ಕಾಮಿಡಿ ಸೀರಿಸ್‌ಗೆ ಫಿಕ್ಸ್ ಆಗಿರುವ ಶರಣ್ ಬತ್ತಳಿಕೆಯಿಂದ ಈ ವಾರ ಹೊರಬರುತ್ತಿರುವ ಇನ್ನೊಂದು ಹಾಸ್ಯ ಚಿತ್ರ 'ಜೈ ಮಾರುತಿ 800'. ಈ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟುಹಾಕಲು ನಿರ್ದೇಶಕ ಹರ್ಷ ಕೂಡಾ ಕಾರಣರಾಗಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಮತ್ತು ವಜ್ರಕಾಯ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಈ ಡೈರೆಕ್ಟರ್. ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಾಮಿಡಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಎರಡು ಶತಮಾನಗಳ ನಡುವಿನ ಕತೆಯನ್ನು ಹಾಸ್ಯದ ಮೂಲಕ ಹೇಳುತ್ತಿದ್ದಾರೆ.
ಚಿತ್ರದಲ್ಲಿ ಶರಣ್‌ಗೆ ಇಬ್ಬರು ನಾಯಕಿಯರಿದ್ದು, ಶ್ರುತಿ ಹರಿಹರನ್ ಮತ್ತು ಶುಭಾ ಪೂಂಜಾ ಈ ಪಾತ್ರಗಳಲ್ಲಿ ನಟಿಸಿದ್ದಾರೆ. ಶುಭಾ ಪೂಂಜಾ ಮುಗ್ಧತೆ ಮತ್ತು ಹಾಸ್ಯಮಯ ಪಾತ್ರದಲ್ಲಿ ಹಾಗೂ ಶ್ರುತಿ ಹರಿಹರನ್ ಹಳ್ಳಿಯ ಹುಡುಗಿಯಾಗಿ ಮೆಚ್ಯೂರ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
'ಈ ಚಿತ್ರ ಒಪ್ಪಿಕೊಳ್ಳಲು ಕಾರಣ ಹರ್ಷ. ಅವರು ಡಿಫರೆಂಟ್ ಆಗಿ ಸಿನಿಮಾ ಮಾಡ್ತಾ ಬಂದಿದ್ದಾರೆ. ರಿಚ್ ಆಗಿ ತೋರಿಸುತ್ತಾರೆ. ಈ ಸಿನಿಮಾನೂ ತುಂಬಾ ರಿಚ್ ಆಗಿ ಬಂದಿದೆ. ನೂರಾರು ವರ್ಷಗಳ ಹಿಂದಿನ ಘಟನೆ ಎಂಬುದನ್ನು ತೋರಿಸಿದ್ದರೂ ಇದು ರಾಜನ ಕತೆ ಅಲ್ಲ' ಎನ್ನುತ್ತಾರೆ ನಟ ಶರಣ್. ಇದು ಆ್ಯಕ್ಷನ್ ಚಿತ್ರ ಅಲ್ಲ ಎಂದಿರುವ ಅವರು, ಒಂದು ಫೈಟ್ ದೃಶ್ಯಕ್ಕಾಗಿ ಸಿಕ್ಸ್ ಪ್ಯಾಕ್‌ನಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳುತ್ತಾರೆ. ಜಯಣ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಉತ್ತರ ಕರ್ನಾಟಕದ ವಾಡೆ ಮನೆಗಳು, ಕಪ್ಪು ಮಣ್ಣಿನ ಸೊಗಡನ್ನು ಚಿತ್ರದಲ್ಲಿ ನೋಡಬಹುದು. 16ನೇ ಶತಮಾನದಲ್ಲಿ ಚಂದ್ರವರ್ಮಾ ಎಂಬ ರಾಜನ ಕಾಲದಲ್ಲಿ ಶುರುವಾದ ಘಟನೆ 2016ರಲ್ಲಿ ಎಂಡ್ ಆಗುತ್ತೆ.
ಈ ಚಿತ್ರದಲ್ಲಿ ನಾಯಕನ ಹಾಸ್ಯಕ್ಕೆ ಜೋಡಿಯಾಗಿದ್ದಾರೆ ಅರುಣ್. 'ಇವರಿಬ್ಬರ ಕಾಂಬಿನೇಷನ್ ಜನಪ್ರಿಯತೆ ಗಳಿಸಲಿದೆ ಅನ್ನೋ ವಿಶ್ವಾಸ ನನಗಿದೆ. ಅರುಣ್ ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ' ಎನ್ನುತ್ತಾರೆ ಹರ್ಷ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಜನಪ್ರಿಯತೆ ಗಳಿಸಿವೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬಂದಿವೆ. ಮಾರುತಿ ಮಹಿಮೆಯನ್ನು ಹೇಳುವ ಹಾಡೊಂದಕ್ಕೆ ಪುನೀತ್ ಧ್ವನಿ ನೀಡಿದ್ದಾರೆ. ಮಲೇಷಿಯಾದಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
--- ಜಯಣ್ಣ ಕಂಬೈನ್ಸ್‌ನ ಚಿತ್ರ ಜೈ ಮಾರುತಿ 800 ಇಂದು ರಾಜ್ಯಾದ್ಯಂತ ಬಿಡುಗಡೆ.
- ಪದ್ಮಾ ಶಿವಮೊಗ್ಗ