Quantcast
Channel: VijayKarnataka
Viewing all articles
Browse latest Browse all 6795

ಕೋರ್ಟ್‌ರೂಂಗಳಿಗೆ ಬೀಗ ಹಾಕಿ!

$
0
0

ನ್ಯಾಯಾಧೀಶರ ನೇಮಕ ವಿಳಂಬಕ್ಕೆ ಸುಪ್ರೀಂ ಆಕ್ರೋಶ

ಹೊಸದಿಲ್ಲಿ: ನ್ಯಾಯಾಧೀಶರನ್ನು ಸಕಾಲದಲ್ಲಿ ನೇಮಕ ಮಾಡಲು ಸಾಧ್ಯವಾಗದೇ ಹೋದರೆ, ನ್ಯಾಯಾಲಯಗಳನ್ನು ಯಾಕೆ ನಡೆಸುತ್ತೀರಿ? ಕೋರ್ಟುಗಳಿಗೂ ಬೀಗ ಹಾಕಿಬಿಡಿ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ''ನ್ಯಾಯಾಧೀಶರುಗಳೇ ಇಲ್ಲದ ಕಾರಣ ಕೋರ್ಟ್‌ರೂಮ್‌ಗಳಿಗೆ ಬೀಗ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕ... ನೀವ್ಯಾಕೆ ನ್ಯಾಯಾಲಯಗಳನ್ನು ಮುಚ್ಚಿಬಿಡಬಾರದು?'' ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕುರ್‌ ಅವರನ್ನು ಒಳಗೊಂಡ ನ್ಯಾಯಪೀಠ ಸರಕಾರದ ನಿರ್ಲಕ್ಷಕ್ಕೆ ಕೆಂಡಾಮಂಡಲವಾದ ರೀತಿಯಿದು.

''ಕಾರ್ಯಾಂಗದ ನಿಷ್ಕ್ರಿಯತೆ ನ್ಯಾಯಾಂಗವನ್ನೇ ಬಲಿತೆಗೆದುಕೊಳ್ಳುತ್ತಿದೆ,'' ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ದೇಶದ 24 ಹೈಕೋರ್ಟ್‌ಗಳಲ್ಲಿನ ನ್ಯಾಯಾಂಗ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹೈಕೋರ್ಟ್‌ಗಳಲ್ಲಿ 450ಕ್ಕೂ ಅಧಿಕ ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿವೆ.

ನ್ಯಾಯಾಧೀಶರ ನೇಮಕದ ವಿಚಾರದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲೇಬೇಕಾದ ಅಗತ್ಯವಿದೆ ಎಂದು ಹೇಳಿದ ನ್ಯಾಯಪೀಠ, ''ಸಂಸ್ಥೆಯ ಕಾರ್ಯನಿರ್ವಹಣೆ ವ್ಯವಸ್ಥೆಯನ್ನೇ ಮೊಟಕುಗೊಳಿಸುತ್ತೀರಿ,'' ಎಂದು ಅಭಿಪ್ರಾಯಪಟ್ಟಿತು.

ನೋಟಿಸ್‌ ನೀಡಬೇಕಾದೀತು:

ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳನ್ನು ಇತ್ಯರ್ಥ ಮಾಡುವ ವಿಚಾರದಲ್ಲಿ ನಿಧಾನಗತಿ ಧೋರಣೆಯನ್ನು ಟೀಕಿಸಿದ ನ್ಯಾಯಪೀಠ, ವಾಸ್ತವ ಸ್ಥಿತಿಯೇನು ಎಂಬುದನ್ನು ತಿಳಿದುಕೊಳ್ಳಲು ಪ್ರಧಾನಿ ಕಚೇರಿ ಮತ್ತು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಸಮನ್ಸ್‌ ನೀಡುವ ಪ್ರಸಂಗ ಬಂದೀತು ಎಂದು ಎಚ್ಚರಿಕೆ ನೀಡಿತು.

ಅಲಹಾಬಾದ್‌ ಹೈಕೋರ್ಟ್‌ಗೆ ಎಂಟು ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್‌ ನೇಮಕ ಮಂಡಳಿ ಶಿಫಾರಸುಗಳನ್ನು ಮಾಡಿದರೆ ಸರಕಾರ ಕೇವಲ ಎರಡು ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದೆ. ಹೀಗೆ ಸರಕಾರ ತನಗೆ ಬೇಕಾದಷ್ಟೇ ಹುದ್ದೆಗಳನ್ನು ನೇಮಕ ಮಾಡುವುದು ಸರಿಯಲ್ಲ ಎಂದು ತಿಳಿಸಿತು.

1993ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪಿಸಿದ ಕೊಲಿಜಿಯಂ (ನೇಮಕ ಮಂಡಳಿ) ವ್ಯವಸ್ಥೆಯ ಅಡಿಯಲ್ಲಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕ ಮಾಡುವಂತಹ ವ್ಯವಸ್ಥೆ ಇರುವ ವಿಶ್ವದ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರ. ನ್ಯಾಯಾಂಗದ ಎಲ್ಲ ನೇಮಕ ಪ್ರಕ್ರಿಯೆಗಳ ಬಗ್ಗೆ ಹಿರಿಯ ನ್ಯಾಯಾಧೀಶರೇ ನಿರ್ಧಾರ ಕೈಗೊಳ್ಳುತ್ತಾರೆ, ಸರಕಾರ ಈ ಪ್ರಕ್ರಿಯೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ.

ಎಲ್ಲ ರಾಜಕೀಯ ಪಕ್ಷಗಳ ಸರ್ವಾನುಮತದ ನಿರ್ಧಾರದ ಬಳಿಕ ಸಂಸತ್ತಿನಲ್ಲಿ ಕಾಯ್ದೆಯಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಅಸಂವಿಧಾನಿಕ ಎಂದು ಕಳೆದ ವರ್ಷ ಸಂವಿಧಾನ ಪೀಠ ಘೋಷಿಸಿತ್ತು.

ನ್ಯಾಯಾಧೀಶರ ನೇಮಕಾತಿ ವಿಷಯದಲ್ಲಿ ಸರಕಾರ ತೋರುತ್ತಿರುವ ವಿಳಂಬ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕುರ್‌ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಸ್ತಾಪ ಮಾಡದೇ ಇರುವ ಬಗ್ಗೆ ಕಣ್ಣೀರು ಹಾಕಿದ್ದರು.

ಸರಕಾರದ ಸ್ಪಂದನೆ

ಸುಪ್ರೀಂ ಕೋರ್ಟ್‌ನ ಸಿಟ್ಟಿಗೆ ಕೇಂದ್ರ ಸರಕಾರ ತಕ್ಷಣ ಸ್ಪಂದಿಸಿದೆ. ಹೊಸ ನ್ಯಾಯಾಧೀಶರ ನೇಮಕಕ್ಕೆ ಸರಕಾರ ಕಳಕಳಿ ಹೊಂದಿದೆ. ಕೊಲಿಜಿಯಂ ಬಳಿ ಬಾಕಿ ಉಳಿದಿರುವ ಕಾರ್ಯವಿಧಾನ ಒಡಂಬಡಿಕೆ (ಎಂಒಪಿ)ಯಿಂದ ವಿಳಂಬವಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

''ನ್ಯಾಯಾಧೀಶರ ನೇಮಕ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಸರಕಾರ ತೀವ್ರ ಆಸಕ್ತಿ ಹೊಂದಿದೆ. ಕೋರ್ಟ್‌ನಲ್ಲಿ ತಿಳಿಸಿದಂತೆ ಹೈಕೋರ್ಟ್‌ಗಳಲ್ಲಿ 86 ಹೊಸ ನೇಮಕಾತಿಗಳನ್ನು ಮಾಡಲಾಗಿದೆ. 121 ಹೆಚ್ಚುವರಿ ನ್ಯಾಯಾಧೀಶರನ್ನು ಕಾಯಂಗೊಳಿಸಲಾಗಿದೆ. 14 ಮುಖ್ಯನ್ಯಾಯಾಧೀಶರನ್ನು ನೇಮಕ ಮಾಡಿ ನಾಲ್ವರನ್ನು ವರ್ಗಾವಣೆ ಮಾಡಲಾಗಿದೆ,'' ಎಂದು ಮೂಲಗಳು ತಿಳಿಸಿವೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>