ಶಾನ್ವಿ ಶ್ರೀವಾಸ್ತವ್ ಇಟಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಂದ ಹಾಗೆ ಇವರು ಇಟಲಿಗೆ ಹೋಗಿರುವುದು ವೆಕೇಷನ್ ಮೇಲೆ ಅಲ್ಲ. ರವಿಚಂದ್ರನ್ ಪುತ್ರ ಮನೋರಂಜನ್ ಜತೆ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ನಟಿಸುತ್ತಿದ್ದು ಅದರ ಚಿತ್ರೀಕರಣಕ್ಕಾಗಿ ಇಟಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಶೂಟಿಂಗ್‌ಗೂ ವೆಕೇಷನ್‌ಗೂ ಹೆಚ್ಚು ವ್ಯತ್ಯಾಸ ಇಲ್ಲ ಎನ್ನುತ್ತಾರೆ ಈ ನಟಿ. ಸಾಮಾಜಿಕ ಜಾಲತಾಣದಲ್ಲಿ ಇಟಲಿಯ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮೊದಲ ಚಿತ್ರ ಇದು. ಪಾತ್ರಕ್ಕಾಗಿ ಕುದುರೆ ಸವಾರಿ ಕಲಿತಿದ್ದಾರೆ. ಇಟಲಿಯಲ್ಲಿ ಮನೋರಂಜನ್ ಜತೆ ಶಾನ್ವಿ ಡ್ಯುಯೆಟ್ ಹಾಡಿದ್ದಾರೆ. 'ಶೂಟಿಂಗ್ ಅಂದರೆ ವೆಕೇಷನ್ ಇದ್ದ ಹಾಗೆ. ಹೊಸ ಜಾಗ, ಹೊಸ ಅನುಭವ, ಮೋಜು ಮಸ್ತಿ' ಎನ್ನುವ ಶಾನ್ವಿ ಶೂಟಿಂಗ್‌ನಲ್ಲೂ ಸಖತ್ತಾಗೆ ಎಂಜಾಯ್ ಮಾಡುತ್ತಿದ್ದಾರೆ. ಶಾನ್ವಿ ಕನ್ನಡದ ಬೇಡಿಕೆಯ ನಟಿಯಾಗುತ್ತಿದ್ದಾರೆ. ಪರಭಾಷೆಯಿಂದ ಬಂದ ಇವರು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಾಣುವ ಲಕ್ಷಣ ಇದೆ. ಮನೋರಂಜನ್ ಜತೆಗಿನ ಸಿನಿಮಾ ಮುಗಿಯುತ್ತಿದ್ದಂತೆ ಗಣೇಶ್ ಜತೆಗೆ 'ಗಂಡು ಎಂದರೆ ಗಂಡು' ಚಿತ್ರದಲ್ಲಿ ನಟಿಸಲಿದ್ದಾರೆ ಶಾನ್ವಿ. ಹೀಗೆ ಒಂದರ ನಂತರ ಒಂದರಂತೆ ಅವಕಾಶಗಳನ್ನು ಬಾಚುತ್ತಿದ್ದಾರೆ. ಈಗಾಗಲೆ ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಗಿದಿದ್ದು ಇನ್ನು ಕೆಲವು ಹಾಡುಗಳು ಬಾಕಿ ಇವೆಯಂತೆ. ಅದರಲ್ಲಿಯೂ ಎರಡು ಹಾಡುಗಳನ್ನು ಇಟಲಿಯಲ್ಲಿ ಶೂಟ್ ಮಾಡಲಾಗಿದೆ. 'ಹಾಡು ಹಾಗೂ ಕೆಲವು ದೃಶ್ಯಗಳ ಚಿತ್ರೀಕರಣಕ್ಕಾಗಿ ಇಟಲಿಗೆ ಹೋಗಿದ್ದೆವು. ಆದರೆ ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸ್ವಲ್ಪ ಕಷ್ಟ ಆಯ್ತು. ಆದರೂ ತಂಡದ ಪರಿಶ್ರಮದಿಂದಾಗಿ ಕೆಲಸಗಳು ಚೆನ್ನಾಗಿ ನಡೆಯಿತು' ಎನ್ನುತ್ತಾರೆ ನಿರ್ದೇಶಕ ಭರತ್. ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಜಿ.ಎಸ್.ವಿ. ಸೀತಾರಾಮ್ ಛಾಯಾಗ್ರಹಣವಿದೆ.
↧
ಇಟಲಿಯಲ್ಲಿ ಶಾನ್ವಿ ಡ್ಯುಯೆಟ್
↧