- ಹರೀಶ್ ಬಸವರಾಜ್ ಕನ್ನಡದ ಅನೇಕ ನಟಿಯರಿಗೆ ಸರಿಯಾಗಿ ಕನ್ನಡ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ ಎಂಬುದು ಕಂಡುಂಡ ಸತ್ಯ. ಆದರೆ ಇದರ ನಡುವೆಯೇ ಬೇರೆ ರಾಜ್ಯಗಳಿಂದ ಬಂದ ನಟಿಯರು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸುತ್ತ ಕನ್ನಡವನ್ನು ಕಲಿತುಬಿಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಪಾತ್ರಗಳಿಗೆ ತಾವೇ ಡಬ್ಬಿಂಗ್ ಕೂಡ ಮಾಡುತ್ತಾರೆ. ಕೀರ್ತಿಲಕ್ಷ್ಮಿ ಬ್ರಹ್ಮ ವಿಷ್ಣು ಮಹೇಶ್ವರ ಸಿನಿಮಾ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಕೀರ್ತಿ ಲಕ್ಷ್ಮಿ ಮೂಲತಃ ಉತ್ತರ ಪ್ರದೇಶದವರು. ಲಖನೌ ನಿವಾಸಿಯಾಗಿರುವ ಇವರು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಈ ಅಲ್ಪಾವಧಿಯಲ್ಲಿ ಕನ್ನಡ ಮಾತನಾಡುವುದನ್ನು ಕಲಿತಿದ್ದಾರೆ. ಕನ್ನಡ ಸಿನಿಮಾ ನೋಡಿ ಇವರು ಭಾಷೆ ಅರಿತಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್‌ಗಳು ಇವರಿಗೆ ಇಲ್ಲಿನ ಭಾಷೆ ಕಲಿಸಿದ್ದಾರಂತೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಡಬ್ಬಿಂಗ್ ಮಾಡಬೇಕು ಎಂಬ ಅಪೇಕ್ಷೆ ಇರುವ ಈ ನಟಿಯ ಕನ್ನಡ ಪ್ರೀತಿ ಮೆಚ್ಚಲೇಬೇಕು. ಜಾಕಿ ಭಾವನಾ ಭಾವನಾ ಮೂಲತಃ ಕೇರಳದವರು. ದಕ್ಷಿಣದ ಎಲ್ಲ ಭಾಷೆಯ ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಈ ಬೆಡಗಿ. ಆ ನಂತರ ರೋಮಿಯೋ, ವಿಷ್ಣುವರ್ಧನ, ಬಚ್ಚನ್, ಟೋಪಿವಾಲಾ, ಮೈತ್ರಿ ಸಿನಿಮಾಗಳಲ್ಲಿ ಅಭಿನಯಿಸಿದರು. ಇವರು ಸಹ ಕನ್ನಡದಲ್ಲಿ ಮಾತನಾಡುತ್ತಾರೆ. ಅಷ್ಟೇ ಅಲ್ಲದೇ ಕನ್ನಡದ ನಟ ಮತ್ತು ನಿರ್ಮಾಪಕನನ್ನು ವಿವಾಹವಾಗುತ್ತಿದ್ದು, ಕರ್ನಾಟಕದ ಸೊಸೆಯಾಗುತ್ತಿದ್ದಾರೆ. ಪಾರ್ವತಿ ಮೆನನ್ ಪಾರ್ವತಿ ಮೆನನ್ ಮಲಯಾಳಂನ ಬೇಡಿಕೆಯ ನಟಿ. ಪುನೀತ್ ಅಭಿನಯದ ಮಿಲನ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಇವರು ತಮ್ಮ ಎರಡನೇ ಸಿನಿಮಾದ ಹೊತ್ತಿಗೆ ಕನ್ನಡ ಕಲಿತಿದ್ದರು. 'ಒಂದು ಭಾಷೆಯಲ್ಲಿ ಅಭಿನಯಿಸುತ್ತೇವೆ ಎಂದರೆ ಅದನ್ನು ಕಲಿತರೆ ಒಳ್ಳೆಯದು' ಎನ್ನುತ್ತಾರೆ ಇವರು. 'ಮಳೆಯೂ ಬರಲಿ ಮಂಜೂ ಇರಲಿ' ಚಿತ್ರಕ್ಕೆ ಕನ್ನಡದಲ್ಲಿ ತಾವೇ ಡಬ್ ಮಾಡಿದ್ದರು. ಅದಾದ ನಂತರ ಶಿವರಾಜ್‌ಕುಮಾರ್ ಅಭಿನಯದ ಅಂದರ್ ಬಾಹರ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಪೂಜಾ ಗಾಂಧಿ ಪೂಜಾ ಗಾಂಧಿ ಮೂಲತಃ ಪಂಜಾಬಿನವರು. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಇವರು ಆದಾದ ಮೇಲೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸಾಕಷ್ಟು ಸ್ಟಾರ್ ನಟರ ಜೊತೆ ಅಭಿನಯಿಸಿದ ಪೂಜಾ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರದವರು. ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುವುದರೊಳಗೆ ಕನ್ನಡ ಕಲಿತುಕೊಂಡರು. ಕನ್ನಡದಲ್ಲೇ ಒಂದು ಸಿನಿಮಾ ನಿರ್ಮಾಣ ಮಾಡಿ ಅದರಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದರು. ಮಾನ್ಯ ದರ್ಶನ್ ಮತ್ತು ಆದಿತ್ಯಾ ಅವರಿಗೆ ನಾಯಕಿಯಾಗಿ ಅಭಿನಯಿಸಿದ ಮಾನ್ಯ ಎಂಬ ಮಲಯಾಳಿ ನಟಿ ಕೂಡಾ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ದರ್ಶನ್ ಅವರ 'ಶಾಸ್ತ್ರಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಂತರ ಆದಿತ್ಯ, ಹಿರಿಯ ನಟ ವಿಷ್ಣುವರ್ಧನ್ ಸೇರಿದಂತೆ ಕೆಲ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದರು. ಅವುಗಳಲ್ಲಿ ಕೆಲ ಸಿನಿಮಾಗಳಿಗೆ ತಾವೇ ಡಬ್ ಮಾಡಿ ಗಮನ ಸೆಳೆದಿದ್ದರು.
↧
ಬೇರೆ ನಾಡಿನಿಂದ ಬಂದು ಕನ್ನಡ ಕಲಿತ ನಟಿಯರು
↧