ನಟರಿಗೆ ನಟನೆ ಹೊರತುಪಡಿಸಿ ಬೇರೆ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದು ವಿಶೇಷವೇ ಸರಿ. ಈಗ ನವೀನ್ ಕೃಷ್ಣ ಮ್ಯಾರಥಾನ್‌ನಲ್ಲಿ ಭಾಗವಹಿಸಿ, 21 ಕಿ.ಮೀ. ಓಡಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ನೈಸ್ ರಸ್ತೆಯಲ್ಲಿ ಏರ್ಪಡಿಸಲಾಗಿದ್ದ ಮ್ಯಾರಥಾನ್‌ನಲ್ಲಿ 10 ಕಿ. ಮೀ. ಓಡಲು 1 ಗಂಟೆ 18 ನಿಮಿಷ ತೆಗೆದುಕೊಂಡಿದ್ದರು. ಇದಾದ ನಂತರ ಒಂದು ತಿಂಗಳ ಹಿಂದೆ 15 ಸಾವಿರ ಜನರು ಪಾಲ್ಗೊಂಡ ಮ್ಯಾರಥಾನ್‌ನಲ್ಲೂ ನವೀನ್ ಪಾಲ್ಗೊಂಡಿದ್ದರು. 'ಬೆಂಗಳೂರು ಮ್ಯಾರಥಾನ್ ಅನ್ನು ಕಂಠೀರವ ಸ್ಟೇಡಿಯಂನಿಂದ ಅಲಸೂರು ಲೇಕ್‌ವರೆಗೆ ಆಯೋಜಿಸಲಾಗಿತ್ತು. ಆಗ 21 ಕಿ.ಮೀ. ದೂರ ಓಡಲು ಮೂರು ಗಂಟೆ ಬೇಕಾಯ್ತು. ಮೊದಲ ಬಾರಿಗೆ ಇಷ್ಟು ದೂರ ಓಡಿದ್ದೆ. ಹಾಗಾಗಿ ನನಗೆ ಹೆಚ್ಚು ಸಮಯ ಬೇಕಾಯ್ತು. ಭಾನುವಾರ (ಡಿ.13) ನಡೆದಿದ್ದು ಅಭಿನಯ್ ಮ್ಯಾರಥಾನ್. ಇದರಲ್ಲಿ 21 ಕಿ.ಮೀ. ದೂರವನ್ನು ಕ್ರಮಿಸಲು 2 ಗಂಟೆ 55 ನಿಮಿಷ ತೆಗೆದುಕೊಂಡೆ. ಸುಮಾರು 5 ಸಾವಿರ ಜನರು ಭಾಗಿಯಾಗಿದ್ದರು. ನಾನು ಶನಿವಾರ ಪೂರ್ತಿ ಶೂಟಿಂಗ್‌ನಲ್ಲಿ ಬಿಝಿ ಇದ್ದೆ. ರೆಸ್ಟ್ ಇರಲಿಲ್ಲ. ಇಲ್ಲದಿದ್ದರೆ ಇನ್ನೂ ಕಡಿಮೆ ಸಮಯದಲ್ಲಿ ಓಡಬಹುದಾಗಿತ್ತು' ಎಂದಿದ್ದಾರೆ ನವೀನ್.
ಗೆಳೆಯರ ಒತ್ತಾಯದ ಮೇಲೆ ಮ್ಯಾರಥಾನ್‌ನಲ್ಲಿ ಓಡಲು ಪ್ರಾರಂಭ ಮಾಡಿರುವ ನವೀನ್ ಕೃಷ್ಣ ಕೆಲವೇ ತಿಂಗಳಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ. ಚೆನ್ನೈ, ಮುಂಬಯಿ, ಹೈದರಾಬಾದ್ ಮತ್ತಿತರ ನಗರಗಳಿಂದ ನೂರಾರು ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದಾರೆ. ಇವರೆಲ್ಲರಲ್ಲಿ ನವೀನ್ ಮಾಡಿರುವ ಸಾಧನೆ ವಿಶೇಷ.
ಪ್ರತಿದಿನ 8-10 ಕಿ.ಮೀ. ದೂರ ಓಡುವ ಅಭ್ಯಾಸ ನವೀನ್‌ರದ್ದು. 'ಅಂತಿಮ ವರ್ಷದ ಡಿಗ್ರಿ ಓದುವಾಗ ಪ್ರಾರಂಭಗೊಂಡ ಓಟ ಇಲ್ಲಿಯವರೆಗೆ ನಿಂತಿಲ್ಲ. ಸಣ್ಣಗಾಗಲು ಮೊದಲು ಡ್ಯಾನ್ಸ್ ಮಾಡೋ ಅಭ್ಯಾಸ ಮಾತ್ರ ಇತ್ತು. ನಂತರ ಜಾಗಿಂಗ್ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ' ಎನ್ನುತ್ತಾರೆ ಅವರು. ಹಗ್ಗದ ಕೊನೆ ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಈಗ ಇನ್ನೊಂದು ವಿಭಿನ್ನ, ಏಕೈಕ ನಟನಾಗಿ 'ಆ್ಯಕ್ಟರ್'ನಲ್ಲಿ ಅಭಿನಯಿಸುತ್ತಿದ್ದಾರೆ.
-ಪದ್ಮಾ ಶಿವಮೊಗ್ಗ
ಅಂತಿಮ ವರ್ಷದ ಡಿಗ್ರಿ ಓದುವಾಗ ಪ್ರಾರಂಭಗೊಂಡ ನವೀನ್ ಕೃಷ್ಣರ ಓಟ ಇಲ್ಲಿಯವರೆಗೆ ನಿಂತಿಲ್ಲ. ಇತ್ತೀಚೆಗೆ ಅನೇಕ ಮ್ಯಾರಥಾನ್‌ಗಳಲ್ಲಿ ಇವರು ಭಾಗವಹಿಸಿ ವಿಶೇಷತೆ ಮೆರೆದಿದ್ದಾರೆ.