-ಎಚ್. ಮಹೇಶ್
ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ಸ್ಪೆಕ್ಟರ್ 007 ಪ್ರೇಕ್ಷಕರಿಗೆ ಬರೀ ಅಚ್ಚರಿಗಳನ್ನೇ ಕೊಟ್ಟಿದೆ. ಈ ಬಾರಿ ಗನ್‌ಗಳಿಗೆ ಹೆಚ್ಚು ಕೆಲಸ ಇಲ್ಲ. ಬರೀ ಬಿಲ್ಡಿಂಗ್‌ಗಳೇ ಬಿದ್ದು ಸದ್ದು ಮಾಡುತ್ತವೆ. ಚಿತ್ರದ ಮೊದಲು ಜೇಮ್ಸ್ ಬಾಂಡ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅರೆ ಬೆತ್ತಲಾಗಿ ಗ್ಲಾಮ್ ಗರ್ಲ್ ಜತೆ ರೊಮಾನ್ಸ್ ಮಾಡುತ್ತಾರೆ. ಹಾಡಿನ ಡಾನ್ಸ್ ಮುಗಿಯುತ್ತಿದ್ದಂತೆ ಬಾಂಡ್ ಗನ್ ಹಿಡಿದು ಸ್ಟೇಡಿಯಂ ಸ್ಫೋಟಿಸಲು ಸಂಚು ರೂಪಿಸುತ್ತಿದ್ದವರ ಮೇಲೆ ಅಟ್ಯಾಕ್ ಮಾಡುತ್ತಾರೆ. ಅಲ್ಲಿಂದ ಬಿಲ್ಡಿಂಗ್‌ಗಳು ಕೆಳಗೆ ಉರುಳುವ ದೃಶ್ಯಗಳು ಪ್ರಾರಂಭವಾಗುತ್ತವೆ.
ಇಂದಿನ ಪ್ರೇಕ್ಷಕರಿಗೆ ಗೊತ್ತಿಲ್ಲದ ಗ್ಯಾಜೆಟ್‌ಗಳೇನೂ ಚಿತ್ರದಲ್ಲಿ ಹೆಚ್ಚಾಗಿ ಇಲ್ಲ. ಆದರೆ ಬಾಂಡ್ ಕಾರಿನಲ್ಲಿರುವ ಗನ್, ಬೆಂಕಿ ಎಲ್ಲವೂ ಇದೆ. ನಿರ್ದೇಶಕ ಸ್ಯಾಂ ಮೆಂಡೆಸ್, ಜೇಮ್ಸ್ ಬಾಂಡ್‌ರನ್ನು ಮೆಕ್ಸಿಕೋ ಸಿಟಿ, ರೋಂ, ಲಂಡನ್‌ಗೆ ಕಳುಹಿಸುತ್ತಾರೆ. ಚಿತ್ರದ ಪ್ರಾರಂಭದಲ್ಲೇ ಮೆಕ್ಸಿಕೋ ಸಿಟಿಯನ್ನು ತೋರಿಸಿರುವ ರೀತಿ ಸೊಗಸಾಗಿದೆ. ಲಕ್ಷಾಂತರ ಜನರು ಸೇರಿರುವ ಸಿಟಿಯಲ್ಲಿ ಹೆಲೆಕಾಪ್ಟರ್ ಒಳಗೆ ಖಳ ನಾಯಕನ ಜತೆ ಬಾಂಡ್ ಫೈಟ್ ಮಾಡುವಾಗ ಪ್ರೇಕ್ಷಕನ ಎದೆ ನಡುಗುತ್ತದೆ. ಅದೇ ರೀತಿ ಎದೆ ನಡುಗುವ ಸಾಕಷ್ಟು ಸಾಹಸಮಯ ದೃಶ್ಯಗಳು ಚಿತ್ರದಲ್ಲಿವೆ. ಚಿತ್ರದ ಕ್ಲೈಮಾಕ್ಸ್‌ನಲ್ಲಿ ಬಿಲ್ಡಿಂಗ್ ಬೀಳುವ ದೃಶ್ಯ ಅಂತೂ ಭಯಾನಕವಾಗಿ ಚಿತ್ರಿಸಲಾಗಿದೆ.
ಬಾಂಡ್ ಪಾತ್ರಧಾರಿ ಡೇನಿಯಲ್‌ಗೆ ವಯಸ್ಸಾಗಿದೆ. ಜಿಮ್ ಮಾಡಿ ದೇಹವನ್ನು ಚೆನ್ನಾಗಿ ಮೆಂಟೈನ್ ಮಾಡಿದ್ದಾರೆ. ಮೋನಿಕಾ ಬಲೂಜಿ ಜತೆ ಅವರಿಗೆ ಕಿಸ್ಸಿಂಗ್ ದೃಶ್ಯಗಳಿವೆ. ಆಗ ಕ್ಲೋಸ್ ಅಪ್‌ನಲ್ಲಿ ಮೋನಿಕಾರನ್ನು ತೋರಿಸುತ್ತಾರೆ. ಅವರಿಗೂ ವಯಸ್ಸಾಗಿರುವುದು ಗೊತ್ತಾಗುತ್ತದೆ. ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗ್ಲಾಮ್ ಗರ್ಲ್ ಸೆಡ್ಯೂಎಕ್ಸ್‌ಗೆ ಹೆಚ್ಚಿನ ಅವಕಾಶ ಇದೆ. ಬಾಂಡ್‌ಗೆ ತಕ್ಕ ಜೋಡಿ. ಈ ಚಿತ್ರದಲ್ಲಿ ಕನ್ನಡ ಪ್ರೇಕ್ಷಕ ಊಹಿಸಲು ಸಾಧ್ಯವಾಗದ ಸಾಹಸಮಯ ದೃಶ್ಯಗಳಿವೆ. ಆದರೆ ಬಾಂಡ್ ತುಂಬಾ ಇಂಟಿಲಿಜೆಂಟ್ ಎಂಬುದು ಈ ಚಿತ್ರದಲ್ಲಿ ನಿರೂಪಿತವಾಗುವುದಿಲ್ಲ. ನಿರ್ದೇಶಕರು ಬರೀ ಆ್ಯಕ್ಷನ್ ದೃಶ್ಯಗಳಿಗೆ ಮಾತ್ರ ಹೆಚ್ಚು ಮನ್ನಣೆ ಕೊಟ್ಟಿದ್ದಾರೆ.
ಚಿತ್ರದ ಅವಧಿ ಜಾಸ್ತಿ ಇದೆ. ಯಾವ ಬಾಂಡ್ ಸಿನಿಮಾ ಕೂಡ ಇಷ್ಟು ಅವಧಿಯಲ್ಲಿ ಮೂಡಿ ಬಂದಿರಲಿಲ್ಲ. ಸೆಕೆಂಡ್ ಹಾಫ್‌ನಲ್ಲಿ ಸ್ವಲ್ಪ ಬೋರ್ ಆಗುತ್ತದೆ. ಬಹಳಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಬಾಂಡ್ ಪ್ರೇಮಿಗಳು ಒಂದ್ಸಾರಿ ಚಿತ್ರ ನೋಡಿ ಸಾಹಸ ದೃಶ್ಯಗಳನ್ನು ಕಣ್‌ತುಂಬಿಕೊಳ್ಳಬಹುದು.
ಚಿತ್ರ : ಸ್ಪೆಕ್ಟರ್ 007