ಆಕಾಶ್ ಶ್ರೀವತ್ಸ ನಿರ್ದೇಶನದ ಬದ್ಮಾಶ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ದಸರಾ ಹಬ್ಬದಂದು ತೆರೆಗೆ ತರುವ ಪ್ಲಾನ್ ಮಾಡಿದೆ ಚಿತ್ರತಂಡ. ಹೊಸ ಹುಡುಗರ ಬದ್ಮಾಶ್ ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ನಟ ಸಲ್ಮಾನ್ ಖಾನ್ ಚಿತ್ರ ಮೆಚ್ಚಿ ಮಾತಾಡಿದ್ದರಿಂದ ನಿರೀಕ್ಷೆ ಕೂಡ ಇಮ್ಮಡಿಯಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಅನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದೇ ದಸರಾ ದಿನದಂದು ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. 'ನಾನು ಎಲ್ಲಿಗೆ ಹೋದರೂ, ಸಿನಿಮಾ ಬಗ್ಗೆ ಜನರು ಕೇಳುತ್ತಿದ್ದರು. ಆದಷ್ಟು ಬೇಗ ಚಿತ್ರವನ್ನು ರಿಲೀಸ್ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಪ್ರೇಕ್ಷಕರು ಆಸೆಯಂತೆ ದಸರಾ ಹಬ್ಬಕ್ಕೆ ಬದ್ಮಾಶ್ ಸಿನಿಮಾ ತೆರೆಗೆ ಬರಲಿದೆ. ಅದು ನಾಡ ಹಬ್ಬವೂ ಆಗಿರುವುದರಿಂದ ಭರ್ಜರಿ ಮನರಂಜನೆಯನ್ನು ಸಿನಿಮಾ ನೀಡಲಿದೆ' ಅಂತಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಅನೇಕ ವಿಶೇಷತೆಗಳಿವೆ. ಸ್ಕ್ರೀನ್ ಪ್ಲೇ ಸಿನಿಮಾದ ಜೀವಾಳ. ಹೊಸದಾಗಿರುವ ಮೇಕಿಂಗ್, ಪಂಚಿಂಗ್ ಡೈಲಾಗ್ಸ್ ಮತ್ತು ಸ್ಟೈಲಿಶ್ ನಟನೆಯಿಂದಾಗಿ ಚಿತ್ರವು ಗಮನ ಸೆಳೆಯಲಿದೆಯಂತೆ. ಚಿತ್ರಕತೆಯಲ್ಲಿ ಕರೆಂಟ್ ಅಫೇರ್ಸ್ ಬಳಸಿಕೊಂಡಿದ್ದರಿಂದ ಹೊಸ ರೀತಿಯ ಅನುಭವವನ್ನು ಸಿನಿಮಾ ಕಟ್ಟಿಕೊಡಲಿದೆ. ಧನಂಜಯ್ ಚಿತ್ರದ ನಾಯಕ. ಇಲ್ಲಿ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಬರೋಬ್ಬರಿ ಹತ್ತು ವಿಭಿನ್ನ ಗೆಟಪ್ ಕೂಡ ಹಾಕಿದ್ದಾರೆ. ಪವರ್‌ಫುಲ್ ರಾಜಕಾರಣಿ ಮತ್ತು ಸ್ಮಾರ್ಟ್ ಹುಡುಗನ ಮಧ್ಯೆ ನಡೆಯುವ ರೋಚಕ ಕತೆಯೇ ಸಿನಿಮಾದ ಜೀವಾಳ ಆಗಿರುವುದರಿಂದ, ರಾಜಕಾರಣಿಯ ಪಾತ್ರಕ್ಕೂ ಅಷ್ಟೇ ಮಹತ್ವವಿದೆ. ಅಚ್ಯುತ್‌ಕುಮಾರ್ ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ರವಿ ಕಶ್ಯಪ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶ್ರೀಷ ಕುದುವಳ್ಳಿ ಸಿನಿಮಾಟೋಗ್ರಫಿಯಲ್ಲಿ ಚಿತ್ರ ಮೂಡಿ ಬಂದಿದೆ. ಜಹಾಂಗೀರ್, ರಮೇಶ್ ಭಟ್, ರಮೇಶ್ ಪಂಡಿತ್, ಬಿ.ಸುರೇಶ, ಪ್ರಕಾಶ್ ಬೆಳವಾಡಿ, ಶ್ರೀನಿವಾಸ ಪ್ರಭು ಮುಂತಾದವರ ತಾರಾ ಬಳಗವಿದೆ.
↧
ಬದ್ಮಾಶ್ ಟೀಮ್‌ನಿಂದ ದಸರಾ ಉಡುಗೊರೆ
↧