ಯಾದಗಿರಿ: ಹಾನಗಲ್‌ನ ಕುಮಾರ ಮಹಾಶಿವಯೋಗಿಗಳ 150ನೇ ಜಯಂತ್ಯುತ್ಸವ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಹಿನ್ನೆಲೆ ಮಹಾಶಿವಯೋಗಿಯ ಚಿಂತನೆಗಳನ್ನು ಸಮಾಜಕ್ಕೆ ಪುಚಯಿಸುವ ಉದ್ದೇಶÜದಿಂದಾಗಿ ಜಿಲ್ಲೆಯ ನಾನಾ ಕಡೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕೋಡಾಲದ ಪಂಚಮ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರ ಮಹಾಶಿವಯೋಗಿಗಳು 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸುವ ಮೂಲಕ ಹರಿದು ಹಂಚಿಹೋಗಿದ್ದ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿದರು ಎಂದರು. ಮಾರ್ಚ್ 8 ರಂದು ಸಂಜೆ 7ಕ್ಕೆ ಶಹಾಪುರದ ಫಕೀರೇಶ್ವರ ಮಠದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಮಾ. 9ರಂದು ಶಹಾಪುರ ತಾಲೂಕಿನ ವಡಗೇರಾ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ, ಮಾ. 10ರಂದು ಶಹಾಪುರ ತಾಲೂಕಿನ ಮೂಡಬೂಳದ ಮಡಿವಾಳೇಶ್ವರ ಮಠದಲ್ಲಿ ದತ್ತಿ ಉಪನ್ಯಾಸಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮಾ. 16ರಂದು ನಗರದ ಮೈಲಾಪುರ ಅಗಸಿಯಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಭಾವಚಿತ್ರ ಭವ್ಯ ಮೆರವಣಿಗೆ ಹಿಂದಿ ಪ್ರಚಾರ ಸಭಾವರೆಗೆ ನಡೆಯುವುದು. ನಂತರ ಆವರಣದಲ್ಲಿ ಕಾರ್ಯಕ್ರಮ ಮುಕ್ತಾಯ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಶೈಕ್ಷಣಿಕ ಅಭಿವೃದ್ಧಿಗಾಗಿ ಬೆಳಗಾವಿಯ ಕೆಎಲ್‌ಇ, ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ವಿಜಪುರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲು ಮಹಾಶಿವಯೋಗಿಗಳ ಸಂಕಲ್ಪ ಶಕ್ತಿ ಪ್ರಮುಖ ಕಾರಣ. ಅವರು 100 ವರ್ಷಗಳ ಹಿಂದೆ ದೇಶೀಯ ಗೋತಳಿಗಳನ್ನು ಶಿವಯೋಗ ಮಂದಿರದಲ್ಲಿ ಸಂರಕ್ಷಿಸಿದ್ದಾರೆ ಎಂದರು. ವಿದ್ಯಾರ್ಥಿಗಳಿಗೆ ಯೋಗ, ಶಿವಯೋಗ ಮತ್ತು ಆಯುರ್ವೇದದ ಕುರಿತು ಜನಜಾಗೃತಿ ಉಂಟು ಮಾಡಿದ್ದಾರೆ. ಇದರಿಂದಾಗಿ ಪ್ರಸ್ತುತವಾಗಿ ಇಡೀ ವಿಶ್ವವೇ ಯೋಗದತ್ತ ಮುಖಮಾಡಿದೆ. ಇದು ನಮ್ಮ ಸಂಸ್ಕೃತಿಗೆ ಸಿಕ್ಕ ಅಪುರ್ವ ಗೌರವವಾಗಿದೆ ಎಂದು ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಕರ್ನಾಟಕದಲ್ಲಿ ವೀರಶೈವ ಮಠಗಳು ಜೀವಂತ ಚೈತನ್ಯಪುರ್ವಕವಾಗಿರಲು ಕುಮಾರ ಸ್ವಾಮೀಜಿ ಅವರ ಶ್ರಮವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಶಿವಕುಮಾರ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ವಿರೇಶ್ವರ ಸ್ವಾಮೀಜಿ, ನಿಜಗುಣ ದೇವರು, ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ, ಸೋಮನಾಥ ಜೈನ್, ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರು, ಬಸವಂತರಾಯಗೌಡ ಪಾಟೀಲ್, ಚನ್ನಪ್ಪ ಠಾಣಗುಂದಿ, ನೀಲಕಂಠ ಶೀಲವಂತ, ಬಸವರಾಜ ಮೋಟ್ನಳ್ಳಿ ಸೇರಿದಂತೆ ಇನ್ನಿತರರಿದ್ದರು.
↧
ಮಾ. 8ರಿಂದ ಜಿಲ್ಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ
↧