ಬೆಂಗಳೂರು: ಬಿಬಿಎಂಪಿ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಪಿಒಡಬ್ಲ್ಯೂ (ಕಾಮಗಾರಿ ಕಾರ್ಯಕ್ರಮ ಪಟ್ಟಿ) ಕಾಮಗಾರಿಗಳನ್ನು 15 ದಿನಗಳೊಳಗೆ ಆರಂಭಿಸಬೇಕು ಎಂದು ಮೇಯರ್ ಜಿ.ಪದ್ಮಾವತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬೊಮ್ಮನಹಳ್ಳಿ ವಲಯ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ''ಬಜೆಟ್ ಅವಧಿ ಪೂರ್ಣಕ್ಕೆ 5 ತಿಂಗಳಷ್ಟೇ ಬಾಕಿ ಇದೆ. ಆದರೆ, ಈವರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊತ್ತಿಕೊಂಡಿಲ್ಲ. ಏಕೆ ವಿಳಂಬ ಮಾಡುತ್ತಿದ್ದೀರಿ,'' ಎಂದು ತರಾಟೆಗೆ ತೆಗೆದುಕೊಂಡರು. ''ಮುಂದಿನ 15 ದಿನದೊಳಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳನ್ನು ಶುರು ಮಾಡಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ,'' ಎಂದು ಎಚ್ಚರಿಕೆ ನೀಡಿದ ಅವರು, 'ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಬಾಕಿ ಬರಬೇಕಿರುವ ಆಸ್ತಿ ತೆರಿಗೆಯನ್ನು 30 ದಿನದಲ್ಲಿ ವಸೂಲಿ ಮಾಡಬೇಕು,'' ಎಂದು ಸೂಚಿಸಿದರು. ''ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಬಡವರು ಮತ್ತು ಹಿಂದುಳಿದವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ಅರ್ಹರಿಗೆ ಮುಟ್ಟಿಸಬೇಕು. ಆದಷ್ಟು ಶೀಘ್ರವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಜಾಗೃತಿ ವಹಿಸಬೇಕು. ಅಗತ್ಯವಿರುವೆಡೆ ಬೋರ್‌ವೆಲ್‌ಗಳನ್ನು ಕೊರೆಸಬೇಕು,'' ಎಂದು ತಿಳಿಸಿದರು. ಕೆಸಿಡಿಸಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಸಭೆಯ ಬಳಿಕ ಕೂಡ್ಲು ಬಳಿಯ ಕೆಸಿಡಿಸಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ''ತ್ಯಾಜ್ಯ ಘಟಕದಿಂದ ದುರ್ವಾಸನೆ ಹರಡದಂತೆ ಎಚ್ಚರ ವಹಿಸಬೇಕು. ನಿತ್ಯ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಔಷಧವನ್ನು ಸಿಂಪಡಣೆ ಮಾಡಬೇಕು. ಈ ಘಟಕಕ್ಕೆ ಕಳುಹಿಸಲಾಗುತ್ತಿರುವ ಕಸದ ಪ್ರಮಾಣವನ್ನು ತಗ್ಗಿಸಿ, ಬಯೋ ಫಿಲ್ಟರ್ ಅಳವಡಿಕೆಗೆ ಅನುವು ಮಾಡಿಕೊಡಲಾಗುವುದು,'' ಎಂದು ಹೇಳಿದರು. ಶಾಸಕ ಎಂ.ಸತೀಶ್ ರೆಡ್ಡಿ, ಆಡಳಿತ ಪಕ್ಷದ ನಾಯಕ ಆರ್.ಎಸ್.ಸತ್ಯನಾರಾಯಣ ಉಪಸ್ಥಿತರಿದ್ದರು.
↧
ಕಾಮಗಾರಿಗಳ ಆರಂಭಕ್ಕೆ 15 ದಿನ ಗಡುವು ನೀಡಿದ ಮೇಯರ್
↧