- ಹರೀಶ್ ಬಸವರಾಜ್
ಸಿನಿಮಾವೊಂದರ ನಿರ್ಮಾಣದಲ್ಲಿ ಪ್ರಶಸ್ತಿ ಮತ್ತು ಚಪ್ಪಾಳೆಯಂಥ ಅಂಶಗಳೂ ಕೇಂದ್ರಿವಾಗಿರುತ್ತವೆ. ಆದರೆ, ರಾಮಾ ರಾಮಾ ರೇ ಸಿನಿಮಾ ಈ ಫಾರ್ಮುಲಾವನ್ನು ದೂರ ಇಟ್ಟು ಮನಸ್ಸಿಗೆ ಹತ್ತಿರವಾಗುವ ಚಿತ್ರ ಎನ್ನಬಹುದು. ನಿರ್ದೇಶಕರಿಗೆ ಕತೆ ಹೇಳುವ ಜಾಣ್ಮೆ ಗೊತ್ತಿದೆ. ಸೂಕ್ಷ್ಮತೆಗಳ ಸುತ್ತ ಸರಳವಾಗಿ ಹೆಣೆದಿರುವ ಚಿತ್ರಕತೆ, ಫಾರಿನ್ ಲೊಕೇಶನ್, ಐಶರಾಮಿ ಸ್ಟೂಡಿಯೋ, ಅದ್ಧೂರಿ ತಾರಾಗಣ ಇದಾವುದೂ ಇಲ್ಲದೆ ಪ್ರೇಕ್ಷಕನ ಕುತೂಹಲ ಮತ್ತು ಅವಲೋಕನೆಗೆ ಈ ಸಿನಿಮಾ ಎಡೆಮಾಡಿಕೊಟ್ಟಿದೆ.
ಸಿನಿಮಾದಲ್ಲಿ ಏನಿದೆ ಎಂದು ಕೇಳಿದರೆ, ಅದು ‘ಒಂದು ನಿಟ್ಟುಸಿರು’. ಅದೇ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಪ್ರೇಕ್ಷಕ ಕತೆಯನ್ನು ಜೀವಿಸುವಷ್ಟರ ಮಟ್ಟಿಗೆ ಸಿನಿಮಾ ಮನಸ್ಸನ್ನು ತಟ್ಟುತ್ತದೆ. ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಆರಂಭವಾಗುವ ಸಿನಿಮಾ, ಅವನು ತಾನಾಗಿಯೇ ಜೈಲಿಗೆ ಬಂದು ಶರಣಾಗುವ ದೃಶ್ಯದೊಂದಿಗೆ ಮುಗಿಯುತ್ತದೆ. ಇದರ ಮಧ್ಯೆ ಬದುಕಲು ಅವನು ನಡೆಸುವ ಹೋರಾಟ, ಪ್ರೇಮಿಗಳ ಕಷ್ಟ, ಸೈನಿಕನ ಪತ್ನಿಯ ಪ್ರಸವ ವೇದನೆ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್ ಚೆಂದವಾಗಿ ಬಿಂಬಿಸಿದ್ದಾರೆ. ತನ್ನ ಸಾವು ಖಚಿತ ಎಂದು ತಿಳಿದಿದ್ದರೂ ಬದುಕಬೇಕು ಎನ್ನುವ ಹಂಬಲದ ಪಾತ್ರದಲ್ಲಿ ನಟರಾಜ್ ಗಮನ ಸೆಳೆದಿದ್ದಾರೆ. ರಾಮಣ್ಣ ಪಾತ್ರಧಾರಿ ಜಯರಾಮ್, ಮನೋಜ್ಞ ಅಭಿನಯದಿಂದ ಸಿನಿಮಾದಾಚೆ ಬಂದರೂ ಕಾಡುತ್ತಾರೆ. ಚುರುಕಿನ ನಟನೆಯಿಂದ ಧರ್ಮಣ್ಣ ಕಡೂರು ಪ್ರೇಕ್ಷಕರನ್ನು ಸೆಳೆಯುತ್ತಾರೆ. ಮಧ್ಯಮ ವರ್ಗದ ಮನೆಯಿಂದ ಓಡಿ ಬರುವ ಹುಡುಗಿಯಾಗಿ ಬಿಂಬಶ್ರೀ ನೀನಾಸಂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಧಾ ರಾಮಚಂದ್ರ, ಪ್ರಿಯಾ ಷಟಮರ್ಶನ್, ಶ್ರೀಧರ್, ಎಂ.ಕೆ. ಮಠ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರತಿ ಪಾತ್ರಗಳು ವಿಶೇಷ ಎನಿಸುವಷ್ಟರ ಮಟ್ಟಿಗೆ ಧನಂಜಯ್ ರಂಜನ್, ನಾಗೇಂದ್ರ, ಸತ್ಯ ಪ್ರಕಾಶ್ ಚಿತ್ರಕತೆ ರಚಿಸಿದ್ದಾರೆ.
‘ಮನುಷ್ಯ ಭೂಮಿಯಿಂದ ಆಚೆ ಹೋಗುವುದನ್ನು ಕಲಿತಿದ್ದಾನೆ, ಆದರೆ ಜಾತಿಯಿಂದ ಹೊರಬರುವುದನ್ನು ಕಲಿತಿಲ್ಲ’ ಎಂಬ ಮೊನಚಾದ ಸಂಭಾಷಣೆಗಳೊಂದಿಗೆ ಸಿದ್ಧಲಿಂಗಯ್ಯ ಕಂಬಾಳು ಉತ್ತಮ ಸ್ಕೋರ್ ಮಾಡುತ್ತಾರೆ. ಎಲ್ಲರ ಬರವಣಿಗೆಗೆ ದೃಶ್ಯರೂಪ ಕೊಟ್ಟಿರುವ ಸಿನಿಮಾಟೋಗ್ರಾಫರ್ ಲವಿತ್ ಪ್ರಯತ್ನ ಅಭಿನಂದನಾರ್ಹ.
ಈ ಸಿನಿಮಾವನ್ನು ತುಂಬ ವಿಶೇಷ ಎಂದು ಹೇಳಲಾಗದಿದ್ದರೂ ಇಂತಹ ಕತೆಯನ್ನಿಟ್ಟುಕೊಂಡು ಅದನ್ನು ದೃಶ್ಯರೂಪಕ್ಕಿಳಿಸಿರುವುದೇ ವಿಶೇಷ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಆ ಸಾಲಿಗೆ ರಾಮಾ ರಾಮಾ ರೇ ಕೂಡ ಸೇರುತ್ತದೆ. ಇದು ನೋಡುಗರನ್ನು ನಗಿಸುತ್ತದೆ, ಕಾಡುತ್ತದೆ, ಅಳಿಸುತ್ತದೆ... ಸಿನಿಮಾದ ಶೇ. 95 ಭಾಗ ರಸ್ತೆಯಲ್ಲೇ ನಡೆಯುವುದರಿಂದ ರೋಡ್ ಸಿನಿಮಾ ಎಂತಲೂ ಕರೆಯಬಹುದು. ಸಿನಿಮಾವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಚಿತ್ರಕ್ಕೆ ನೆರವಾಗಿರುವುದು ಲೊಕೇಶನ್ ಮತ್ತು ಸಂಗೀತ. ವಾಸುಕಿ ವೈಭವ್ ಅವರಿಗೆ ಇಲ್ಲಿನ ಸಂಗೀತ ಸಂಯೋಜನೆ ಮೊದಲ ಯತ್ನವಾದರೂ ಚಿತ್ರರಂಗದಲ್ಲಿ ನೆಲೆಯೂರುವ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ಹಾಡುಗಳ ಸಾಹಿತ್ಯ ಸಿನಿಮಾದ ಥಾಟ್‌ಗೆ ಕೊಂಚ ಮಿಸ್ ಹೊಡೆಯುತ್ತಿದೆಯೇನೊ ಎಂಬಂತೆ ಅನಿಸುತ್ತದೆ. ಬಹುತೇಕ ಹೊಸಬರೇ ತುಂಬಿರುವ ಚಿತ್ರದಲ್ಲಿ ಕತೆ, ತಾಂತ್ರಿಕತೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿರುವುದು ತಂಡದ ಸಿನಿಮಾ ಪ್ರೀತಿಯನ್ನು ತೋರಿಸುತ್ತದೆ. ಚಿತ್ರದ ಮೊದಲರ್ಧ ಸ್ವಲ್ಪ ಸ್ಲೋ ಎನಿಸುತ್ತದೆ ಎನ್ನುವುದು ಬಿಟ್ಟರೆ ಇಲ್ಲಿ ಅಂಥ ಮೈನಸ್ ಪಾಯಿಂಟ್‌ಗಳು ಇಲ್ಲ ಅಂತ ಹೇಳಬಹುದು.
ಚಿತ್ರ: ರಾಮಾ ರಾಮಾ ರೇ (ಕನ್ನಡ)