ಬಾಗಲಕೋಟ: ಜಿಲ್ಲೆಯ ಜಾನುವಾರು ರಕ್ಷಕರಿಗೆ ಈಗ ಸಂಕಷ್ಟದ ಕಾಲ, ಬ್ರೂಸ್ಲೋಸಿಸ್ ಎಂಬ ಪ್ರಾಣಿಗಳ ಸೋಂಕು ಪಶು ಸಂಗೋಪನೆ ಇಲಾಖೆ ಸಿಬ್ಬಂದಿಯನ್ನು ಕಾಡುತ್ತಿದೆ. ಜಾನುವಾರುಗಳಿಗೆ ಬ್ರೂಸ್ಲೋಸಿಸ್ ರೋಗಕ್ಕೆ ಚಿಕಿತ್ಸೆ ನೀಡುವ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ರೋಗದ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ ಒಬ್ಬ ಪಶು ವೈದ್ಯಾಧಿಕಾರಿ ಈಗ ಚೇತರಿಸಿಕೊಂಡಿದ್ದಾರೆ. ಇನ್ನೂ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಏನಿದು ಬ್ರೂಸ್ಲೋಸಿಸ್ ? ಬ್ರೂಸ್ಲೋಸಿಸ್ ಎನ್ನುವುದು ದನ, ಕರು ಹಾಗೂ ಕುರಿಗಳಲ್ಲಿ ಕಂಡು ಬರುವ ರೋಗ. ಕನ್ನಡದಲ್ಲಿ ಇದಕ್ಕೆ ಕಂದು ರೋಗ ಎಂಬ ಹೆಸರಿದೆ. ಈ ಕಾಯಿಲೆಯಿಂದ ಜಾನುವಾರುಗಳು ಪದೇ ಪದೆ ಜ್ವರದ ಬಾಧೆಗೀಡಾಗುತ್ತವೆ. ಕಾಲು ನೋವಿನಿಂದ ಬಳಲುತ್ತವೆ. ಮರಿಗಳನ್ನು ಈಯುವ ಸಂದರ್ಭದಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷ ಕಂಡುಬರುವ ಕಾಯಿಲೆಗೆ ಔಷಧಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪಶು ನಿರೀಕ್ಷಕರು, ಡಿ ಗ್ರೇಡ್ ಸಿಬ್ಬಂದಿ ಹಾಗೂ ಪಶುವೈದ್ಯರು ಸಾಮಾನ್ಯವಾಗಿ ಚಿಕಿತ್ಸೆ ನೀಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಾಕಿರುವ ಜಾನುವಾರುಗಳಲ್ಲಿ ಈ ರೋಗ ಸಾಮಾನ್ಯ. ತಗುಲಿದ ಸೋಂಕು ಪಶುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಾಯಿಲೆಯ ಬ್ಯಾಕ್ಟೀರಿಯಾ ಮನುಷ್ಯನ ದೇಹ ಪ್ರವೇಶಿಸಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆಯಿದೆ. ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ಈ ಕಾರಣದಿಂದ ಅಸ್ವಸ್ಥರಾಗಿದ್ದಾರೆ. ಪ್ರಾಣಿಗಳ ರಕ್ತದ ಮೂಲಕ ಬ್ಯಾಕ್ಟೀರಿಯಾ ಮನುಷ್ಯನ ದೇಹ ಪ್ರವೇಶಿಸುತ್ತದೆ. ಪ್ರಾಣಿಗಳು ಹಾಗೂ ಮನುಷ್ಯನ ದೇಹದಲ್ಲಿ ಬ್ಯಾಕ್ಟೀರಿಯಾ ಒಂದೇ ಬಗೆಯಲ್ಲಿ ಕಿರಿಕಿರಿ ಉಂಟು ಮಾಡುತ್ತಿದೆ. ಒಬ್ಬ ಪಶು ವೈದ್ಯರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆದಿದ್ದರು. ಅವರ ರಕ್ತ ಪರೀಕ್ಷೆಯಲ್ಲಿ ಇದೀಗ ಬ್ಯಾಕ್ಟೀರಿಯಾ ಇಲ್ಲ ಎಂಬ ಮಾಹಿತಿ ಪತ್ತೆಯಾಗಿದೆ. ಇನ್ನುಳಿದ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಕ್ಟಿರಿಯಾ ದೇಹ ಪ್ರವೇಶಿದಾಗ ಮೈ ಕೈ ನೋವು, ಆಗಾಗ ಜ್ವರ ಕಂಡು ಬರುತ್ತದೆ. ಇದು ಬ್ರೂಸ್ಲೋಸಿಸ್ ರೋಗದ ಲಕ್ಷಣವಾಗಿದೆ. ಪರೀಕ್ಷೆ ನಡೆದಿದೆ ಬ್ರೂಸ್ಲೋಸಿಸ್ ಚಿಕಿತ್ಸೆ ನೀಡುವ ಸಿಬ್ಬಂದಿಗಾಗಿ ಇಲಾಖೆಯಿಂದ ಸೆ.24ರಂದು ಆರೋಗ್ಯ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದಲ್ಲೇ ಮೊದಲ ಬಾರಿ ಇಂತಹ ಸಾಮೂಹಿಕ ಆರೋಗ್ಯ ಪರೀಕ್ಷೆ ಜಿಲ್ಲೆಯಲ್ಲಿ ನಡೆದಿತ್ತು. ಇಲಾಖೆಯ 64 ವೈದ್ಯರು, 135 ಪಶು ನಿರೀಕ್ಷಕರು ಹಾಗೂ 63 ಡಿ ಗ್ರೇಡ್ ನೌಕರರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿತ್ತು. ಪಶುಗಳನ್ನು ರೋಗದ ಕ್ಯಾರಿಯರ್‌ಗಳು ಎಂದು ಕರೆಯಲಾಗುತ್ತದೆ. ಹೀಗಾಗಿ ಪ್ರತಿ ಬಾರಿ ಚಿಕಿತ್ಸೆ ನೀಡುವಾಗ ಎಚ್ಚರ ವಹಿಸಿದರೂ ಸೋಂಕು ತಗಲುವ ಭಯವಂತೂ ಇದ್ದೇ ಇರುತ್ತದೆ. ಲಸಿಕೆ ನೀಡುವ ಸಂದರ್ಭದಲ್ಲೂ ಮುಂಜಾಗ್ರತೆ ವಹಿಸಬೇಕಾಗುತ್ತದೆ. ---------- ಎಲ್ಲರಿಗೂ ರಿಸ್ಕ್ ಬ್ರೂಸ್ಲೋಸಿಸ್ ಬ್ಯಾಕ್ಟೀರಿಯಾ ಪ್ರಾಣಿಗಳಿಂದ ಮನುಷ್ಯನ ದೇಹ ಸೇರಿಕೊಳ್ಳುತ್ತದೆ. ಹೀಗಾಗಿ ಜನಸಾಮಾನ್ಯರೂ ಸೋಂಕಿನಿಂದ ಬಳಲುತ್ತಾರೆ. ಕೆಲವು ವರ್ಷಗಳ ಹಿಂದೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೋಂಕಿನಿಂದ ಕಂಗೆಡುತ್ತಿದ್ದರು. ಇತ್ತೀಚೆಗೆ ಪ್ರಮಾಣ ಕಡಿಮೆಯಾಗಿದೆ. ಆಕಳು, ಕುರಿಯ ಹಾಲನ್ನು ಕುದಿಸಿ ಸೇವಿಸದಿದ್ದರೆ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುವ ಸಾಧ್ಯತೆಯಿರುತ್ತದೆ. ಟೀ ಕುಡಿಯುವಾಗ ಹಸಿ ಹಾಲು ನೀರಿಗೆ ಸೇರ್ಪಡೆಯಾದರೆ ಬ್ಯಾಕ್ಟೀರಿಯಾ ದೇಹ ಪ್ರವೇಶಿಸಬಹುದು. ಇನ್ನು ಸೋಂಕು ಬಾಧಿತ ಕುರಿಯ ಮಾಂಸ ಸೇವಿಸಿದರೂ ಕಾಯಿಲೆ ಆವರಿಸಬಹುದು. ----- 6 ವಾರಗಳ ಚಿಕಿತ್ಸೆ ಸಾಮಾನ್ಯವಾಗಿ ಈ ಸೋಂಕು ತಗುಲಿರುವುದನ್ನು ರಕ್ತ ಪರೀಕ್ಷೆ ಮೂಲಕ ಖಚಿತಪಡಿಸಲಾಗುತ್ತದೆ. ಪರೀಕ್ಷೆ ನಂತರ ರಕ್ತದಲ್ಲಿ ಬ್ಯಾಕ್ಟೀರಿಯಾ ಸೇರ್ಪಡೆಗೊಂಡಿರುವುದು ಖಚಿತಗೊಳ್ಳುತ್ತದೆ. ರೋಗಿಗೆ ನಾಲ್ಕರಿಂದ ಆರು ವಾರಗಳವರೆಗೆ ಆ್ಯಂಟಿ ಬಯಾಟಿಕ್ ಮಾತ್ರೆ ನೀಡಬೇಕಾಗುತ್ತದೆ. ಮೈ ಕೈ ನೋವು, ಸೊಂಟ ನೋವು, ಒಂದು ವಾರ, 15 ದಿನದ ಅವಧಿವರೆಗೆ ಜ್ವರ ಕಂಡುಬಂದರೆ ಚಿಕಿತ್ಸೆ ಅಗತ್ಯ. ಇಂತಹ ಸಂದರ್ಭದಲ್ಲಿ ವೈದ್ಯರು ವಿಶ್ರಾಂತಿಗೆ ಸಲಹೆ ನೀಡುತ್ತಾರೆ. --------- ಇಲಾಖೆಯ ಐವರಲ್ಲಿ ಬ್ಯಾಕ್ಟೀರಿಯಾ ಸೋಂಕು ಕಂಡುಬಂದಿದೆ. ಈಗಾಗಲೇ ವೈದ್ಯರೊಬ್ಬರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನಾಲ್ವರು ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ. -ಸೋಮಸುಂದರ, ಉಪನಿರ್ದೇಶಕ, ಪಶು ಸಂಗೋಪನೆ ಇಲಾಖೆ ------- ಜನರಲ್ಲಿ ಹಾಲು ಕಾಯಿಸಿ ಕುಡಿಯಬೇಕು ಎಂಬ ಬಗ್ಗೆ ಅರಿವು ಮೂಡಿರುವುದರಿಂದ ಮೊದಲಿನಷ್ಟು ಪ್ರಕರಣಗಳು ವರದಿಯಾಗಿಲ್ಲ. ಬಹುತೇಕ ಜನರು ಹಸಿ ಹಾಲು ಕುಡಿಯುವುದರಿಂದ ಬ್ಯಾಕ್ಟೀರಿಯಾ ಬಾಧಿತರಾಗುತ್ತಾರೆ. -ಡಾ.ಗೋಪಾಲ ಬಜಾಜ, ಬಾಗಲಕೋಟ
↧
ಪಶು ರಕ್ಷಕರಿಗೆ ಕಾಡುತ್ತಿದೆ ಬ್ರೂಸ್ಲೋಸಿಸ್
↧