Quantcast
Channel: VijayKarnataka
Viewing all articles
Browse latest Browse all 6795

ನಿರ್ಭಯಾ ಅತ್ಯಾಚಾರ: ಬಾಲಾಪರಾಧಿ ಬಿಡುಗಡೆಗಿಲ್ಲ ತಡೆ

$
0
0

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್, ಡಿ. 20ರಂದು ಬಿಡುಗಡೆಗೊಳ್ಳಲಿದ್ದಾನೆ ಎಂದು ಶುಕ್ರವಾರ ಪ್ರಕಟಿಸಿದೆ.

ಪ್ರಕರಣದ ಪ್ರಮುಖ ಅಪರಾಧಿಯಾಗಿರುವ ಈತನ ಬಿಡುಗಡೆ ವಿರುದ್ಧ ವ್ಯಕ್ತವಾಗಿರುವ ತೀವ್ರ ವಿರೋಧ ಮತ್ತು ಬಿಡುಗಡೆಗೆ ತಡೆ ಕೋರಿ ಸಲ್ಲಿಕೆಯಾಗಿದ್ದ ಮನವಿಗಳನ್ನು ಬದಿಗಿರಿಸಿದ ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ನಾಥ್ ಅವರಿದ್ದ ಪೀಠವು, ಪ್ರಸಕ್ತ ಕಾನೂನಿನಡಿ ಈ ಅಪರಾಧಿಯ ಬಿಡುಗಡೆಯನ್ನು ತಡೆ ಹಿಡಿಯುವ ಅವಕಾಶ ಇಲ್ಲ. ಗರಿಷ್ಠ ಮೂರು ವರ್ಷ ಸುಧಾರಣಾ ಗೃಹದಲ್ಲಿ ಇರಿಸಲು ಕಾನೂನಿನಲ್ಲಿ ಅವಕಾಶವಿದ್ದು, ಆ ಅವಧಿ ಮುಗಿದಿದೆ ಎಂದು ಹೇಳಿದೆ.

ಬಿಡುಗಡೆ ಬಳಿಕ ಪುನರ್ವಸತಿ ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರಲು ಅವಕಾಶ ಕಲ್ಪಿಸುವ ಯೋಜನೆ ಕುರಿತು ಬಾಲಾಪರಾಧಿ, ಆತನ ಕುಟುಂಬ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುವಂತೆ ಬಾಲ ನ್ಯಾಯಮಂಡಳಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಕೇಂದ್ರ ಮಾನವ ಹಕ್ಕುಗಳ ಆಯೋಗವು ಮಧ್ಯೆ ಪ್ರವೇಶಿಸಿ ಅಪರಾಧಿಯ ಬಿಡುಗಡೆಯನ್ನು ತಡೆ ಹಿಡಿಯಬೇಕು ಎಂದು ನಿರ್ಭಯಾ ಪೋಷಕರು ಮನವಿ ಸಲ್ಲಿಸಿದ್ದರು. ಭೀಕರ ಅಪರಾಧ ಕೃತ್ಯಗಳ ವಿಚಾರಣೆಯಲ್ಲಿ ವಯೋಮಿತಿ ಇಳಿಕೆ ಮಾಡಬೇಕು ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಸೇರಿದಂತೆ ಸಾರ್ವಜನಿಕ ಆಗ್ರಹವೂ ಕೇಳಿ ಬಂದಿತ್ತು. ಬಿಡುಗಡೆಯಾದ ಬಳಿಕ ಆಂಥ ಅಪರಾಧಿಗಳ ಮೇಲೆ ನಿಗಾ ವ್ಯವಸ್ಥೆಯ ಅಗತ್ಯವಿದೆ ಎಂದೂ ಸಚಿವೆ ಹೇಳಿದ್ದರು.



ಮನವಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ನೋಟಿಸ್ :

ಬಾಲಾಪರಾಧಿಯ ಬಿಡುಗಡೆಯನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ದಿಲ್ಲಿ ಮತ್ತು ಕೇಂದ್ರ ಸರಕಾರಗಳಿಗೆ ನೋಟಿಸ್ ನೀಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಮಾ.28ಕ್ಕೆ ನಿಗಡಿಪಡಿಸಿದೆ.

ಬಾಲಾಪರಾಧಿಯು ಒಬ್ಬ ಮೃಗವಾಗಿದ್ದು, ಆತನನ್ನು ಈಗಲೇ ಬಿಡುಗಡೆಗೊಳಿಸಿದರೆ ಸಮಾಜಕ್ಕೆ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಸುಧಾರಣಾ ಗೃಹದಲ್ಲಿ ಆತನ ಮೂಲ ಮನಸ್ಥಿತಿ ಬದಲಾಗಿರುವುದಕ್ಕೆ ಯಾವುದೇ ಖಾತರಿ ಇಲ್ಲ . ಹೀಗಾಗಿ ಆತ ಇಂಥ ಕೃತ್ಯ ಮುಂದುವರಿಸುವುದಿಲ್ಲ ಎನ್ನಲು ಆಗದು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಮನವಿ ಸಲ್ಲಿಸಿದ್ದರು.

ಇಂಥ ಬರ್ಬರ ಕೃತ್ಯಗಳಲ್ಲಿ ಭಾಗಿಗಳಾಗುವ ಅಪ್ರಾಪ್ತ ವಯಸ್ಕ ಅಪರಾಧಿಗಳನ್ನು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ತರುವ ಅಗತ್ಯವಿದೆ ಎಂದೂ ಸ್ವಾಮಿ ಮನವಿಯಲ್ಲಿ ಗಮನ ಸೆಳೆದಿದ್ದರು.

ಬಾಲಾಪರಾಧಿಯ ಮಾನಸಿಕ ಸ್ಥಿತಿಯನ್ನು ಖಚಿಸಿತಪಡಿಸಿಕೊಳ್ಳುವುದು, ಬಿಡುಗಡೆ ಬಳಿಕದ ಪುನರ್ವಸತಿ ಯೋಜನೆಯ ಲೋಪಗಳನ್ನು ಸರಿಪಡಿಸುವವರೆಗೆ ಆತನನ್ನು ಸುಧಾರಣಾ ಗೃಹದಲ್ಲೇ ಉಳಿಸಿಕೊಳ್ಳುವಂತೆ ಕೋರಿದ್ದರು.



ಕ್ರೌರ‌್ಯ ಗೆದ್ದಿದೆ ಎಂದು ಕಣ್ಣೀರಾದ ತಾಯಿ:

'ಈ ತೀರ್ಪು ಕೇಳಿ ಆಘಾತವಾಗಿದೆ. ನಮ್ಮೆಲ್ಲ ಪ್ರಯತ್ನದ ಬಳಿಕವೂ ಅಪರಾಧಿಯು ಬಿಡುಗಡೆಗೊಳ್ಳುತ್ತಿರುವುದು ನೋವು ತಂದಿದ್ದು, ಇಲ್ಲಿ ಕ್ರೌರ‌್ಯವೇ ಗೆದ್ದಿದೆ,' ಎಂದು ನಿರ್ಭಯಾ ಅವರ ತಾಯಿ ಆಶಾ ಸಿಂಗ್ ಪ್ರತಿಕ್ರ್ರಿಯಿಸಿದ್ದಾರೆ.

ಅಪರಾಧಿಯ ಬಿಡುಗಡೆಗೆ ತಡೆ ನಿರಾಕರಿಸಿ ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ಸೇರಿದಂತೆ ಕುಟುಂಬ ಸದಸ್ಯರು ಕಣ್ಣೀರಾದರು.

'ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಇಲ್ಲಿ ಅನ್ಯಾಯಕ್ಕೆ ಗೆಲುವಾಗಿದೆ. ಇದು ದೇಶಕ್ಕೆ ತಪ್ಪು ಸಂದೇಶ ನೀಡುತ್ತದೆ. ರಾಜಕಾರಣಿಗಳು ನ್ಯಾಯದ ಭರವಸೆ ನೀಡುವ ಮೂಲಕ ಅನುಕಂಪದ ಮಾತುಗಳನ್ನಾಡಿದರೆ ಸಾಲದು . ಈ ದೇಶದ ರಾಜಕೀಯದಲ್ಲಿ ನಿರಪರಾಧಿಗಳು ಯಾವತ್ತೂ ಬಲಿಯಾಗುತ್ತಲೇ ಇರಬೇಕು, ಇನ್ನೆಷ್ಟು ಹುಡುಗಿಯರು ಇಂಥ ಕ್ರೌರ‌್ಯಗಳಿಗೆ ಬಲಿಯಾಗಬೇಕೋ ಗೊತ್ತಿಲ್ಲ ,'ಎಂದು ಆಶಾ ಸಿಂಗ್ ವ್ಯವಸ್ಥೆಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ಮುಂದುವರಿಸುತ್ತೇವೆ: ಇದು ಕೊನೆಯಲ್ಲ, ನಾವು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ, ನಮಗೆ ಬೆಂಬಲ ಮುಂದುವರಿಸಿ ಎಂದು ಈ ದೇಶದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ಸಂತ್ರಸ್ತೆಯ ತಂದೆ ಬದರಿನಾಥ್ ಸಿಂಗ್ ಹೇಳಿದರು.

ಆತನ ಮುಖ ತೋರಿಸಿ ಎಂದಿದ್ದರು: 'ನನ್ನ ಮಗಳ ಹೆಸರು ಜ್ಯೋತಿ ಸಿಂಗ್ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ ,'ಎಂದು ಆಶಾ ಸಿಂಗ್ ಗುರುವಾರ ಹೇಳಿದ್ದರು. ಕೃತ್ಯದಲ್ಲಿ ಅತಿ ಭೀಕರ ಕ್ರೌರ‌್ಯ ತೋರಿದ್ದ ಬಾಲಾಪರಾಧಿಯ ಬಿಡುಗಡೆಗೆ ಮೊದಲು ಆತನ ಮುಖವನ್ನು ಜಗತ್ತಿಗೆ ತೋರಿಸುವಂತೆಯೂ ಈ ಹಿಂದೆ ನಿರ್ಭಯಾ ಪೋಷಕರು ಆಗ್ರಹಿಸಿದ್ದರು.



ಒಂದು ವರ್ಷ ಎನ್‌ಜಿಒ ನಿಗಾ :

ಬಾಲಾಪರಾಧಿ ಬಿಡುಗಡೆಗೊಂಡ ಬಳಿಕ ಒಂದು ವರ್ಷ ಎನ್‌ಜಿಒ ಆತನ ಮೇಲೆ ನಿಗಾ ಇಡಲಿದ್ದು, ವೃತ್ತಿ ತರಬೇತಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಸಚಿವೆ ಮೇನಕಾ ಗಾಂಧಿ ಅವರ ಮನವಿ ಪರಿಗಣಿಸಿ ಗೃಹ ಸಚಿವಾಲಯ ಈ ನೀರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಬಿಡುಗಡೆಯಾದ ಬಳಿಕ ಆತ ಸಮಾಜಕ್ಕೆ ಕಂಟಕವಾಗಬಹುದು ಎಂಬ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾನವಹಕ್ಕುಗಳ ಆಯೋಗವು ಕೇಂದ್ರ ಮತ್ತು ದಿಲ್ಲಿ ಸರಕಾರಕ್ಕೆ ನೋಟಿಸ್ ನೀಡಿತ್ತು.

ಇದೊಂದು ಕರಾಳ ದಿನ : ಮಹಿಳಾ ಆಯೋಗ

ಬಾಲಾಪರಾಧಿಯ ಬಿಡುಗಡೆಗೆ ಹೈಕೋರ್ಟ್ ನಿರಾಕರಿಸಿದ್ದು, ದೇಶದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದು ದಿಲ್ಲಿ ಮಹಿಳಾ ಆಯೋಗ ಪ್ರತಿಕ್ರಿಯಿಸಿದ್ದು, ಬಿಡುಗಡೆ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅದು ಹೇಳಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡುವುದಾಗಿ ಆಯೋಗ ತಿಳಿಸಿದೆ.



2012 ಡಿ.16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಡಿ. 29ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಅತ್ಯಂತ ಬರ್ಬರವಾಗಿ ನಡೆದುಕೊಂಡಿದ್ದ ಅಪ್ತಾಪ್ತ ವಯಸ್ಕ ಅಪರಾಧಿಯನ್ನು ಬಾಲ ನ್ಯಾಯ ಕಾಯಿದೆಯಡಿ ಮೂರು ವರ್ಷ ಸುಧಾರಣಾ ಗೃಹಕ್ಕೆ ಒಪ್ಪಿಸಲಾಗಿತ್ತು. ಆಗ ಆತನಿಗೆ 17 ವರ್ಷ 9 ತಿಂಗಳಾಗಿತ್ತು, ಈಗ ಮೂರು ವರ್ಷಗಳ ರಿಮ್ಯಾಂಡ್ ಹೋಂ ಅವಧಿ ಮುಗಿದಿದೆ. ದೋಷಿ ರಾಮ್ ಸಿಂಗ್ 2013ರ ಮಾರ್ಚ್‌ನಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತರ ದೋಷಿಗಳಾದ ಮುಕೇಶ್, ವಿನಯ್, ಪವನ್, ಅಕ್ಷಯ್‌ಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿದ್ದು, ದಿಲ್ಲಿ ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ದೋಷಿಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ವಿಚಾರಣೆಗೆ ಬಾಕಿ ಇದೆ.







*2012 ಡಿ.16ರ ರಾತ್ರಿ ಖಾಸಗಿ ಬಸ್‌ನಲ್ಲಿ ಆರು ಮಂದಿಯಿಂದ ಅತ್ಯಾಚಾರ

* ಡಿ.17: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆ

*ಡಿ.17: ಚಾಲಕ ರಾಮ್ ಸಿಂಗ್ ಸೇರಿದಂತೆ ನಾಲ್ವರು ಆರೋಪಿಗಳ ಪತ್ತೆ

*ಡಿ.19: ರಾಮ್ ಸಿಂಗ್ ಸೇರಿ ನಾಲ್ವರು ಆರೋಪಿಗಳ ಬಂಧನ

*ಡಿ.20 : ಘಟನೆ ವೇಳೆ ಹಲ್ಲೆಗೊಳಗಾಗಿದ್ದ ಸಂತ್ರಸ್ತೆಯ ಸ್ನೇಹಿತನ ವಿಚಾರಣೆ

*ಡಿ.21: ಆನಂದ್ ವಿಹಾರದಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯ ಬಂಧನ

*ಡಿ.22: ಹರಿಯಾಣ, ಬಿಹಾರದಲ್ಲಿ ಶೋಧ, ಆರೋಪಿ ಅಕ್ಷಯ ಠಾಕೂರ್ ಸೆರೆ.

*ಡಿ.22; ದಿಲ್ಲಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು

*ಡಿ.25: ಸಂತ್ರಸ್ತ ವಿದ್ಯಾರ್ಥಿನಿಯ ಸ್ಥಿತಿ ಮತ್ತಷ್ಟು ಗಂಭೀರ,

*ಡಿ.26: ಸಂತ್ರಸ್ತೆಗೆ ಹೃದಯಾಘಾತ, ಸಿಂಗಾಪುರದ ಆಸ್ಪತ್ರೆಗೆ ದಾಖಲು

*ಡಿ.29: ಕೊನೆಯುಸಿರೆಳೆದ ಸಂತ್ರಸ್ತೆ, ಪೊಲೀಸರಿಂದ ಕೊಲೆ ಪ್ರಕರಣ ದಾಖಲು.

*ಜ.3: ಐವರು ಆರೋಪಿಗಳ ವಿರುದ್ಧ ನಾ ದೋಷಾರೋಪ ಪಟ್ಟಿ ಸಲ್ಲಿಕೆ.

*ಜ.28: ಬಾಲ ನ್ಯಾಯಮಂಡಳಿಯಿಂದ ಅಪ್ರಾಪ್ತ ವಯಸ್ಕ ಆರೋಪಿ ವಿರುದ್ಧ ಪ್ರಕರಣ.

*ಮಾ.11: ಆರೋಪಿ ಬಸ್ ಚಾಲಕ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ .

*ಜು.5: ಅಪ್ರಾಪ್ತ ವಯಸ್ಕ ಆರೋಪಿಯ ವಿಚಾರಣೆ, ಆದೇಶ ಕಾಯ್ದಿರಿಸಿದ ಬಾಲ ನ್ಯಾಯಮಂಡಳಿ.

*ಜು.11: ಅಪ್ರಾಪ್ತ ವಯಸ್ಕ ಆರೋಪಿಯ ದೋಷಿ ಎಂದು ಆದೇಶ

*ಆ.31: ಅಪ್ರಾಪ್ತ ವಯಸ್ಕ ದೋಷಿಗೆ ಮೂರು ವರ್ಷಗಳ ರಿಮ್ಯಾಂಡ್ ಹೋಂ ವಿಧಿಸಿ ಆದೇಶ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>