌಡರ ಅವರ ಕ್ಯಾಮೆರಾ ವರ್ಕ್, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಮುರಳಿ ನಟನೆ ಪ್ರೇಕ್ಷಕರನ್ನು ಮೋಡಿಗೊಳಿಸುತ್ತದೆ.
ರಥಾವರ ಚಿತ್ರದಲ್ಲಿ ಶ್ರೀ ಮುರಳಿ ರಥ ಪಾತ್ರಧಾರಿ. ಎಂಎಲ್‌ಎ ಮಣಿಕಂಠ (ರವಿಶಂಕರ್)ನ ಸಾಕು ಮಗ. ತನ್ನ ಬಾಸ್‌ಗೋಸ್ಕರ ಏನು ಬೇಕಾದರೂ ಮಾಡುವ ನಿಯತ್ತಿನ ಹುಡುಗ. ಇಂಥಹ ಹುಡುಗನಿಗೆ ಮಣಿಕಂಠ ಸತ್ತ ಮಂಗಳ ಮುಖಿಯ ಹೆಣ ನೋಡಬೇಕು ಎಂದು ಹೇಳುತ್ತಾನೆ. ಈ ಅಸೈನ್‌ಮೆಂಟ್ ಅನ್ನು ರಥನಿಗೆ ವಹಿಸಿಕೊಡಲಾಗುತ್ತದೆ. ಇದನ್ನು ಯಶಸ್ವಿಯಾಗಿ ಮಾಡುತ್ತಾನಾ...ಇಲ್ಲವಾ ಎಂಬುದೇ ಚಿತ್ರದ ಇಂಟೆರೆಸ್ಟಿಂಗ್ ಪಾಯಿಂಟ್.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಮಂಗಳ ಮುಖಿಯರ ಬಗ್ಗೆ ಇದುವರೆಗೂ ತೆರೆಮೇಲೆ ಬಂದಿರದ ಹೊಸ ಕತೆಯನ್ನು ಹೆಣೆಯುವ ಮೂಲಕ ಪ್ರೇಕ್ಷಕನಿಗೆ ಅಚ್ಚರಿ ಮೂಡಿಸುತ್ತಾರೆ. ಇಂಟರ್‌ವಲ್ ಪಾಯಿಂಟ್‌ಗೆ ಸಸ್ಪೆನ್ಸ್ ಕೊಡುತ್ತಾರೆ.
ಚಿತ್ರದ ಟೈಟಲ್ ಕಾರ್ಡ್ , ಹೀರೋ ಇಂಟ್ರಡಕ್ಷನ್ ದೃಶ್ಯವನ್ನು ಕ್ರಿಯೇಟಿವ್ ಆಗಿ ಚಿತ್ರಿಸಿದ್ದಾರೆ. ಸಾಹಸ ಸಂಯೋಜನೆಯಲ್ಲಿ ಹೊಸ ತನ ಇದೆ. ಅದರಲ್ಲೂ ನೀರಿನ ಕಾಲುವೆ ಒಳಗೆ ನಡೆಯುವ ಫೈಟ್, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಕತ್ತಲು ಹಾಗೂ ಮಳೆಯನ್ನು ಬಳಸಿಕೊಂಡು ಮಾಡುವ ಫೈಟ್ ಎಲ್ಲವೂ ಇಲ್ಲಿ ಹೊಸ ರೀತಿಯಲ್ಲಿದೆ. ನಾಯಕ ಶ್ರೀ ಮುರಳಿ ರಥ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಚಿತ್ರದ ಡ್ರಾ ಬ್ಯಾಕ್ ನಾಯಕಿ ಪಾತ್ರ. ಚಿತ್ರ ವೇಗವಾಗಿ ಓಡುತ್ತಿರುತ್ತದೆ, ನಾಯಕಿ ಎಂಟ್ರಿಯಿಂದ ವೇಗದ ಕಡಿಮೆ ಆಗಿ ಬೋರ್ ಹೊಡೆಸುತ್ತದೆ. ನಾಯಕಿ ಟ್ರ್ಯಾಕ್ ಚಿತ್ರಕ್ಕೆ ಮೈನಸ್ ಪಾಯಿಂಟ್. ಆದರೆ ನಾಯಕಿ ಪಾತ್ರಧಾರಿ ರಚಿತಾ ರಾಮ್ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ನಾಯಕ ತನ್ನ ಕಣ್ಣು ಕಳೆದುಕೊಳ್ಳುವ ಸಂದರ್ಭ ಬಂದಾಗ ನಾಯಕನ ಜತೆ ಮಾತನಾಡುವ ದೃಶ್ಯ ಸೂಪರ್. ಆದರೆ ಅವರ ಕಾಸ್ಟ್ಯೂಮ್‌ಗಳು ಯಾಕೋ ಈ ಚಿತ್ರದಲ್ಲಿ ಗಮನ ಸೆಳೆದಿಲ್ಲ. ರವಿಶಂಕರ್ ಎಂದಿನಂತೆ ನಟನೆಯಲ್ಲಿ ಅಬ್ಬರಿಸಿದ್ದಾರೆ. ಮಂಗಳ ಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೋಕಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಆಸ್ತಿ. ಮತ್ತೊಬ್ಬ ಖಳ ನಟ ಉದಯ್ ಕೂಡ ಗಮನ ಸೆಳೆಯುತ್ತಾರೆ. ಚಿತ್ರದ ಹಾಡುಗಳು ಹಾಗೂ ನಾಯಕಿ ಎಂಟ್ರಿ ದೃಶ್ಯಗಳನ್ನು ಟ್ರಿಮ್ ಮಾಡಿದರೆ ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ನಿರ್ದೇಶಕ ಚಂದ್ರ, ಇಲ್ಲಿ ಮಾತ್ರ ಸಿದ್ಧ ಸೂತ್ರಕ್ಕೆ ಅಂಟಿದ್ದಾರೆ ಎಂದು ಅನಿಸುತ್ತದೆ.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ನಾಯಕಿ ಪಾತ್ರವನ್ನು ಬಿಟ್ಟು ಉಳಿದ ಎಲ್ಲಾ ಪಾತ್ರಗಳ ರಚನೆಯನ್ನು ಕ್ರಿಯೇಟಿವ್ ಆಗಿ ರಚಿಸಿ ಸಿನಿಮಾ ನಿರ್ದೇಶಕನ ಮಾಧ್ಯಮ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಉಗ್ರಂ ಚಿತ್ರದ ನಂತರ ಶ್ರೀ ಮುರಳಿಗೆ ರಥಾವರ ಮತ್ತೊಂದು ಯಶಸ್ಸು ತಂದು ಕೊಡುವ ಭರವಸೆ ಹುಟ್ಟಿಸಿದೆ.
ಚಿತ್ರ : ರಥಾವರ