ಕೇಳುಗರ ಕಿವಿಯಲ್ಲಿ ಸದ್ಯ 'ನಟರಾಜ್ ಸವೀರ್‍ಸ್' ಸಿನಿಮಾದ ಹಾಡಿನದ್ದೇ ಗುಂಗು. ಅದರಲ್ಲೂ 'ಅಲ್ಲಾ ಯಾ ಅಲ್ಲಾ' ಸಾಂಗ್ ನೆಚ್ಚಿನ ಗೀತೆಯ ಸ್ಥಾನ ಪಡೆದಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಅನೂಪ್ ಸೀಳೀನ್, ಹಾಡಿನ ವಿಶೇಷತೆ ಬಗ್ಗೆ ಮಾತಾಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸವೀರ್‍ಸ್' ಹಾಡುಗಳು ಈಗ ಎಲ್ಲೆಲ್ಲೂ ಕೇಳಿ ಬರುತ್ತಿವೆ. ಅನೂಪ್ ಸೀಳೀನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳಲ್ಲಿ ಮಾಧುರ‍್ಯದ ಜತೆಗೆ ವಿಭಿನ್ನತೆಯೂ ಇದೆ. ಅನೂಪ್ ಸದ್ಯ ನೀರ್‌ದೋಸೆ ಸಿನಿಮಾದ ಗೆಲುವಿನಲ್ಲಿ ತೇಲುತ್ತಿದ್ದಾರೆ. ನಟರಾಜ್ ಸವೀರ್‍ಸ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆಯಲ್ಲೂ ಇದ್ದಾರೆ. ಈ ಸಿನಿಮಾದ ಹಾಡುಗಳ ಕುರಿತಾದ ಮಾತುಕತೆ ಇಲ್ಲಿದೆ. * ನಟರಾಜ್ ಸವೀರ್‍ಸ್ ಹಾಡುಗಳ ವಿಶೇಷತೆ ಏನು? ಇಲ್ಲಿನ ಮೂರು ಹಾಡುಗಳಿಗೆ ಸಾಹಿತ್ಯ ಬರೆದು, ನಂತರ ಸಂಗೀತ ಸಂಯೋಜನೆ ಮಾಡಿದ್ದೇವೆ. ನಿರ್ದೇಶಕ ಪವನ್ ಒಡೆಯರ್ ಸ್ಕ್ರಿಪ್ಟ್ ಬರೆಯುವಾಗಲೇ 'ಅಲ್ಲಾ ಯಾ ಅಲ್ಲಾ', 'ಲತ್ತೆ ಲತ್ತೆ' ಮತ್ತು 'ಪೆಟ್ರೊಲು ಮುಗಿದರೆ' ಹಾಡಿನ ಸಾಹಿತ್ಯವನ್ನೂ ಬರೆದಿದ್ದರು. ಆನಂತರ ನಾನು ಸಂಗೀತವನ್ನು ಬೆರೆಸಿದೆ. ಅದೊಂದು ವಿಶಿಷ್ಟ ಅನುಭವ. ಸಾಮಾನ್ಯವಾಗಿ ಕಂಪೋಸ್ ಮಾಡಿದ ಹಾಡಿಗೆ ಸಾಹಿತ್ಯ ಬರೆಯಲಾಗುತ್ತದೆ. ಆದರೆ, ಸಾಹಿತ್ಯವನ್ನು ತಂದಾಗ ಹುಟ್ಟುವ ಸಂಗೀತವಿದೆಯಲ್ಲ, ಅದು ಮತ್ತೊಂದು ಆನಂದವನ್ನು ತರುತ್ತದೆ. * ಇದೇ ಮೊದಲ ಬಾರಿಗೆ ಸಾಹಿತ್ಯಕ್ಕೆ ನೀವು ಸಂಗೀತ ಸಂಯೋಜನೆ ಮಾಡಿದ್ದಾ? ಇಲ್ಲ. ಈ ಮೊದಲು ಕೂಡ ಮಾಡಿದ್ದೇನೆ. ನೀರ್‌ದೋಸೆ ಸಿನಿಮಾದ 'ಹೋಗಿ ಬಾ ಬೆಳಕೆ' ಹಾಡನ್ನೂ ಹಾಗೆಯೇ ಕಂಪೋಸ್ ಮಾಡಿದ್ದು. ಮೊದಲು ಸಾಹಿತ್ಯ ಬರೆಯಲಾಗಿತ್ತು. ಆನಂತರ ಮ್ಯೂಸಿಕ್ ಕಂಪೋಸ್ ಮಾಡಲಾಯಿತು. * ಈಗಾಗಲೇ 'ಅಲ್ಲಾ ಯಾ ಅಲ್ಲಾ' ಹಾಡು ಹಿಟ್ ಆಗಿದೆ. ಈ ಹಾಡು ಕಂಪೋಸ್ ಆಗಿದ್ದು ಹೇಗೆ? ಅಲ್ಲಾ ಯಾ ಅಲ್ಲಾ ಹಾಡು ತುಂಬಾನೇ ವಿಭಿನ್ನವಾಗಿ ಮೂಡಿ ಬಂದ ಗೀತೆ. ಸೂಫಿ ಶೈಲಿಯನ್ನು ಬಳಸಿಕೊಂಡು ಕಂಪೋಸ್ ಮಾಡಿದ್ದೇನೆ. ಸೂಫಿಗೆ ಬಳಸುವ ವಾದ್ಯಗಳನ್ನು ಕೂಡ ಹಾಡಿಗಾಗಿ ಬಳಕೆ ಮಾಡಲಾಗಿದೆ. ನಿರ್ದೇಶಕರು ಕೂಡ ಅದನ್ನು ಅಷ್ಟೇ ಸೊಗಸಾಗಿ ಚಿತ್ರಿಸಿದ್ದಾರೆ. ಹೀಗಾಗಿ ಹಾಡು ಪಾಪ್ಯುಲರ್ ಆಗಿದೆ. ಲಿರಿಕ್ ಕಾಮಿಕ್ ಆಗಿದ್ದು, ಉರ್ದು ಮಿಶ್ರಿತವಾಗಿದೆ. ನಿರ್ದೇಶಕರು ನಾನೇ ಹಾಡಬೇಕು ಅಂದರು. ಅವರ ಒತ್ತಾಯಕ್ಕೆ ಹಾಡಿದೆ. * ಲತ್ತೆ ಲತ್ತೆಯ ಹಾಡಿನ ವಿಶೇಷತೆ ಏನು? 'ಲತ್ತೆ ಲತ್ತೆ' ರಿದಮಿಕ್ ಸಾಂಗ್. ಲತ್ತೆ ಅನ್ನುವ ಪದವನ್ನು ನಾವಿಲ್ಲಿ ಅರವತ್ತು ಸಲ ರಿಪೀಟ್ ಮಾಡಿದ್ದೇವೆ. ಆ ಸೌಂಡಿಂಗ್ ಜನರಿಗೆ ಇಷ್ಟವಾಗಿದೆ. * ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ ಕೇಳಿ ಬಂದ ಟೈಟಲ್ ಟ್ರ್ಯಾಕ್ ಬಗ್ಗೆ ಹೇಳುವುದಾದರೆ? ಎಲ್ಲರಿಗೂ ಗೊತ್ತಿರುವಂತೆ ಕಥಾನಾಯಕನದ್ದು ಕಳ್ಳನ ಪಾತ್ರ. ಆ ಥೀಮ್ ಹಾಡಿನಲ್ಲೂ ಬೇಕಿತ್ತು. ಅದೆಲ್ಲವನ್ನೂ ಸಾಂಗ್‌ನಲ್ಲಿ ಕೇಳಬಹುದು. ಈ ಹಾಡನ್ನು ಪುನೀತ್ ಅವರೇ ಹಾಡಬೇಕು ಅನ್ನುವುದು ಎಲ್ಲರ ಬಯಕೆ ಆಗಿತ್ತು. ಅವರು ಕೂಡ ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಈ ಹಾಡಿನ ಮತ್ತೊಂದು ವಿಶೇಷತೆ ಅಂದರೆ, ಗಿಟಾರ್ ಬಿಟ್ ಅನ್ನು ಯ್ಯೂಸ್ ಮಾಡಿ ಹಾಡು ಕಂಪೋಸ್ ಮಾಡಿದ್ದೇನೆ. * ನಿಮ್ಮ ಹಾಡಿನಲ್ಲಿ ಅಬ್ಬರದ ಸಂಗೀತವಿರುವುದಿಲ್ಲ. ಅದು ಬೇಕು ಅಂತ ಅನಿಸುವುದಿಲ್ಲವಾ? ಸಾಹಿತ್ಯ ಮತ್ತು ಸಂಗೀತ ಎರಡೂ ಕೇಳಬೇಕು ಅನ್ನುವುದು ನನ್ನ ಟೆಸ್ಟ್. ಅಲ್ಲದೇ ನಾವು ಬಳಸುವ ಪ್ರತಿ ವಾದ್ಯಗಳಿಗೂ ತನ್ನದೇ ಆದ ಮಹತ್ವವಿದೆ. ಅವುಗಳನ್ನೂ ಕೂಡ ಕೇಳುಗರು ಕೇಳಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ ಬೇರೆ ರೀತಿಯಲ್ಲೇ ಹಾಡುಗಳ ಸಂಯೋಜನೆ ಮಾಡುತ್ತೇನೆ. ನಾನು ಹಂಸಲೇಖ ಅವರ ಗರಡಿಯಲ್ಲಿ ಬೆಳೆದವನು. ಎ.ಆರ್ ರೆಹಮಾನ್ ಮತ್ತು ಇಳಯರಾಜ ಅವರ ಹಾಡುಗಳನ್ನು ಕೇಳಿದವನು. ಅವರೂ ಕೂಡ ಸಾಹಿತ್ಯಕ್ಕೆ ಅಷ್ಟೇ ಮಹತ್ವ ಕೊಡುತ್ತಾರೆ. ನಾನು ಅದೇ ದಾರಿಯಲ್ಲೇ ಸಾಗುತ್ತಿದ್ದೇನೆ. *ಮತ್ತೆ ಯಾವ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದೀರಿ? ದಯವಿಟ್ಟು ಗಮನಸಿ ಮತ್ತು ಸ್ಮೈಲ್ ಪ್ಲೀಸ್ ಚಿತ್ರಗಳಿಗೆ ಸದ್ಯ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ.
↧
ನಟರಾಜನ ಹಾಡಿನ ಮೋಡಿ
↧