- ತಿಂಗಳಿಗೆ ಸರಾಸರಿ 2 ಸಾವಿರ ರೂ. ಲಾಭ, 10 ವರ್ಷಕ್ಕೊಮ್ಮೆ ಬಡ್ತಿ ಅವಕಾಶ- ಏನೇನು ಭತ್ಯೆ? ಸಮವಸ್ತ್ರಕ್ಕೆ ತಿಂಗಳಿಗೆ 500 ರೂ. 600 ರೂ. ಅನುಕೂಲಕರ ಭತ್ಯೆ 1 ಸಾವಿರ ರೂ. ಪರಿಶ್ರಮ ಭತ್ಯೆ ಬೆಂಗಳೂರು: ವೇತನ ಪರಿಷ್ಕರಣೆ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ನಾನಾ ಭತ್ಯೆಯಡಿ ತಿಂಗಳಿಗೆ ಹೆಚ್ಚುವರಿ 2 ಸಾವಿರ ರೂ. ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಡಿ.1ರಿಂದ ಈ ಕ್ರಮ ಜಾರಿಗೆ ಬರಲಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಪ್ರಕಟಿಸಿದರು. ''ರಾಜ್ಯದಲ್ಲಿ ಸುಮಾರು 90 ಸಾವಿರ ಪೊಲೀಸರಿದ್ದಾರೆ. ಈ ಪೈಕಿ ಕಾನ್‌ಸ್ಟೇಬಲ್‌ಗಳಿಂದ ಎಎಸ್‌ಐ ಹಂತದವರೆಗಿನ 80 ಸಾವಿರ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ. ಪೊಲೀಸರ ವೇತನ ತಾರತಮ್ಯ ನಿವಾರಣೆ ಸಂಬಂಧ ಔರಾದ್‌ಕರ್ ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಉದ್ದೇಶಕ್ಕೆ ವಾರ್ಷಿಕ ಸುಮಾರು 200 ಕೋಟಿ ರೂ. ಅಗತ್ಯವಿದೆ,'' ಎಂದು ಸಿಎಂ ವಿವರಿಸಿದರು. ''ಪ್ರತಿ ತಿಂಗಳು ಸಮವಸ್ತ್ರ ಭತ್ಯೆ 500 ರೂ. (ಪ್ರಸ್ತುತ 100 ರೂ. ನೀಡಲಾಗುತ್ತಿದೆ), ಅನುಕೂಲಕರ ಭತ್ಯೆ 600 ರೂ. ಹಾಗೂ ಕಠಿಣ ಪರಿಶ್ರಮ ಭತ್ಯೆ ರೂಪದಲ್ಲಿ 1 ಸಾವಿರ ರೂ. ಸಂದಾಯವಾಗಲಿದೆ. ಒಟ್ಟಾರೆ ಇದರಿಂದ ಹೆಚ್ಚುವರಿಯಾಗಿ ಸರಾಸರಿ 2 ಸಾವಿರ ರೂ. ಕೊಟ್ಟಂತಾಗಲಿದೆ,'' ಎಂದು ಅವರು ಹೇಳಿದರು. ''ರಾಜ್ಯದ ಪೊಲೀಸರಿಗೆ ವರ್ಷದಲ್ಲಿ 13 ತಿಂಗಳ ಲೆಕ್ಕದಲ್ಲಿ ಸಂಬಳ ನೀಡಲಾಗುತ್ತಿದೆ. ಹೆಚ್ಚುವರಿ ಭತ್ಯೆಗೂ ಇದು ಅನ್ವಯವಾಗಲಿದೆ. ಈಗ ಭತ್ಯೆ ಕೊಡುತ್ತಿರುವುದು ಮೊದಲ ಹಂತದ ಕ್ರಮ. ಮುಂದಿನ ವರ್ಷ ರಚನೆಯಾಗಲಿರುವ ವೇತನ ಪರಿಷ್ಕರಣೆ ಆಯೋಗವು ವೇತನ ತಾರತಮ್ಯ ನಿವಾರಣೆ ಸಂಬಂಧ ಇನ್ನಷ್ಟು ಕ್ರಮ ಕೈಗೊಳ್ಳಲಿದೆ,'' ಎಂದರು. ಸೇವಾವಧಿಯಲ್ಲಿ ಕನಿಷ್ಠ 3 ಬಡ್ತಿ ಪ್ರತಿ 10 ವರ್ಷಕ್ಕೊಮ್ಮೆ ಪೊಲೀಸರಿಗೆ ಬಡ್ತಿ ನೀಡಲಾಗುವುದು. ಇದರಿಂದ ಪಿಸಿಗಳಾಗಿದ್ದವರಿಗೆ ಸೇವಾವಧಿಯಲ್ಲಿ ಕನಿಷ್ಠ 3 ಬಡ್ತಿ ದೊರಕಲಿದೆ. ಅವರು ಎಎಸ್‌ಐ ಹಂತದವರೆಗೂ ಹೋಗಬಹುದು. ಆರ್ಡರ್ಲಿ ಅನಿಷ್ಠ ಇನ್ನಿಲ್ಲ ''ಆರ್ಡರ್ಲಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ತೀರ್ಮಾನಿಸಲಾಗಿದೆ. ಪಿಸಿಗಳು ಪೊಲೀಸ್ ಕರ್ತವ್ಯ ಬಿಟ್ಟು ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುವುದನ್ನು ನಿಲ್ಲಿಸಬೇಕೆಂಬ ಒತ್ತಾಯವಿತ್ತು. ಹಾಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ,'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. 7815 ಸಿಬ್ಬಂದಿ ನೇಮಕ ''ಈ ವರ್ಷ ಎಲ್ಲ ವೃಂದದ 7815 ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ಈ ಪೈಕಿ 711 ಪಿಎಸ್‌ಐಗಳ ನೇಮಕಕ್ಕೆ ಅನುಮತಿ ನೀಡಲಾಗಿದೆ. ಹಾಗೆಯೇ 6610 ಪಿಸಿಗಳು ಹಾಗೂ 215 ಪಿಎಸ್‌ಐಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. 5 ಸಾವಿರ ಪಿಸಿಗಳಿಗೆ ತರಬೇತಿ ನೀಡಲಾಗುತ್ತಿದೆ. 2017-18ರಲ್ಲಿ ಖಾಲಿಯಾಗುವ 4561 ಪಿಸಿಗಳು, 333 ಎಸ್‌ಐಗಳ ಹುದ್ದೆ ಭರ್ತಿ ಮಾಡಲಾಗುವುದು. ಅದೇ ರೀತಿ 2018-19ರಲ್ಲಿ ಖಾಲಿಯಾಗುವ 4015 ಪಿಸಿಗಳು, 312 ಎಸ್‌ಐಗಳ ಹುದ್ದೆ ತುಂಬಲಾಗುವುದು,'' ಎಂದು ಸಿಎಂ ಭರವಸೆ ನೀಡಿದರು.
↧
ಪೊಲೀಸ್ ಭತ್ಯೆ ಏರಿಕೆ: 10 ವರ್ಷಕ್ಕೊಮ್ಮೆ ಬಡ್ತಿ ಅವಕಾಶ
↧