- ಪದ್ಮಾ ಶಿವಮೊಗ್ಗ ಸಿನಿಪ್ರೇಮಿಗಳಲ್ಲಿ ಟ್ರೇಲರ್‌ನಿಂದಲೇ ಕುತೂಹಲ ಮೂಡಿಸಿರುವ ಚಿತ್ರ 'ಮಮ್ಮಿ ಸೇವ್ ಮಿ'. ಲೋಹಿತ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಬಾಲ ನಟಿ ಯುವಿನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಧವೆ ಮತ್ತು ಮಗಳು ಪ್ರೇತಾತ್ಮದ ಕೈಗೆ ಸಿಕ್ಕಿಕೊಂಡಾಗ ಪಡುವ ಕಷ್ಟಗಳನ್ನು ಕತೆಯಾಗಿಸಿದ್ದಾರೆ ಲೋಹಿತ್. ಪ್ರಪಂಚದಾದ್ಯಂತ ವರದಿಯಾದ ಪ್ರೇತಾತ್ಮದ ಅನುಭವಗಳನ್ನು ಸಿನಿಮಾ ಮಾಡಲಾಗಿದೆ. ಇದು ಹಾರರ್ ಕಾಮಿಡಿ ಚಿತ್ರ ಅಲ್ಲ. ಹಾರರ್ ಮತ್ತು ಎಮೋಷನಲ್ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಇಂದು (ಡಿ.2) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. 'ಹಾಲಿವುಡ್‌ನ ಹಾರರ್ ಸಿನಿಮಾಗಳು ತುಂಬ ಜನಪ್ರಿಯ. ನಮ್ಮ ದೇಶದಲ್ಲಿ ಹಾರರ್ ಸಿನಿಮಾಗಳು ಟೆಕ್ನಿಕಲಿ ಆ ಲೆವೆಲ್‌ನಲ್ಲಿ ಇರೋಲ್ಲ. ಆದರೆ, ಮಮ್ಮಿ ಚಿತ್ರವನ್ನು ಹಾಲಿವುಡ್ ಸಿನಿಮಾ ರೀತಿಯಲ್ಲೇ, ಟೆಕ್ನಿಕಲ್ ಸಪೋರ್ಟ್ ತೆಗೆದುಕೊಂಡು ಮಾಡಿದ್ದೇವೆ. ಥ್ರಿಲ್ ಬೇಕು ಅನ್ನೋರು ಮಾತ್ರ ಅಲ್ಲ, ಎಮೋಷನಲ್ ಚಿತ್ರಗಳನ್ನು ನೋಡೋಕೆ ಇಷ್ಟಪಡೋರು ಕೂಡಾ ಈ ಸಿನಿಮಾ ಎಂಜಾಯ್ ಮಾಡ್ತಾರೆ' ಎನ್ನುತ್ತಾರೆ ಲೋಹಿತ್. ಚಿತ್ರವನ್ನು ಕೆಆರ್‌ಕೆ ಪ್ರೊಡಕ್ಷನ್ ಮೂಲಕ ಕೆ.ಎಸ್. ರವಿಕುಮಾರ್ ನಿರ್ಮಾಣ ಮಾಡಿದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಚಿತ್ರದ ಹೈಲೈಟ್. 'ವೇಣು ಅವರೇ ಚಿತ್ರದ ಹೀರೋ. ರವಿಚಂದ್ರನ್ ಬಹಳ ಹಾರ್ಡ್‌ವರ್ಕ್ ಮಾಡಿದ್ದಾರೆ. ನೆಂದಿರನ್, ಬಾಹುಬಲಿ, ಈಗ, ಮಗಧೀರ ಮತ್ತಿತರ ಚಿತ್ರಗಳಿಗೆ ವಿಎಫ್‌ಎಕ್ಸ್ ಕೆಲಸ ಮಾಡಿದ ಪ್ರಸಾದ್ ಗ್ರೂಪ್ ಗ್ರಾಫಿಕ್ ಮಾಡಿದೆ. ಆಟ್‌ಮಾಸ್ ಸೌಂಡ್‌ನಿಂದ ನೋಡುಗರಿಗೆ ಹೊಸ ಅನುಭವ ನೀಡುತ್ತೆ ಚಿತ್ರ. ಇದನ್ನು ಮಾಡಿದವರು ರಾಜಾಕೃಷ್ಣ. ಅಜನೀಶ್ ಲೋಕ್‌ನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇವರೆಲ್ಲರ ಎಫರ್ಟ್‌ನಿಂದ ಸಿನಿಮಾ ಚೆನ್ನಾಗಿ ಮೂಡಿಬರೋದು ಸಾಧ್ಯವಾಗಿದೆ. ಈಗಾಗಲೇ ಟ್ರೇಲರ್ ನೋಡಿದವರೆಲ್ಲಾ ಮೆಚ್ಚಿಕೊಂಡಿರೋದು ವಿಶ್ವಾಸ ಮೂಡಿಸಿದೆ' ಎನ್ನುತ್ತಾರೆ ನಿರ್ದೇಶಕ. ನಿರ್ಮಾಪಕ ರವಿಕುಮಾರ್ ಅವರಿಗೂ ಇದು ಮೊದಲ ಚಿತ್ರ. 'ನಿರ್ಮಾಪಕರ ಸಹಕಾರ ನಮಗೆ ಶ್ರೀರಕ್ಷೆ. ಅಂದುಕೊಂಡಿದ್ದಕ್ಕಿಂತ ಬಜೆಟ್ ಜಾಸ್ತಿ ಆದರೂ ಬಹಳ ಪ್ರೋತ್ಸಾಹ ನೀಡಿದರು. ಇಲ್ಲದೇ ಹೋಗಿದ್ದರೆ ಮಮ್ಮಿ ಚಿತ್ರ ಈ ಮಟ್ಟಕ್ಕೆ ಇರುತ್ತಿರಲಿಲ್ಲ' ಅನ್ನೋದು ಲೋಹಿತ್ ಅಭಿಪ್ರಾಯ. ಐಶ್ವರ್ಯಾ ಸಿಂಧೋಗಿ, ಶ್ರೀಧರ್ ಮತ್ತಿತರರು ನಟಿಸಿದ್ದಾರೆ.
↧
ಹಾರರ್, ಎಮೋಷನಲ್ ಕಾಂಬಿನೇಷನ್ನಿನ ಮಮ್ಮಿ
↧