ನಮ್ಮ ಹಳ್ಳಿಗಳಲ್ಲಿ ಇಂದಿಗೂ ಕೆಲ ಆಚರಣೆಗಳು ಬದಲಾಗಿಲ್ಲ, ಅವುಗಳಲ್ಲಿ ದೇವಸ್ಥಾನಗಳಿಗೆ ತಮಟೆ ಬಡಿಯುವವರಿಗೆ 'ಆಯ' ಕೊಡುವ ಪದ್ಧತಿ ಕೂಡಾ ಹೊರತಾಗಿಲ್ಲ. ಈ 'ಆಯ'ಪದ್ದತಿ ಎಂದರೆ ಹಳ್ಳಿಗಳಲ್ಲಿ ಕೆಳ ವರ್ಗದ ಜನ ಊರಿಗಾಗೆ ಕೆಲ ಕಸುಬುಗಳನ್ನು ಮಾಡಿಕೊಂಡು ಬಂದಿರುತ್ತಾರೆ, ಅವರಿಗೆ ಜೀವನ ನಿರ್ವಹಣೆಗೆ ಜನ ನೀಡುವ ಅಕ್ಕಿ ರಾಗಿಯೇ ಆಸರೆ ಇಂತವರ ಕಥೆ ಇಟ್ಟುಕೊಂಡು ಹೊಸಬರ ತಂಡವೊಂದು ಸಿನಿಮಾ ಮಾಡಿ ಮುಗಿಸಿದೆ. ಬದಲಾವಣೆ ಜಗದ ನಿಯಮ, ಆದರೆ ಈ ಬದಲಾವಣೆ ಕೆಲವರ ಜೀವನಕ್ಕೆ ಮಾರಕವಾಗುತ್ತಿದೆಯಾ, ಎನ್ನುವುದೇ ಈ ಸಿನಿಮಾದ ಮುಖ್ಯ ಕಥಾ ಹಂದರ. ಇದನ್ನು ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಘು ಎಸ್ ಪಿ. ಈ ಸಿನಿಮಾದಲ್ಲಿ ಒಬ್ಬ ತಮಟೆ ಬಾರಿಸುವವನ ಮೂಲಕ ಇಡೀ ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಹೇಳಲು ಹೊರಟಿದ್ದಾರೆ. ಊರ ದೇವರಿಗೆ ತಮಟೆ ಬಾರಿಸಿಕೊಂಡು ಜೀವನ ನಡೆಸುವ ವ್ಯಕ್ತಿಗೆ ಊರಿನ ಜನ ನೀಡುವ ದವಸ ಧಾನ್ಯಗಳೇ ಆಧಾರ. ಆದರೆ ಕಾಲ ಬದಲಾದಂತೆ ಜನ ಅವರಿಗೆ ಧಾನ್ಯಗಳನ್ನು ನೀಡುವುದನ್ನು ನಿಲ್ಲಿಸಿದಾಗ ತನ್ನ ಅಸ್ತಿತ್ವದ ಬಗ್ಗೆ ಆತ ಪ್ರಶ್ನೆ ಮಾಡತೊಡಗುತ್ತಾನೆ. ಈ ತಮಟೆ ಬಾರಿಸುವವನಿಗೆ ಒಬ್ಬ ವಿದ್ಯಾವಂತ ಮಗಳಿರುತ್ತಾಳೆ, ಅವಳು ಅಪ್ಪನ ಕೆಲಸವನ್ನು ವಿರೋಧಿಸುತ್ತಾಳೆ. ಕಡೆಗೆ ಅವನು ಮರಣ ಹೊಂದಿದಾಗ ಹೂಳಲು ಜಾಗವಿಲ್ಲದೆ, 'ಕಲ್ಬಾಣ' ಎನ್ನುವ ಆಚರಣೆಗೆ ಅವನ ದೇಹವನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರಾಪಿಡ್ ಬದಲಾವಣೆ ಯಾರನ್ನು ಬಿಡುವುದಿಲ್ಲ ಎನ್ನವುದು ಕಥೆಯ ಸಾರಂಶ. ಹಳ್ಳಿಯೊಂದರಲ್ಲಿ ಶೋಷಣೆ ಎಂಬುದು ಶೋಷಣೆಯಂತೆ ಕಾಣುತ್ತಿಲ್ಲ. ಮೌಢ್ಯವೆಂಬುದು ಆಚರಣೆಯಂತೆಯೂ, ನಂಬಿಕೆ ಎಂಬುದು ಗುಲಾಮಗಿರಿಯಂತೆಯೂ ಒಟ್ಟೊಟ್ಟಿಗೆ ಆಳುತ್ತಿರುವ ತಲ್ಲಣಗಳು ಈಗಲೂ ಹಳ್ಳಿಗಳ ಕರುಳನ್ನು ಹಿಂಡುತ್ತಿವೆ. ಹಾಗೆಂದು ಇಲ್ಲಿ ನೋವೆಂಬುದೇ ಎಲ್ಲವೂ ಆಗಿಲ್ಲ. ಹಳ್ಳಿಯ ಒಡಬಾಳಿನ ಉಲ್ಲಾಸದ ಕ್ಷ ಣಗಳು, ನಲಿವಿನ ಗಳಿಗೆಗಳು ಎಲ್ಲವೂ ಮಿಳಿತಗೊಂಡಿವೆ. ಅದರ ನಡುವೆಯೂ ಗ್ರಾಮ ಸಮಾಜದ ಜೀವಗಳನ್ನು ಇಟ್ಟಾಡಿಸುವ, ತಟ್ಟಾಡಿಸುವ ಹತ್ತಾರು ಪಲ್ಲಟಗಳೂ ಇಲ್ಲಿವೆ ಎನ್ನುತ್ತಾರೆ ನಿರ್ದೇಶಕ ರಘು. ಎಂ ಎಸ್ ಸ್ವಾಮಿ, ಆಲೂರು ದೊಡ್ಡ ನಿಂಗಪ್ಪ, ಹರಿಪ್ರಸಾದ್, ಜಡಿಯಪ್ಪ, ಮತ್ತಿತರ ಮೈಸೂರಿನ ರಂಗಕರ್ಮಿಗಳು ರಘು ಅವರ ಜೊತೆ ಕೈಜೋಡಿಸಿದ್ದಾರೆ. ಕಿರುತೆರೆ ಕಲಾವಿದ ಅನಿಲ್‌ಕುಮಾರ್, ಎನ್‌ಎಸ್‌ಡಿ ಪದವಿಧರೆ ಅಕ್ಷತಾ ಪಾಂಡವಪುರ, ಮುಖ್ಯ ಭೂಮಿಕೆಯಲ್ಲಿದ್ದಾರೆ. ಸ್ವತಃ ರಘು ಸಿನಿಮಾಗೆ ಬಂಡವಾಳವನ್ನೂ ಹೂಡಿದ್ದಾರೆ.
↧
ಪಲ್ಲಟಗಳೆಂಬ ತಲ್ಲಣಗಳ ಸುತ್ತ
↧