ಈ ಕಟ್ಟೆಚ್ಚರ, ಪೊಲೀಸರ ಸರ್ಪಗಾವಲಿನ ನಡುವೆ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ನಿರ್ವಿಘ್ನವಾಗಿ ನಡೆಯಿತು. ಸೂಕ್ಷ್ಮ ಸೇನಾನೆಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಭದ್ರತಾ ಸಿಬ್ಬಂದಿ ಶಂಕಿತರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೊಸದಿಲ್ಲಿಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡಸಿ, ಆಂತರಿಕ ಭದ್ರತಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಯಾವುದೇ ರೀತಿಯ ದಾಳಿ ಸಾಧ್ಯತೆಗಳನ್ನು ಸಮರ್ಥವಾಗಿ ನಿಭಾಯಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವಂತೆ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸದಿಲ್ಲಿಯ ಸಂಸತ್ ಭವನ, ಹೆಸರಾಂತ ದೇವಾಲಯಗಳು, ಸಾಂಪ್ರದಾಯಿಕ ಕಟ್ಟಡಗಳು ಮತ್ತು ಜನಪ್ರಿಯ ಮಾರುಕಟ್ಟೆ ಮತ್ತು ರೈಲು, ಬಸ್, ಮೆಟ್ರೊ ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ಗುಜರಾತ್‌ನಲ್ಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿ, ಯಾವುದೇ ಅಹಿತಕರ ಪರಿಸ್ಥಿತಿ ನಡೆಯದಂತೆ ಕ್ರಮ ಕೈಗೊಂಡರು. ಸೋಮನಾಥಪುರ ದೇಗುಲಕ್ಕೆ 8 ಪದರದ ಎನ್‌ಎಸ್‌ಜಿ ಭದ್ರತೆ ಒದಗಿಸಲಾಗಿದೆ.
ಪ್ರತ್ಯೇಕ ತಂಡಗಳಲ್ಲಿ ದಾಳಿ ಸಂಭವ
ದೇಶದೊಳಗೆ ನುಸುಳಿರುವ ಲಷ್ಕರ್ ಮತ್ತು ಜೈಷೆ ಸಂಘಟನೆ 10 ಉಗ್ರರು ಐದು ತಂಡಗಳನ್ನು ಮಾಡಿಕೊಂಡು, ದೇಶದ ವಿವಿಧೆಡೆ ದಾಳಿ ನಡೆಸುವ ಸಾಧ್ಯತೆಗಳನ್ನು ಇನ್ನೂ ತಳ್ಳಿ ಹಾಕುವಂತಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಹೊಸದಿಲ್ಲಿ/ ಅಹಮದಾಬಾದ್: ಭಾರತದಲ್ಲಿ ನಡೆಯುವ ಶಿವರಾತ್ರಿ ಆಚರಣೆಗೆ ಭಂಗ ತರುವ ಉದ್ದೇಶದಿಂದ 10 ಉಗ್ರರು ಪಾಕಿಸ್ತಾನದಿಂದ ಗುಜರಾತ್ ಗಡಿ ದಾಟಿ ಬಂದಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ದಿಲ್ಲಿ, ಗುಜರಾತ್ ಸೇರಿದಂತೆ ದೇಶದ ಅನೇಕ ಕಡೆ ಪ್ರಮುಖ ದೇಗುಲಗಳಿಗೆ ಸೋಮವಾರ ಬಿಗಿಭದ್ರತೆ ಒದಗಿಸಲಾಗಿತ್ತು.