-ರಾಷ್ಟ್ರದ ತಲಾ ಆದಾಯ 93,231ಕ್ಕೆ ಹೋಲಿಸಿದರೆ ಶೇ.59 ಹೆಚ್ಚಳ- ಬೆಂಗಳೂರು: ಸತತ ಬರಗಾಲದಿಂದ ಕುಸಿದ ಕೃಷಿ ಉತ್ಪಾದನೆ, ಉದ್ಯಮ ಸ್ನೇಹಿ ರಾರಯಂಕ್‌ನಲ್ಲಿ 9 ರಿಂದ 13ನೇ ಸ್ಥಾನಕ್ಕೆ ಇಳಿಕೆಯಂತಹ ಪ್ರತಿಕೂಲ ಸಂದರ್ಭದಲ್ಲೂ ರಾಜ್ಯದ ತಲಾ ಆದಾಯದಲ್ಲಿ ವಾರ್ಷಿಕ ಶೇ.11.4 ಹೆಚ್ಚಳವಾಗಿದ್ದು, ದೇಶದ ಸರಾಸರಿಗಿಂತ ಶೇ.59 ಹೆಚ್ಚಿದೆ ಎಂದು ರಾಜ್ಯ ಸರಕಾರ ಹೇಳಿದೆ. ''2015 -16ನೇ ಸಾಲಿಗೆ ರಾಜ್ಯದ ತಲಾ ಆದಾಯ 1,48,494 ರೂ. ತಲುಪಿದ್ದು, ರಾಷ್ಟ್ರದ ತಲಾ ಆದಾಯ 93,231ಕ್ಕೆ ಹೋಲಿಸಿದರೆ ಶೇ.59 ಹೆಚ್ಚಿದೆ'' ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಎಂ.ಆರ್.ಸೀತಾರಾಂ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಪ್ರಕಟಿಸಿದರು. ''ಜಿಎಸ್‌ಡಿಪಿ ಶೇ.13.1 ಬೆಳವಣಿಗೆಯೊಂದಿಗೆ 10,40,148 ಕೋಟಿ ರೂ. ಆಗಿದ್ದು, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಕ್ರಮವಾಗಿ ಶೇ.4, ಶೇ.8.5 ಹಾಗೂ ಶೇ.15.8 ಬೆಳವಣಿಗೆಯಾಗಿದೆ,'' ಎಂದು ಹೇಳಿದರು. ''ರಾಜ್ಯದಲ್ಲಿ ಜನನ, ಮರಣ ಆನ್‌ಲೈನ್ ನೋಂದಣಿ ವ್ಯವಸ್ಥೆಗಾಗಿ 'ಸಂಸ್ಕರಣೆ' ಎಂಬ ಇ-ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಈ ನೋಂದಣಿಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ,'' ಎಂದು ತಿಳಿಸಿದರು. ಸಂಚಾರಿ ತಾರಾಲಯ: ''ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ 12ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಪ್ರೊಜೆಕ್ಷನ್ ವ್ಯವಸ್ಥೆಯನ್ನು ಅಳವಡಿಸಿ ಉನ್ನತೀಕರಣ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ಕಂದಾಯ ವಿಭಾಗಕ್ಕೆ ಒಂದು ಸಂಚಾರಿ ತಾರಾಲಯವನ್ನು ಪ್ರಾರಂಭಿಸಲಾಗುತ್ತಿದೆ. ತಲಾ 1.25 ಕೋಟಿ ರೂ. ವೆಚ್ಚದ ಸಂಚಾರಿ ಪ್ರಯೋಗಾಲಯಗಳಲ್ಲಿ ಒಂದು ಈಗಾಗಲೇ ಸಿದ್ದವಾಗಿದ್ದು, ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ,'' ಎಂದು ವಿಜ್ಞಾನ -ತಂತಜ್ಞಾನ ಸಚಿವರೂ ಆದ ಸೀತಾರಾಂ ತಿಳಿಸಿದರು. ''ದೇಶದಲ್ಲೇ ಪ್ರಥಮ ಬಾರಿಗೆ ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಸ್ಥಾಪನೆಗೊಳ್ಳುತ್ತಿರುವ ಅತ್ಯಾಧುನಿಕ ತಾರಾಲಯವು ಜೂನ್ 2017ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬಾಗಲಕೋಟ ತೋಟಗಾರಿಕೆ ವಿ.ವಿ ಹಾಗೂ ವಿಜಯಪುರ ಮಹಿಳಾ ವಿ.ವಿ.ಗಳಲ್ಲಿ ತಲಾ 5.75 ಕೋಟಿ ವೆಚ್ಚದಲ್ಲಿ ಮಿನಿ ಡಿಜಿಟಲ್ ತಾರಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಡಬ್ಲಿನ್, ಲಂಡನ್ ಹಾಗೂ ಮೆಲ್ಬೋರ್ನ್‌ನಲ್ಲಿರುವ ಸೈನ್ಸ್ ಗ್ಯಾಲರಿಗಳ ಮಾದರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೈನ್ಸ್ ಗ್ಯಾಲರಿ ಸ್ಥಾಪಿಸಲಾಗುತ್ತಿದೆ. ಈ ಸಂಬಂಧ ಡಬ್ಲಿನ್ ಇಂಟರ್‌ನ್ಯಾಷನಲ್ ಸೈನ್ಸ್ ಗ್ಯಾಲರಿಯೊಂದಿಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದೆ,'' ಎಂದು ಹೇಳಿದರು.
↧
ರಾಜ್ಯದ ತಲಾದಾಯದಲ್ಲಿ ಶೇ.11.4 ಏರಿಕೆ
↧