Quantcast
Channel: VijayKarnataka
Viewing all articles
Browse latest Browse all 6795

ಪ್ರಭಾರ ಪ್ರಾಚಾರ್ಯರದ್ದೇ ಕಾರುಬಾರು

$
0
0

ಮೂವರು ಸಚಿವರು ಬಂದರೂ ಈಡೇರದ ಬಡ್ತಿ ಬೇಡಿಕೆ


* ಶಿವರಾಮ್ ಬೆಂಗಳೂರು

ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಶೇ 93-94ರಷ್ಟು ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರದ್ದೇ ಕಾರುಬಾರು. ಪ್ರಸ್ತುತ ನಿವೃತ್ತರಾದವರೂ ಸೇರಿದರೆ ಕೇವಲ 51 ಕಾಲೇಜುಗಳಲ್ಲಿ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ. ಹೀಗಾಗಿ, ಇನ್ನುಳಿದ ಕಾಲೇಜುಗಳಲ್ಲಿ 360 ಮಂದಿ ಪ್ರಭಾರ ಪ್ರಾಂಶುಪಾಲರು 'ಡಬಲ್ ರೋಲ್' ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಡೀ ಸೇವಾವಧಿಯಲ್ಲಿ ಬಡ್ತಿಗೆ ಅವಕಾಶವೇ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಅರ್ಹ ಅಧ್ಯಾಪಕರಿಗೇ ಜೇಷ್ಠತೆ ಆಧಾರದಲ್ಲಿ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವಂತೆ ಸರಕಾರಿ ಕಾಲೇಜಿನ ಅಧ್ಯಾಪಕರು ಕಳೆದ ಮೂರು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಆದರೆ, ಸರಕಾರ ಸಬೂಬು ನೀಡುತ್ತಲೇ ಅಧ್ಯಾಪಕರ ಬೇಡಿಕೆಯನ್ನು ಮುಂದೂಡುತ್ತಲೇ ಇದೆ.

ಯುಜಿಸಿ ನಿಯಮಾವಳಿಗಳ ಪ್ರಕಾರ, ಪ್ರಾಂಶುಪಾಲರ ಹುದ್ದೆಯನ್ನು ನೇರ ನೇಮಕದ ಮೂಲಕ ಭರ್ತಿ ಮಾಡಬೇಕು. ಹೀಗಾಗಿ, ಬಡ್ತಿ ಮೂಲಕ ಪದೋನ್ನತಿ ನೀಡಲು ಅವಕಾಶ ಇರುವುದಿಲ್ಲ ಎಂದು ಆರ್ಥಿಕ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳು ಈ ಹಿಂದೆ ಕೊಕ್ಕೆ ಹಾಕಿದ್ದವು. ಒಂದು ವೇಳೆ ಯುಜಿಸಿ ನಿಯಮಾವಳಿಗಳ ಪ್ರಕಾರ, ಪ್ರಾಂಶುಪಾಲರ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಿದರೆ ಕೇವಲ ಐದು ವರ್ಷಗಳಿಗೆ ಮಾತ್ರ ಅವರ ಅಧಿಕಾರಾವಧಿ ಸೀಮಿತಗೊಳ್ಳಲಿದೆ. ಅವಧಿ ಮುಗಿದ ನಂತರ ಪ್ರಾಂಶುಪಾಲರು ಮತ್ತೆ ಅಧ್ಯಾಪಕರಾಗಿಯೇ ಹಿಂಬಡ್ತಿ ಹೊಂದಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದ 30 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಸೇವಾ ಹಿರಿತನದ ಆಧಾರದಲ್ಲಿಯೇ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡುತ್ತಿವೆ.

ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತಿಲ್ಲ:

ಈ ನಡುವೆ, ಹೈಕೋರ್ಟ್ ಕೂಡ ಅಧ್ಯಾಪಕರಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ಬಡ್ತಿ ನೀಡುವ ಮೂಲಕ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡುವಂತೆ 2014ರ ಆಗಸ್ಟ್ 14ರಂದು ಆದೇಶಿಸಿದೆ. ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್. ಕುಮಾರ್ ಹಾಗೂ ನ್ಯಾ. ರತ್ನಕಲಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡುವ ವಿಚಾರದಲ್ಲಿ ರೋಸ್ಟರ್ ಪದ್ಧತಿ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ, ಕೇವಲ ಸೇವಾ ಹಿರಿತನದ ಆಧಾರದಲ್ಲಿ ಕಾಲೇಜಿನಲ್ಲಿ ಮೊದಲು ಸೇವೆಗೆ ಸೇರಿದ ಹಿರಿಯ ಅಧ್ಯಾಪಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಕೂಡ ತಿರಸ್ಕೃತವಾಗಿದೆ. ಆದರೆ, ಸರಕಾರ ಮಾತ್ರ ಕಾಲೇಜು ಅಧ್ಯಾಪಕರ ಬೇಡಿಕೆಗೆ ಸೊಪ್ಪು ಹಾಕುತ್ತಿಲ್ಲ.

ಸಚಿವರು ಬದಲಾದರೂ ಬೇಡಿಕೆ ಈಡೇರಲಿಲ್ಲ:

ಈ ಹಿಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಬಡ್ತಿ ಮೂಲಕ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಿರುವುದು ಹಾಗೂ ಈ ಸಂಬಂಧ ಹೈಕೋರ್ಟ್ ನೀಡಿರುವ ಆದೇಶದ ಪ್ರತಿಗಳನ್ನು ಪಡೆದು ಪರಿಶೀಲಿಸಿ ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಆಯುಕ್ತರಿಗೆ ಸೂಚಿಸಿದ್ದರು. ಅಲ್ಲದೆ, ಉಪನ್ಯಾಸಕರ ಸಂಘದ ಬೇಡಿಕೆಗೆ ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದರು. ಆನಂತರ ಟಿ.ಬಿ. ಜಯಚಂದ್ರ ಅವರು ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಂಡರು. ಆಗಲೂ ಸಚಿವರಿಗೆ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು. ಕೊನೆಗೆ, ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ನಮ್ಮ ಸಮಸ್ಯೆ ತೋಡಿಕೊಂಡೆವು. ಆದರೆ, ಸಚಿವರು ಬದಲಾದರೂ ತಮ್ಮ ಬೇಡಿಕೆ ಮಾತ್ರ ಈಡೇರಲಿಲ್ಲ ಎಂಬುದು ಅಧ್ಯಾಪಕರ ಕೊರಗು.

ಈ ನಡುವೆ, ಕಾನೂನಿಗೆ ತಿದ್ದುಪಡಿ ತರುವ ಮೂಲಕ ಪ್ರಾಂಶುಪಾಲರ ಹುದ್ದೆ ನಿರೀಕ್ಷೆಯಲ್ಲಿರುವ ಅಧ್ಯಾಪಕರ ಸಮಸ್ಯೆ ಬಗೆಹರಿಸುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳುತ್ತಿದ್ದಾರೆ. ಆದರೆ, ಈ ಪ್ರಕ್ರಿಯೆ ಬಹಳಷ್ಟು ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ಸೇವಾಹಿರಿತನದ ಆಧಾರದಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಾಪಕರು ಒತ್ತಾಯಿಸಿದ್ದಾರೆ.

-----

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು 'ಕ್ಯಾಪ್ಟನ್'ನಂತೆ ಕೆಲಸ ಮಾಡುವ ಕಾಯಂ ಪ್ರಾಂಶುಪಾಲರ ಅಗತ್ಯವಿದೆ. ಹೀಗಾಗಿ, ಅರ್ಹ ಅಧ್ಯಾಪಕರಿಗೆ ಸೇವಾ ಹಿರಿತನದ ಆಧಾರದ ಮೇರೆಗೆ ಬಡ್ತಿ ನೀಡುವ ಮೂಲಕ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ತಕ್ಷಣ ಆದ್ಯತೆ ನೀಡಬೇಕು.

- ಡಾ.ಎಚ್. ಪ್ರಕಾಶ್, ಅಧ್ಯಕ್ಷರು, ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>