-ಶರಣು ಹುಲ್ಲೂರು
ಅತೀ ಚಿಕ್ಕ ವಯಸ್ಸಿನ ನಿರ್ದೇಶಕ ಅನ್ನುವ ಕಾರಣಕ್ಕೆ ಒಂಬತ್ತು ವರ್ಷಗಳ ಹಿಂದೆ ತೆರೆಕಂಡ 'ಕೇರಾಫ್ ಫುಟ್‌ಪಾತ್' ಚಿತ್ರ ಕುತೂಹಲ ಮೂಡಿಸಿತ್ತು. ಈಗ ಅದೇ ಶೀರ್ಷಿಕೆ ಹೊತ್ತು ತೆರೆಕಂಡ
ಚಿತ್ರ ಕೂಡ ಆಸ್ಕರ್ ರೇಸ್‌ನಲ್ಲಿದೆ. ಹೀಗಾಗಿ ಈ ಸಿನಿಮಾ ಕೂಡ ನಿರೀಕ್ಷೆಯ ಯಾದಿಯಲ್ಲಿತ್ತು. ಪ್ರೇಕ್ಷಕರ ನಿರೀಕ್ಷೆಯನ್ನು
ಹುಸಿಗೊಳಿಸಿಲ್ಲ ನಿರ್ದೇಶಕ ಕಿಶನ್. ಚಿತ್ರಕತೆಯಲ್ಲಿ ಕ್ರೈಂ, ಸೆಂಟಿಮೆಂಟ್, ಲವ್ ಮತ್ತು ಮನರಂಜನೆ ಬಹುತೇಕ ಅಂಶ ಬೆರೆಸಿ ಫುಟ್‌ಪಾತ್‌ನಲ್ಲಿ ಬಿಸಿ ಬಿಸಿ ಬಿಸಿಬೆಳೆಬಾತ್ ನೀಡಿದ್ದಾರೆ.
ಸಿನಿಮಾವನ್ನೇ ಬಹುತೇಕ ಧ್ಯಾನಿಸುವ ಕಿಶನ್, ಹಲವು ತಂತ್ರಜ್ಞಾನವನ್ನು ಕಲಿತಿದ್ದಾರೆ. ಅದನ್ನು ಈ ಸಿನಿಮಾದಲ್ಲಿ ಅಳವಡಿಸಿದ್ದಾರೆ. ಹೀಗಾಗಿ ವಿಭಿನ್ನವಾಗಿ ಚಿತ್ರ ಕಾಣುತ್ತದೆ. ಇಲ್ಲಿ ಬಾಲಾಪರಾಧಿಗಳ ಕತೆ ಇದ್ದರೂ, ಅದರಾಚೆ ಧ್ವನಿಯೂ ಅಲ್ಲಿದೆ. ತಂತ್ರಜ್ಞಾನ ಮತ್ತು ಕತೆಯ ಹೊಂದಾಣಿಕೆಯಿಂದಾಗಿ ಸಾಮಾನ್ಯ ನೋಡುಗನಿಗೂ ಮತ್ತು ಸಿನಿಮಾವನ್ನೇ ಅಭ್ಯಾಸ ಮಾಡುವವನಿಗೂ ಏಕಕಾಲಕ್ಕೆ ಚಿತ್ರ ನಿಲುಕುತ್ತದೆ.
ಕತೆ ಸಿಂಪಲ್ ಅನಿಸಿದರೂ, ಅದನ್ನು ಹೇಳಿದ ರೀತಿ ವಿಭಿನ್ನವಾಗಿದೆ. ಅದಕ್ಕೆ ತಕ್ಕ ಪಾತ್ರಧಾರಿಗಳ ಆಯ್ಕೆಯೂ ಆಗಿರುವುದರಿಂದ, ಪ್ರತಿ ದೃಶ್ಯವೂ ಇಷ್ಟವಾಗುತ್ತದೆ. ಚಿತ್ರಕತೆಯಲ್ಲಿಯ ಕುತೂಹಲ, ಸಂಭಾಷಣೆಯಲ್ಲಿ ಚುರುಕುತನವು ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ. ಸಂಭಾಷಣೆ ಬರೆದಿರುವ ಶ್ಯಾಮ್ ಪ್ರಸಾದ್ ಅವರಿಗೆ ಕಾನೂನು ತಿಳುವಳಿಕೆಯೂ ಇರುವುದರಿಂದ ಆಭಾಸ ಆಗದಂತೆ ನೋಡಿಕೊಂಡಿದ್ದಾರೆ.
ಬಹುತೇಕ ಸಿನಿಮಾ ಮೂರು ಹುಡುಗರು ಮತ್ತು ಒಂದು ಹುಡುಗಿಯ ಸುತ್ತ ಇದೆ. ಐಪಿಎಸ್ ಕನಸು ಕಾಣುವ ಕೃಷ್ಣ (ಕಿಶನ್), ಮೆಕಾನಿಕ್ ವಿಜಿ (ದೀಪ್ ಪಾಠಕ್), ಕಾಲೇಜ್ ಸ್ಟೂಡೆಂಟ್ ಗೀತಾ (ಅವಿಕಾ ಗೋರ್) ಮತ್ತು ಉಂಡಾಡಿ ಗುಂಡ ಡಿಂಗ್ರಿ (ಡಿಂಗ್ರಿ ನರೇಶ್) ಈ ನಾಲ್ವರು ಫ್ರೆಂಡ್ಸ್. ಕೃಷ್ಣನಿಗೆ ಐಪಿಎಸ್ ಕನಸು. ವಿಜಿ ಮತ್ತು ಗೀತಾ ಲವರ್ಸ್. ಡಿಂಗ್ರಿಗೆ ಸಣ್ಣ ಪುಟ್ಟ ಕಳ್ಳತನದ ಹುಚ್ಚು. ಈ ನಾಲ್ವರ ಬದುಕಿನಲ್ಲಿ ಒಂದು ಘಟನೆ ನಡೆಯುತ್ತದೆ. ಅದಕ್ಕಾಗಿ ಅವರು ಪೊಲೀಸ್ ಆಫೀಸರ್‌ನನ್ನು ಮುಗಿಸಲು ಹೊಂಚು ಹಾಕುತ್ತಾರೆ. ಪೊಲೀಸ್‌ನನ್ನು ಸಾಯಿಸದ ನಂತರ ಅವರ ಜೀವನ ಏನಾಗುತ್ತದೆ, ಅದರಿಂದ ಪಾರಾಗಲು ಅವರು ಇನ್ನೇನು ತಪ್ಪು ಮಾಡುತ್ತಾರೆ. ಹೀಗೆ ಕತೆ ಸಾಗುತ್ತದೆ.
ನಾಲ್ವರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿನ್ನೆಲೆ ಸಂಗೀತವೂ ಪೂರಕವಾಗಿದೆ. ಪುಟ್ಟ ಪಾತ್ರದಲ್ಲಿ ಧಮೇಂದ್ರ ಅರಸ್, ಯತಿರಾಜ್ ಕಾಣಿಸಿದ್ದರೂ, ಅದಕ್ಕೆ ಜೀವ ತುಂಬಿದ್ದಾರೆ. ಪೊಲೀಸ್ ಆಫೀಸರ್ ಆಗಿ ಜೆಕೆ ಮತ್ತು ಖಳ ನಾಯಕನಾಗಿ ಕರಿ ಸುಬ್ಬು ಇಷ್ಟವಾಗುತ್ತಾರೆ.
ಬಾಲಾಪರಾಧಿಗಳ ಅಪರಾಧದ ಬಗ್ಗೆ ಚರ್ಚಿಸಿದಷ್ಟು, ಅವರ ಪರಿವರ್ತನೆಯ ದಾರಿಗಳನ್ನೂ ಸಿನಿಮಾ ಹೇಳುವಂತಿದ್ದರೆ, ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. ಮನರಂಜನೆಗೆ ಸ್ವಲ್ಪ ಕೊರತೆ ಕಾಣಿಸಿದರೂ, ಅದರಾಚೆಯೂ ಯೋಚಿಸುವ ನೋಡುಗರಿಗೆ ಸಿನಿಮಾ ಆಪ್ತವಾಗುತ್ತದೆ.
ಕನ್ನಡ : ಕೇರಾಫ್ ಫುಟ್‌ಪಾತ್