* ಪದ್ಮಾ ಶಿವಮೊಗ್ಗ
ಪುನೀತ್ ರಾಜ್‌ಕುಮಾರ್ ಮತ್ತು ಸೂರಿ ಕಾಂಬಿನೇಷನ್ ಕಾರಣಕ್ಕೆ ದೊಡ್ಮನೆ ಹುಡ್ಗ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲದೆ, ಪುನೀತ್‌ಗೆ ಇದು 25ನೇ ಚಿತ್ರ. ಇವೆಲ್ಲ ಕಾರಣಕ್ಕೆ ಚಿತ್ರ ನಿರಾಶೆ ಮಾಡುವುದಿಲ್ಲ. ಪಕ್ಕಾ ಕಮರ್ಷಿಯಲ್ ಆಗಿ ಜನರನ್ನು ಸೆಳೆಯುವಂತೆ ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಊರಿನಲ್ಲಿ ದಾನ ಶೂರ ಕರ್ಣನಾಗಿ ದೊಡ್ಮನೆ ಯಜಮಾನನಾಗಿ ಹೆಸರು ಗಳಿಸುವ ರಾಜೀವ (ಅಂಬರೀಶ್). ಬೀದಿ ಬದಿಯಲ್ಲಿ ಬಿರಿಯಾನಿ ಮಾರಿಕೊಂಡು ಬಡವರ ಪ್ರೀತಿಯ ಹುಡುಗನಾಗಿರುವ ಸೂರ್ಯ. ಇಲ್ಲಿ ಸೂರ್ಯನಿಗೆ ಮೂಗಿನ ತುದಿಯಲ್ಲೇ ಕೋಪ. ರಾಜೀವ ಯಾರಿಗೂ ಬಗ್ಗದ ಗಂಡುಗಲಿ. ಒಬ್ಬೊಬ್ಬರು ಒಂದೊಂದು ಊರುಗಳಲ್ಲಿರುತ್ತಾರೆ. ರಾಜೀವರ ಊರಿನ ಜಮೀನುಗಳನ್ನು ಕಬಳಿಸಲು ಸಂಚು ಹೂಡುವ ಕೇಬಲ್ ಬಾಬು (ರವಿಶಂಕರ್). ಇದಕ್ಕೆ ಅಡ್ಡಿಯಾಗುವ ರಾಜೀವರನ್ನು ಜೈಲಿಗೆ ಕಳಿಸುತ್ತಾನೆ. ಅಕ್ಕನ ಮಗ ಕೃಷ್ಣ ಮಾಮ ರಾಜೀವ ವಿರುದ್ಧವೇ ಒಳಸಂಚು ಮಾಡಿರುತ್ತಾನೆ. ಇಲ್ಲಿ ರಾಜೀವ ಮತ್ತು ಸೂರ್ಯನ ಮುಖಾಮುಖಿ ಆಗುತ್ತದೆ. ಅಲ್ಲಿಂದ ಕತೆಗೆ ಒಂದು ತಿರುವು ಸಿಗುತ್ತದೆ. ಇಲ್ಲಿಂದ ಫ್ಯಾಮಿಲಿ ಸೆಂಟಿಮೆಂಟ್ ಶುರು. ನಡುವೆ ರಾಜೀವ, ಸೂರ್ಯ ಮತ್ತು ಬಾಬು ನಡುವಿನ ಜಟಾಪಟಿ. ಸೂರ್ಯ ಮತ್ತು ನಿಶಾ (ರಾಧಿಕಾ ಪಂಡಿತ್) ನಡುವಿನ ಲವ್ ಸ್ಟೋರಿ... ಹೀಗೆ ಕತೆ ಸಾಗುತ್ತದೆ.
ಹಲವು ತಿರುವುಗಳಿರುವ ಕತೆಯಲ್ಲಿ ಸಣ್ಣ ಸಸ್ಪೆನ್ಸ್ ಇದೆ. ಸರಳವಾದ ಕತೆಯ ಚಿತ್ರದಲ್ಲಿ ರಾಜೀವರಿಗೂ ಸೂರ್ಯನಿಗೂ ನಂಟು ಏನು? ದೊಡ್ಮನೆ ಹುಡ್ಗ ತನ್ನ ಮನೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ? ಅನ್ನೋದೇ ಕತೆ.
ಚಿತ್ರದಲ್ಲಿ ಪುನೀತ್ ಮತ್ತು ಅಂಬರೀಶ್ ಇಬ್ಬರೂ ಹೀರೊಗಳೇ. ರಾಜೀವ ಪಾತ್ರದಲ್ಲಿ ಅಂಬಿ ಅವರ ವ್ಯಕ್ತಿ ಚಿತ್ರಣ ಮಾಡಲಾಗಿದೆ. ಪುನೀತ್ ದೊಡ್ಮನೆ ಹುಡುಗನಾಗಿ ಪೋಟ್ರೇಟ್ ಮಾಡಲಾಗಿದೆ. ಡೈಲಾಗ್‌ಗಳು ಅವರ ಸಾಮಾಜಿಕ ಬದುಕನ್ನು ನೆನಪಿಸುವಂತಿವೆ. ಇವರಿಬ್ಬರ ಇಮೇಜನ್ನೂ ಒಂದು ಕತೆಯಲ್ಲಿ ಹಣೆದಿರುವುದು ನಿರ್ದೇಶಕರ ಜಾಣತನವನ್ನು ತೋರುತ್ತದೆ. ಅಪ್ಪ ಮಗನ ನಡುವಿನ ಹಠ, ಬಿಗುಮಾನಗಳನ್ನು ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಪುನೀತ್ ಐರನ್ ಮ್ಯಾನ್. ಆ್ಯಕ್ಷನ್ ಪ್ರಿಯರಿಗೂ ಅಜೀರ್ಣವಾಗುವಷ್ಟು ಫೈಟ್ಸ್ ಗಳಿವೆ. ಖಡಕ್ ಡೈಲಾಗ್ ಹೊಡೀತಾ ನಟನೆಯಲ್ಲಿ ಅಂಬಿ ಮತ್ತೊಮ್ಮೆ ಹೀರೊ ಆಗಿ ಗೆಲ್ಲುತ್ತಾರೆ. ಆದರೆ, ಅವರ ಕೈಯಲ್ಲಿ ಫೈಟ್ ಮಾಡಿಸದಿದ್ದರೇ ಚೆನ್ನಾಗಿರುತ್ತಿತ್ತು. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಇರುವಂಥ ದೃಶ್ಯಗಳೇ ಇದ್ದರೂ, ಕೆಲವು ಕಡೆ ಲಾಜಿಕ್ ಇಲ್ಲ ಅನ್ನಿಸಿದರೂ ಸ್ಕ್ರೀನ್ ಪ್ಲೇ ಇದನ್ನು ಮರೆಸುತ್ತದೆ. ಕುಟುಂಬದ ಭಾವನಾತ್ಮಕ ಸನ್ನಿವೇಶಗಳ ಜತೆಯಲ್ಲೇ ಆ್ಯಕ್ಷನ್ ದೃಶ್ಯಗಳನ್ನೂ ಚೆನ್ನಾಗಿ ಬ್ಲೆಂಡ್ ಮಾಡಿದ್ದಾರೆ ಸೂರಿ. ವೇಗವಾಗಿ ಓಡುವ ಚಿತ್ರದಲ್ಲಿ ಪ್ರಾರಂಭದಲ್ಲೇ ಬೀದಿಯಲ್ಲಿ ಫೈಟ್ ಮತ್ತು ಜನರ ನಡುವೆ ಅಭಿಮಾನಿಗಳೇ ಮನೆ ದೇವ್ರ ಹಾಡನ್ನು ತಂದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ.
ಸುಮಲತಾ, ಭಾರತಿ ವಿಷ್ಣುವರ್ಧನ್ ಅವರಿಗೆ ಹೆಚ್ಚೇನೂ ಪ್ರಾಮುಖ್ಯತೆ ಇಲ್ಲ. ವಿಲನ್ ಆಗಿ ರವಿಶಂಕರ್ ಗಮನ ಸೆಳೆದರೂ ಅಬ್ಬರ ಜಾಸ್ತಿ ಆಯ್ತು. ಅವಿನಾಶ್ ಮತ್ತು ಕೃಷ್ಣ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತದ ಅಬ್ಬರ ಜಾಸ್ತಿ ಇದೆ. ಚಿತ್ರದ ಕತೆಗೆ, ವೇಗಕ್ಕೆ ಬ್ಯೂಟಿ ತಂದಿದ್ದಾರೆ ಛಾಯಾಗ್ರಾಹಕ ಸತ್ಯ ಹೆಗಡೆ ಮತ್ತು ಸಂಕಲನಕಾರ ದೀಪು. ಎಕ್ಸ್ಟ್ರಾ ಫಿಟ್ಟಿಂಗ್‌ಗಳ ರೀತಿ ಕಾಮಿಡಿಗೆ ಬೇರೆ ಪಾತ್ರಗಳು ಇಲ್ಲದಿರೋದ್ರಿಂದ ಚಿಕ್ಕಣ್ಣ ಸುಮ್ಮನೆ ಹಾಗೆ ಬಂದು ನಗಿಸದೆ ಹೀಗೆ ಹೋಗುತ್ತಾರೆ. ರಾಧಿಕಾ ಪಂಡಿತ್ ಹಾಡಿನಲ್ಲಿ ಮಿಂಚಿದ್ದಾರೆ.
ಕನ್ನಡ ಚಿತ್ರ