- ಹರೀಶ್ ಬಸವರಾಜ್ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸದ್ದು ಮಾಡಿದ್ದ ಕಿರಿಕ್ ಪಾರ್ಟಿ ಚಿತ್ರ, ಇನ್ನು ಥಿಯೇಟರ್‌ನಲ್ಲಿ ಸದ್ದು ಮಾಡಲಿದೆ. ಯೆಸ್, ವಿಭಿನ್ನ ಪ್ರಚಾರ, ಹಾಡು, ಟ್ರೇಲರ್‌ಗೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಚಿತ್ರತಂಡ ಗೆಲುವಿನ ವಿಶ್ವಾಸದಲ್ಲಿದ್ದು, ಈ ಸಿನಿಮಾ ಇಂದು (ಡಿ.30) ಬಿಡುಗಡೆ ಆಗುತ್ತಿದೆ. ಚಿತ್ರದ ಒಂದು ಹಾಡನ್ನು ಮಿಲಿಯನ್‌ಗಟ್ಟಲೆ ಜನ ವೀಕ್ಷಣೆ ಮಾಡಿದ್ದಾರೆ. ರಿಕ್ಕಿ ಖ್ಯಾತಿಯ ರಿಷಭ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಹೊರತುಪಡಿಸಿದರೆ ಉಳಿದ ಕಲಾವಿದರೆಲ್ಲರೂ ಹೊಸಬರೆ. ಇಷ್ಟಕ್ಕೂ ಈ ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು ಎಂಬ ಪ್ರಶ್ನೆಗೆ ರಕ್ಷಿತ್ ತಮ್ಮದೇ ಧಾಟಿಯಲ್ಲಿ ಉತ್ತರಿಸುತ್ತಾರೆ. 'ಈ ಚಿತ್ರದ ಕತೆ ಎಲ್ಲರಿಗೂ ಕನೆಕ್ಟ್ ಆಗುತ್ತೆ. ಪ್ರೇಕ್ಷಕರು ತಮ್ಮ ಕಾಲೇಜು ದಿನಗಳನ್ನು ಈ ಮೂಲಕ ನೆನಪಿಸಿಕೊಳ್ಳುತ್ತಾರೆ. ಹಾಗಂತ ಬರೀ ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಪೋಷಕರಿಗೂ ಬೇರೆ ಬೇರೆ ಕಾರಣಗಳಿಗಾಗಿ ಇದು ಕನೆಕ್ಟ್ ಆಗುತ್ತದೆ' ಎನ್ನುತ್ತಾರೆ. 2016ರಲ್ಲೇ ಈ ಸಿನಿಮಾವನ್ನು ತೆರೆಗೆ ತರಬೇಕು ಎಂಬುದು ಚಿತ್ರತಂಡದ ಆಸೆಯಾಗಿತ್ತಂತೆ. ಅದರಂತೆ ಈ ವರ್ಷದ ಕೊನೆಯಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಬಂದಿದೆ. ಹೊಸ ವರ್ಷವನ್ನು ಜನ 'ಕಿರಿಕ್ ಪಾರ್ಟಿ' ಸಿನಿಮಾ ನೋಡುವ ಮೂಲಕ ಬರಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬುದು ರಕ್ಷಿತ್ ವಿವರ. ಈ ಸಿನಿಮಾವನ್ನು ಪರಮ್ವಾ ಸ್ಟೂಡಿಯೋಸ್ ಸಂಸ್ಥೆಯಡಿ ರಕ್ಷಿತ್ ನಿರ್ಮಾಣ ಮಾಡಿದ್ದು, ಪುಷ್ಕರ್ ಫಿಲ್ಮ್ಸ್ ವಿತರಣೆ ಮಾಡುತ್ತಿದೆ. 'ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದೆ. ಹಾಗಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿದ ಪರಿಣಾಮ ಸಿನಿಮಾ ಒಂದಿಷ್ಟು ಸುದ್ದಿ ಮಾಡಿದೆ'. -ರಕ್ಷಿತ್ ಶೆಟ್ಟಿ, ನಟ, ನಿರ್ಮಾಪಕ
↧
ಕನೆಕ್ಟ್ ಆಗುತ್ತೆ ಕಿರಿಕ್: ರಕ್ಷಿತ್
↧