ಶಿಬಿರದ ಎರಡನೇ ದಿನ ಬೌಲಿಂಗ್ ಅಭ್ಯಾಸಕ್ಕೆ ಆದ್ಯತೆ ನೀಡಿದ ಅನಿಲ್ ಕುಂಬ್ಳೆ ಬೆಂಗಳೂರು: ಟೀಮ್ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರ ಕಟ್ಟಾ ಅಭಿಯಾನಿಯಾಗಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಂದ ಸಾಕಷ್ಟು ಕಲಿಯಲು ನಮಗೆ ಸುವರ್ಣಾವಕಾಶ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ಸರಣಿಗಾಗಿ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಇಲ್ಲಿನ ಎನ್‌ಸಿಎ ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದೆ.ಅಭ್ಯಾಸದ ಎರಡನೇ ದಿನವಾದ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುರಳಿ ವಿಜಯ್,''ಕುಂಬ್ಳೆ ಅವರೊಂದಿಗೆ ನನ್ನ ಮೊದಲ ಮತ್ತು ಕೊನೆಯ ಟೆಸ್ಟ್ ಪಂದ್ಯ ಒಂದೇ ಯಾಗಿದೆ. ನಿಜವಾಗಿಯೂ ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದಿಲ್ಲ. ಆದರೆ ಯುವಕನಾಗಿದ್ದಾಗ ಅವರ ಕಟ್ಟಾ ಅಭಿಮಾನಿಗಳಲ್ಲೊಬ್ಬರಾಗಿದ್ದೆ,'' ಎಂದು ಹೇಳಿದ್ದಾರೆ. ''ಕುಂಬ್ಳೆ ಅವರಿಂದ ಸಾಕಷ್ಟು ಕ್ರಿಕೆಟ್ ಕಲಿಕೆಗೆ ಯುವ ಆಟಗಾರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಅಲ್ಲದೆ ಇದು ನಮ್ಮೆಲ್ಲರಿಗೂ ಶ್ರೇಷ್ಠ ಸಮಯ ಕೂಡ,'' ಎಂದು ಆರಂಭಿಕ ಬ್ಯಾಟ್ಸಮನ್ ನುಡಿದರು. ಕುಂಬ್ಳೆ ಮತ್ತು ಕೊಹ್ಲಿ ಅವರ ಸಂಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮುರಳಿ, ಇದರ ಕುರಿತು ನಾನೇನು ಹೇಳಲು ಬಯಸುವುದಿಲ್ಲ. ಆದರೆ ಮುಂದಿನ 12 ತಿಂಗಳ ಭಾರತ ತಂಡಕ್ಕೆ ಅತ್ಯುತ್ತಮವಾಗಿದೆ ಎಂದರು. ರವಿಶಾಸ್ತ್ರಿ ಅವರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರವಿಶಾಸ್ತ್ರಿ ಅವರು ಟೀಮ್ ಇಂಡಿಯಾದ ನಿರ್ದೇಶಕರಾಗಿದ್ದಾಗ ಭಾರತ ತಂಡ ಅವರೊಂದಿಗೆ ಉತ್ತಮ ಸಮಯ ಕಳೆದಿದೆ.ಇದೀಗ ಆಟಗಾರರು ಕುಂಬ್ಳೆ ಅವರಿಂದ ಹಲವು ತಂತ್ರಗಳನ್ನು ಕಲಿಯಲಿದ್ದಾರೆ ಎಂದು ಹೇಳಿದರು. ಹಿಂದಿನ ಹಾಗೂ ಈಗೀನ ವೆಸ್ಟ್ ಇಂಡೀಸ್ ಪ್ರವಾಸದ ವ್ಯತ್ಯಾಸ ಕುರಿತು ವಿವರಿಸಿದ ತಮಿಳುನಾಡು ಬ್ಯಾಟ್ಸ್‌ಮನ್ ಮುರಳಿ, ಇದೊಂದು ಮನರಂಜನಾತ್ಮಕ ಸರಣಿಯಾಗಿದೆ. ಈ ಸರಣಿ ನ್ಯೂಜಿಲೆಂಡ್ ಮತ್ತು ತವರಿನಲ್ಲಿ ನಡೆಯಲಿರುವ ಸರಣಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಹಿಂದಿನ ವೆಸ್ಟ್ ಇಂಡೀಸ್ ಪ್ರವಾಸದ ಅನುಭವ ಬಿಚ್ಚಿಟ್ಟ ಅವರು, '' ವೆಸ್ಟ್ ಇಂಡೀಸ್‌ನಲ್ಲಿ ಕಳೆದ ಬಾರಿ ನಾನು ಉತ್ತಮ ಪ್ರದರ್ಶನ ತೋರಲಿಲ್ಲ, ಆದರೆ ತಂಡ ಅಮೋಘ ಪ್ರದರ್ಶನ ನೀಡಿತ್ತು. ಈ ಭಾರಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದೇನೆ,'' ಎಂದರು. ಬೌಲಿಂಗ್ ಮಾಡಿದ ಕುಂಬ್ಳೆ ನೆಟ್‌ನಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸ್ವತಃ ಅನಿಲ್ ಕುಂಬ್ಳೆ ಅವರೇ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಭಾರತದ ಹಿಂದಿನ ಯಾವುದೇ ಕೋಚ್‌ಗಳು ಆಟಗಾರರಿಗೆ ಬೌಲಿಂಗ್ ಮಾಡಿದ ನಿದರ್ಶನಗಳು ವಿರಳ. ಆದರೆ ಕೋಚ್ ಹುದ್ದೆ ಅಲಂಕರಿಸುವ ಮೂಲಕ ವೃತ್ತಿ ಬದುಕಿನಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿರುವ ಕುಂಬ್ಳೆ, ನೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಹೊತ್ತು ಬೌಲಿಂಗ್ ಮಾಡಿದರು. ವಿರಾಟ್ ಕೊಹ್ಲಿ, ಮುರಳಿ ವಿಜಯ್, ಚೇತೇಶ್ವರ ಪೂಜಾರ ಸೇರಿದಂತೆ ಹಲವರು ಬ್ಯಾಟಿಂಗ್ ಅಭ್ಯಾಸಕ್ಕೆ ಹೆಚ್ಚು ಹೊತ್ತು ಕೊಟ್ಟರೆ, ಮಧ್ಯಮ ವೇಗಿ ಸ್ಟುವರ್ಟ್ ಬಿನ್ನಿ, ವೇಗದ ಬೌಲರ್ ಇಶಾಂತ್ ಶರ್ಮಾ, ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಅಮಿತ್ ಶಾ ಸೇರಿದಂತೆ ಇತರರು ಬೌಲಿಂಗ್ ವಿಭಾಗದಲ್ಲಿ ಕಠಿಣ ತಾಲೀಮು ನಡೆಸಿದರು. ರಾಜ್ಯ ರಣಜಿ ಆಟಗಾರರು ಭಾಗಿ ಟೀಮ್ ಇಂಡಿಯಾದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶ ಗಿಟ್ಟಿಸಿರುವ ರಾಜ್ಯ ರಣಜಿ ತಂಡದ ಆಟಗಾರರು ಭಾರತ ತಂಡ ಆಟಗಾರರಿಗೆ ಬೌಲಿಂಗ್ ಮಾಡಿ ಮುಂಬರುವ ರಣಜಿ ಟೂರ್ನಿಗೆ ಈಗಿನಿಂದಲೇ ಸಮರಾಭ್ಯಾಸ ಶುರು ಮಾಡಿದರು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದ ರಾಜ್ಯ ತಂಡದ ನಾಯಕ ಆರ್.ವಿನಯ್ ಕುಮಾರ್, ಶ್ರೇಯಸ್ ಗೋಪಾಲ್, ಎಚ್.ಎಸ್. ಶರತ್ ಸೇರಿದಂತೆ ಹಲವರು ಬೌಲಿಂಗ್ ಮಾಡಿದರು. ಟೀಮ್ ಇಂಡಿಯಾದ ಬೌಲಿಂಗ್ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿರುವ ನೂತನ ಕೋಚ್ ಅನಿಲ್ ಕುಂಬ್ಳೆ, ಶಿಬಿರದಲ್ಲಿ ರಾಜ್ಯ ತಂಡದ ಬೌಲರ್‌ಗಳಿಗೆ ಅವಕಾಶ ನೀಡಿ ಪರಿಣತಿಗೆ ನೆರವಾದರು.
↧
ಕಲಿಕೆಗೆ ಸುವರ್ಣಾವಕಾಶ: ಮುರಳಿ ವಿಜಯ್
↧