ಮಧುರ ಸ್ವಪ್ನ ಸಿನಿಮಾದ ಮೂಲಕ ಕೀರ್ತನಾ ಸಿನಿಮಾ ರಂಗಕ್ಕೆ ಆಗಮಿಸಿದ್ದಾರೆ. ಮೊದಲ ಚಿತ್ರದಲ್ಲೇ ಅವರು ವಿಭಿನ್ನ ಪಾತ್ರ ಪೋಷಿಸುತ್ತಿದ್ದಾರೆ.
'ನನ್ನದು ಇಲ್ಲಿ ಕಾಲೇಜ್ ಹುಡುಗಿಯ ಪಾತ್ರ. ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ನಾನು, ಅಪ್ಪ ಅಮ್ಮನ ಮಾತಿನಂತೆ ನಡೆದುಕೊಳ್ಳುತ್ತೇನೆ. ಅಂತಹ ಹುಡುಗಿಯ ಬದುಕಿನಲ್ಲಿ ಒಂದು ಘಟನೆ ನಡೆಯುತ್ತದೆ, ಅದು ಅವಳ ಜೀವನಕ್ಕೆ ಏನೆಲ್ಲ ತಿರುವುಗಳನ್ನು ನೀಡುತ್ತದೆ ಅನ್ನುವ ರೋಚಕ ಕತೆ' ಇದೆ ಅಂತಾರೆ ಕೀರ್ತನಾ.
ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಪಾಲಕರಿಗಾಗಿ ಮಕ್ಕಳು ಏನೆಲ್ಲ ತ್ಯಾಗ ಮಾಡಬಲ್ಲರು ಅನ್ನುವುದನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ರವಿರತ್ನ. ಚಿತ್ರಕ್ಕೆ ತುಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ಕಾಪಿಕಾಡ್ ನಾಯಕ. ಇದು ಕೂಡ ಇವರ ಕನ್ನಡದ ಚೊಚ್ಚಲು ಸಿನಿಮಾ. ಈ ಮೊದಲು ತುಳು ಚಿತ್ರರಂಗದಲ್ಲಿ ಏಳೆಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅರ್ಜುನ್, 'ಮಧುರ ಸ್ವಪ್ನದ ಮೂಲಕ ಹೀರೋ ಆಗಿದ್ದಾರೆ. ಸಂಜೀವ್ ಕುಮಾರ್ ಚಿತ್ರಕ್ಕೆ ಹಣ ಹೂಡಿದ್ದು, ವಿನಯಪ್ರಸಾದ್, ಅವಿನಾಶ್, ಮುಖ್ಯಮಂತ್ರಿ ಚಂದ್ರು ಹೀಗೆ ಬಹುದೊಡ್ಡ ತಾರಾ ಬಳಗವೇ ಇದೆ.
ಕನ್ನಡ ಸಿನಿಮಾ ರಂಗಕ್ಕೆ ಹೊಸ ನಾಯಕಿಯರ ಆಗಮನ ಆಗುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ ಕೀರ್ತನಾ ಪೊಡ್ವಾಲ್.