ಈಗಾಗಲೇ ಸಾಕಷ್ಟು ಅವಕಾಶಗಳನ್ನು ನೀಡಿ, ಕಾಳಧನಿಕರು ತಮ್ಮ ಆಸ್ತಿ ಘೋಷಿಸುವಂತೆ ಸರಕಾರ ಆಗ್ರಹಿಸಿದರೂ ಯಾವುದೇ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ, ಪ್ರಧಾನಿ ನೋಟು ರದ್ಧತಿಗೆ ಮುಂದಾದರು. ಸರಕಾರದ ಈ ಕ್ರಮದ ನಂತರ ಸಾಕಷ್ಟು ಮೊತ್ತದ ಹಣ ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಿಗೆ ಹರಿದು ಬರುತ್ತಿದ್ದು, ಬಡವರಿಗಾಗಿಯೇ ಇರುವ ಯೋಜನೆಗಳ ಮೂಲಕ ಕಾಳಧನಿಕರು ತಮ್ಮ ಹಣವನ್ನು ಬಿಳಿ ಮಾಡಿಕೊಡಲು ಮುಂದಾಗುತ್ತಿದ್ದಾರೆ. ಬ್ಯಾಂಕ್ ಮ್ಯಾನೇಜರ್‌ಗಳಿಗೂ ಕಮಿಷನ್ ನೀಡುವ ಕಸರತ್ತನ್ನೂ ನಡೆಸುತ್ತಿದ್ದಾರೆ. ಈ ಕಪ್ಪು ಹಣ ಹೊಂದಿರುವವರಿಗೆ ಸರಕಾರ ಮತ್ತೊಂದು ಅವಕಾಶ ನೀಡುತ್ತಿದೆ. ಪೂರ್ತಿ ಹಣ ಹೋಗುವ ಬದಲು, ಸ್ವಲ್ಪನಾದರೂ ಕೈಗೆ ಸಿಗುವಂತೆ ಮಾಡಿಕೊಳ್ಳಲು ಕಾಳಧನಿಕರಿಗೆ ಮತ್ತೊಂದು ಅವಕಾಶ ನೀಡುತ್ತಿದೆ.
ನೋಟು ರದ್ದಾದ ನಂತರ ಕಾಳಧನಿಕರು ತಮ್ಮ ಆದಾಯವನ್ನು ಘೋಷಿಸಲು ಇಚ್ಛಿಸಿದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಶೇ.30ರಷ್ಟು ದಂಡ ವಿಧಿಸಿ, ಹಣವನ್ನು ಬಿಳಿಯಾಗಿಸಿಕೊಳ್ಳಬಹುದು.
ಲೆಕ್ಕ ಕೊಡದಿದ್ದರೆ?:
ನೋಟು ರದ್ಧಾದ ನಂತರ ಬ್ಯಾಂಕ್ ಖಾತೆಗಳಿಗೆ ಜಮಾವಾಗಿರುವ 2.50 ಲಕ್ಷ ರೂ.ಮಿತಿ ದಾಟಿ ಹಳೆಯ ನೋಟುಗಳಲ್ಲಿ ಬರುವ ಠೇವಣಿ ಹಣಕ್ಕೆ ಆದಾಯ ತೆರಿಗೆ ಇಲಾಖೆಯಲ್ಲಿ ವಿವರ ಘೋಷಿಸಬೇಕು. ಅಕಸ್ಮಾತ್ ಅಗತ್ಯ ವಿವರ ನೀಡಲು ಖಾತೆದಾರರು ವಿಫಲರಾದಲ್ಲಿ ಜಮೆಯಾದ ಹಣಕ್ಕೆ ಶೇ.50ರಷ್ಟು ತೆರಿಗೆ ವಿಧಿಸಬೇಕು. ಹಣದೊಂದಿಗೆ ಸಿಕ್ಕಿ ಬಿದ್ದಲ್ಲಿ ಸುಮಾರು ಶೇ.85ರಷ್ಟು ದಂಡ ಕಟ್ಟಬೇಕು.
ಬಡವರಿಗಾಗಿಯೇ ತೆರೆದಿರುವ ಖಾತೆಗಳಲ್ಲಿ ಸಾಕಷ್ಟು ಹಣ ಹರಿದ ಬರುತ್ತಿದ್ದು, ಇದನ್ನು 4 ವರ್ಷಗಳ ಕಾಲ ಹಿಂಪಡೆಯದಂತೆ ಖಾತೆದಾರರಿಗೆ ನಿರ್ಬಂಧ ಹಾಕಲಾಗುತ್ತದೆ. ಆ ಮೂಲಕ ಡಿಸೆಂಬರ್ 30ರ ವರೆಗೆ ಬ್ಯಾಂಕ್, ಅಂಚೆ ಕಚೇರಿ ಮತ್ತು ನಾನಾ ಹಣಕಾಸು ಸಂಸ್ಥೆಗಳ ಖಾತೆಗಳಿಗೆ ಹಳೆಯ ನೋಟುಗಳಲ್ಲಿ ಜಮೆ ಆಗುವ, ಲೆಕ್ಕ ಸಿಗದ ಠೇವಣಿಗಳಿಗೆ ಹೊಸ ರೂಪದ ತೆರಿಗೆ ವಿಧಿಸಲಾಗುತ್ತದೆ.
ಈ ಯೋಜನೆಯಿಂದ ಸಂಗ್ರಹವಾಗುವ ತೆರಿಗೆಯನ್ನು ನೀರಾವರಿ, ವಸತಿ, ಶೌಚಾಲಯ, ಮೂಲ ಸೌಕರ್ಯ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ಹಾಗೂ ಜೀವನದ ಅಗತ್ಯಗಳನ್ನು ಪೂರೈಸಲು ಬಳಸಲಾಗುವುದು. ಆ ಮೂಲಕ ನ್ಯಾಯ ಹಾಗೂ ಸಮಾನತೆಗೆ ಸೂಕ್ತ ಅರ್ಥ ಕಲ್ಪಿಸಲು ಸರಕಾರ ದಿಟ್ಟ ಹೆಜ್ಜೆಯಿಟ್ಟಿದೆ.
ಅಕಸ್ಮಾತ್, ಇಷ್ಟೆಲ್ಲವಾದರೂ ಕಾಳಧನಿಕರು ತಮ್ಮ ಆದಾಯವನ್ನು ಘೋಷಿಸುವಲ್ಲಿ ವಿಫಲರಾದಲ್ಲಿ, ಈ ಆದಾಯ ತೆರಿಗೆ ಮಸೂದೆಗೆ ಮತ್ತೆ ತಿದ್ದುಪಡಿ ತರಲಿದ್ದು, ಆದಾಯದ ಶೇ.60ರಷ್ಟು ತೆರಿಗೆ, ಇದರ ಶೇ.25 ರಷ್ಟು ಸೇವಾ ತೆರಿಗೆ (ಒಟ್ಟು ಆದಾಯದ ಶೇ.15ರಷ್ಟು) ಸೇರಿ ಶೇ.75ರಷ್ಟು ದಂಡ ವಿಧಿಸಲಿದೆ.
ಹೊಸದಿಲ್ಲಿ: ಜನ್‌ಧನ್ ಖಾತೆಗೆ ಕೇವಲ 2 ವಾರಗಳಲ್ಲಿ 21 ಸಾವಿರ ಕೋಟಿ ರೂ. ಹರಿದುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಕಾಳಧನಕ್ಕೆ ತೆರಿಗೆ ಜಡಿಯಲು ಮತ್ತೊಂದು ದಿಟ್ಟ ಕ್ರಮ ಕೈಗೊಂಡಿದ್ದು, ಕಾಳಧನಿಕರನ್ನು ಮಟ್ಟ ಹಾಕಲು ಆದಾಯ ತೆರಿಗೆ ಕಾಯಿದೆ ತಿದ್ದುಪಡಿಯನ್ನು ಸದನದಲ್ಲಿಂದು ಮಂಡಿಸಿದೆ.