-ಪದ್ಮಾ ಶಿವಮೊಗ್ಗ
ಇಂಗ್ಲಿಷ್‌ನಲ್ಲಿ ಎಚ್.ಜಿ. ವೇಲ್ಸ್ ಬರೆದ ಕಾದಂಬರಿ ಟೈಮ್ ಮೆಷಿನ್. ಇದನ್ನು ಕನ್ನಡಕ್ಕೆ ಡಾ. ಪಿ. ಪುಟ್ಟಸ್ವಾಮಿ ಅನುವಾದ ಮಾಡಿದ್ದಾರೆ. ಈ ಕತೆಯನ್ನೇ ಅನುಸರಿಸಿ ತೆರೆಗೆ ಬಂದಿರುವ ಚಿತ್ರ ಮಿಂಚಾಗಿ ನೀ ಬರಲು. ದಿಗಂತ್ ಮತ್ತು ಕೃತಿ ಕರಬಂಧ ಅಭಿನಯದ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಮುಂಬೈನ ರಣದೀಪ್ ಶಾಂತಾರಾಮ್ ಜೈಸ್ವಾಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ನೋಡುಗರನ್ನು ನಿರಾಶೆ ಮಾಡುವುದಿಲ್ಲ.
ಕನ್ನಡದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ವಿಭಿನ್ನ ಕಥಾವಸ್ತುವನ್ನು ಸಿನಿಮಾ ಮಾಡಲಾಗಿದೆ. ವಿಜ್ಞಾನಿಯೊಬ್ಬ ಟೈಮ್ ಮೆಷಿನ್ ಕಂಡು ಹಿಡಿದು ಡ್ರೀಮ್ ಮೆಷಿನ್ ಎಂದು ಹೆಸರಿಟ್ಟಿರುತ್ತಾನೆ. ಭೂತಕಾಲ, ಭವಿಷ್ಯ ಕಾಲದಲ್ಲಿರುವವರೊಂದಿಗೆ ಮಾತನಾಡಬಹುದಾದ ಮೆಷಿನ್ ಇದು. ಚಿಕ್ಕವಯಸ್ಸಿನಲ್ಲಿದ್ದಾಗಲೇ ರೈಲ್ವೇ ಸ್ಟೇಷನ್‌ನಲ್ಲಿ ಮಗಳನ್ನು ಕಳೆದುಕೊಂಡಿದ್ದ ಸೈಂಟಿಸ್ಟ್ ಅನಾಥ ಹುಡುಗ ಜೈ (ದಿಗಂತ್)ಗೆ ಆಶ್ರಯ ನೀಡಿರುತ್ತಾನೆ. ವಿಜ್ಞಾನಿ ಸತ್ತ ನಂತರ ದಿಗಂತ್ ಡ್ರೀಮ್ ಮೆಷಿನ್ ಇರೋದು ಗೊತ್ತಾಗುತ್ತೆ. ಅಕಸ್ಮಾತ್ ಈ ಮೆಷಿನ್‌ನಿಂದಾಗಿ ನಾಯಕಿ ಪ್ರಿಯಾಂಕಾ (ಕೃತಿ ಕರಬಂಧ) ವಾಕಿಟಾಕಿಯ ಮೂಲಕ ಇವನ ಸಂಪರ್ಕ ಸಾಧಿಸುತ್ತಾಳೆ. ಆದರೆ, ಅವಳು 1999ನೇ ಇಸವಿಯಲ್ಲಿ ಜೀವಿಸುತ್ತಿರುತ್ತಾಳೆ. ದಿಗಂತ್ 2015ನೇ ಇಸವಿಯಲ್ಲಿರುತ್ತಾನೆ. ಡ್ರೀಮ್ ಮೆಷಿನ್‌ನಿಂದಾಗಿ ಅವನು 16 ವರ್ಷ ಹಿಂದಿನ ಬದುಕಿನಲ್ಲಿದ್ದ ಕೃತಿಯನ್ನು ಸಂಪರ್ಕಿಸುವುದು ಸಾಧ್ಯವಾಗಿರುತ್ತದೆ. ಇಬ್ಬರೂ ದಿನಾ ಚಾಟಿಂಗ್ ಮಾಡುತ್ತಾ ಸ್ನೇಹಿತರಾಗುತ್ತಾರೆ. ಸೈಂಟಿಸ್ ತನ್ನ ಕಳೆದು ಹೋದ ಮಗಳು ಅಂಜಲಿಯನ್ನು ಹುಡುಕುವಂತೆ ಹೇಳಿರುತ್ತಾನೆ. ಇದಕ್ಕೆ ದಿಗಂತ್ ಕೃತಿ ಸಹಾಯ ಯಾಚಿಸುತ್ತಾನೆ. ಈ ಮಧ್ಯೆ ಡ್ರೀಮ್ ಮೆಷಿನ್ ಕೆಟ್ಟುಹೋಗಿ ಇಬ್ಬರ ನಡುವೆ ಸಂಪರ್ಕ ಕಡಿದುಹೋಗುತ್ತದೆ. ಜೈ ತಾನು ಪ್ರೀತಿಸಿದ ಪ್ರಿಯಾಂಕಳನ್ನು ಹುಡುಕಲು ಪರದಾಡುತ್ತಾನೆ. ಕೊನೆಗೆ ಜೈ ಪ್ರಿಯಾಂಕಾಳನ್ನು ಹೇಗೆ ಹುಡುಕುತ್ತಾನೆ? ವಿಜ್ಞಾನಿಯ ಕಳೆದುಹೋದ ಮಗಳು ಸಿಗುತ್ತಾಳಾ? 2015ರಲ್ಲಿರುವ ಜೈನನ್ನು ಪ್ರಿಯಾಂಕಾ ಭೇಟಿ ಮಾಡುವುದು ಸಾಧ್ಯವಾಗುತ್ತಾ? ಎನ್ನುವುದೇ ಸಸ್ಪೆನ್ಸ್.
ಬಾಲಿವುಡ್‌ನಲ್ಲಿ ಪ್ರಿಯಾಂಕಾ ಮತ್ತು ರಣಬೀರ್‌ಗೆಂದು ಬರೆದ ಕತೆಯನ್ನು ರಣದೀಪ್ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ನಾಯಕ ನಾಯಕಿಯ ಹುಡುಕಾಟದಲ್ಲಿ ತೊಡಗುವುದು 'ಬೆಳದಿಂಗಳ ಬಾಲೆ' ಚಿತ್ರವನ್ನು ನೆನಪಿಸುತ್ತದೆ. ಮೊದಲರ್ಧ ಕುತೂಹಲ ಕೆರಳಿಸುತ್ತಾ ಸಾಗುವ ಚಿತ್ರ ದ್ವಿತಿಯಾರ್ಧದಲ್ಲಿ ಮಂದ ಅನ್ನಿಸಿದರೂ ನೋಡಿಸಿಕೊಂಡು ಹೋಗುತ್ತದೆ. ನಿರ್ದೇಶಕರ ಸಾಮರ್ಥ್ಯವೇ ಚಿತ್ರ ಉಳಿಸಿದೆ. ನಿರೂಪಣಾ ಶೈಲಿ ಮತ್ತು ಸಂಭಾಷಣೆಯಿಂದ ಗಟ್ಟಿಗೊಳಿಸಲಾಗಿದೆ. ಚಿತ್ರದ ಸ್ಕ್ರೀನ್ ಪ್ಲೇ, ಛಾಯಾಗ್ರಹಣ ಪ್ಲಸ್ ಪಾಯಿಂಟ್. ದಿಲೀಪ್ ರಾಜ್ ಮತ್ತು ದಿಗಂತ್ ನಡುವಿನ ಸ್ನೇಹ, ಕೃತಿ ಮತ್ತು ದಿಗಂತ್‌ರ ಪ್ರೇಮ ಭಾವನಾತ್ಮಕ ಸನ್ನಿವೇಶಗಳು ಸೊಗಸಾಗಿವೆ. ದಿಗಂತ್ ಅಭಿನಯದಲ್ಲಿ ಸುಧಾರಿಸಿದ್ದಾರೆ. ಕೃತಿ ರಸ ತೆಗೆದ ಕಬ್ಬಿನ ಜಲ್ಲೆಯಂತೆ ಕಾಣುತ್ತಾರೆ. ದಿಲೀಪ್ ರಾಜ್ ಉತ್ತಮ ಅಭಿನಯ ಎದ್ದು ಕಾಣುತ್ತದೆ. ಹಾಡುಗಳು ಚೆನ್ನಾಗಿವೆ. ಸೈನ್ಸ್ ಫಿಕ್ಷನ್ ಸ್ಟೋರಿ ಇಟ್ಟುಕೊಂಡು ನೋಡಬಹುದಾದ ರೀತಿಯಲ್ಲಿ ನೀಟ್ ಆಗಿ ಸಿನಿಮಾ ಮಾಡಿರುವುದು ನಿರ್ದೇಶಕರ ಹೆಗ್ಗಳಿಕೆ.
ಚಿತ್ರ: ಮಿಂಚಾಗಿ ನೀ ಬರಲು (ಕನ್ನಡ)