* ಶರಣು ಹುಲ್ಲೂರು
ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆಲ್ಲುತ್ತದೆ. ಬಾಲಿಶವಾದ ಕತೆ ಇದ್ದರೂ, ಭರ್ಜರಿ ಆ್ಯಕ್ಷನ್, ಬೊಂಬಾಟ್ ಡೈಲಾಗ್‌ಗಳನ್ನು ಹೊಡೆದಿದ್ದಾರೆ ದರ್ಶನ್.
ದರ್ಶನ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಕತೆಯೇ ಸಿನಿಮಾದ ಮೈನಸ್ ಪಾಯಿಂಟ್. ತೀರಾ ಎಳಸಾದ ಚಿತ್ರಕಥೆ ಇಲ್ಲಿದೆ.
ಅದು ಡಾನ್ ಫ್ಯಾಮಿಲಿ. ಶಂಕರ್ ದಾದಾ (ರವಿಶಂಕರ್) ಈ ಕುಟುಂಬದ ಯಜಮಾನ. ತಾನು ತುಳಿದಿರುವ ಹಾದಿ ತಪ್ಪು ಎನ್ನುವುದು ಈತನಿಗೆ ಅರಿವಾಗಿ, ತನ್ನ ಮಗ ವೀರು ದಾದಾ (ಶರತ್ ಲೋಹಿತಾಶ್ವ) ತನ್ನಂತೆ ಆಗಬಾರದೆಂದು ಬಯಸುತ್ತಾನೆ. ಆದರೂ, ಸೊಸೆಯಿಂದಾಗಿ ಮೊಮ್ಮಗ ಜಗ್ಗು ದಾದಾ (ದರ್ಶನ್) ಕೂಡ ಫೀಲ್ಡ್‌ಗೆ ಇಳಿಯುತ್ತಾನೆ. ಶಂಕರ್ ದಾದಾ ತಾನು ಸಾಯುವ ಮುನ್ನ ಮೊಮ್ಮಗನನ್ನು ಕರೆದು, 'ರೌಡಿಸಂ ಬಿಡಬೇಕು. ಸಂಪ್ರದಾಯಸ್ಥ ಕುಟುಂಬದ ಹುಡುಗಿಯನ್ನು ಮದುವೆ ಆಗಬೇಕೆಂದು ಭಾಷೆ ತಗೆದುಕೊಳ್ಳುತ್ತಾನೆ. ಮೊಮ್ಮಗನಿಂದ ತನ್ನ ಈ ಆಸೆಯನ್ನು ಈಡೇರಿಸಿಕೊಳ್ಳಲು ಪ್ರೇತಾತ್ಮವಾಗಿ ಬೆನ್ನು ಹತ್ತುತ್ತಾನೆ. ತಾತನ ಕಾಟ ತಾಳದೆ, ಜಗ್ಗುದಾದಾ ಸಾಂಪ್ರದಾಯಸ್ಥ ಹುಡುಗಿಯ ಹಿಂದೆ ಬೀಳುತ್ತಾನೆ. ಹುಡುಗಿಯ ಮನೆಯವರಿಗೆ ಈತ ಡಾನ್ ಎಂದು ಗೊತ್ತಾಗಿ, ಪ್ರೀತಿಯನ್ನು ನಿರಾಕರಿಸುತ್ತಾರೆ. ಆದರೆ ಡಾನ್ ಪ್ರೀತಿ ಪಡೆಯುತ್ತಾನಾ? ಇಲ್ಲವಾ? ಅನ್ನುವುದೇ ಸಿನಿಮಾ.
ಈ ಸ್ಟೋರಿಯನ್ನು ಹೇಳುವಲ್ಲಿ ನಿರ್ದೇಶಕ ರಾಘವೇಂದ್ರ ಹೆಗಡೆ ಹರಸಾಹಸ ಪಟ್ಟಿದ್ದಾರೆ. ಅದರಲ್ಲೂ ಪ್ರೇತಾತ್ಮದ ಕ್ಯಾರೆಕ್ಟರ್ ಸೃಷ್ಟಿ ಮಾಡಿ, ಚಂದಮಾಮನ ಕತೆ ನೆನಪಿಸುತ್ತಾರೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಒಂದು ರಾಜ್ಯಕ್ಕೆ ಡಾನ್ ಆಗಿದ್ದ ಕುಟುಂಬದ ಹುಡುಗಿಯನ್ನು ಬಾರ್ ಡಾನ್ಸರ್ ಎಂದು ತೋರಿಸುವ ಸಾಹಸ ಮಾಡಿದ್ದು. ಸಿನಿಮಾದ ಮೊದಲರ್ಧ ಬರೀ ಬಿಲ್ಡಪ್. ಅಸಲಿ ಆಟ ಶುರುವಾಗುವುದೇ ಮಧ್ಯಂತರದ ನಂತರ. ಆದರೂ, ಚಿತ್ರಕಥೆಯಲ್ಲಿ ಲಾಜಿಕ್ ಇಲ್ಲದ ಕಾರಣ, ಮ್ಯಾಜಿಕ್ ಕೂಡ ವರ್ಕ್ ಆಗಿಲ್ಲ.
ದರ್ಶನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರೆ, ಎಪ್ಪತ್ತೈದರ ವಯಸ್ಸಿನ ಪಾತ್ರಕ್ಕೆ ರವಿಶಂಕರ್ ಒಪ್ಪಿಲ್ಲ. ನಾಯಕಿಯ ಪಾತ್ರ ನಿರ್ವಹಿಸಲು ದೀಕ್ಷಾ ಸೇಠ್ ಶ್ರಮಪಟ್ಟಿದ್ದಾರೆ. ದರ್ಶನ್ ಗೆಳೆಯನಾಗಿ ಸೃಜನ್ ಲೋಕೇಶ್ ಚೆನ್ನಾಗಿ ಸಾಥ್ ನೀಡಿದ್ದಾರೆ. ಸಾಧು ಕೋಕಿಲಾ ಮತ್ತು ಬುಲೆಟ್ ಇದ್ದರೂ ನಗೆಯ ಕೊರತೆ ಕಾಣುತ್ತದೆ. ಅಚ್ಯುತ್‌ಕುಮಾರ್, ಅನಂತ್‌ನಾಗ್, ಶರತ್ ಲೋಹಿತಾಶ್ವ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ 'ತಲೆ ಕೆಡುತ್ತೆ', ಮತ್ತು 'ವಾಲೆ ಜುಮ್ಕಿ' ಹಾಡು ಚೆನ್ನಾಗಿವೆ. ವೇಣು ಅವರ ಸಿನಿಮಾಟೋಗ್ರಫಿಯಲ್ಲಿ ಮುಂಬಯಿ ನಗರ ಅಂದವಾಗಿ ಕಾಣುತ್ತದೆ.
ಮೇಕಿಂಗ್‌ಗೆ ಹೆಚ್ಚು ಒತ್ತು ಕೊಟ್ಟಿರುವ ನಿರ್ದೇಶಕರು, ಅದನ್ನು ಸಮರ್ಥವಾಗಿ ತೆರೆಯ ಮೇಲೆ ತರುವಲ್ಲಿ ಸೋಲುತ್ತಾರೆ. ಹೀಗಾಗಿ ಜಗ್ಗುದಾದ ಕೇವಲ ಡೈಲಾಗ್ ಮತ್ತು ಸಾಹಸ ದೃಶ್ಯಗಳಿಗೆ ಸೀಮಿತನಾಗಿದ್ದಾನೆ.
ಕನ್ನಡ ಚಿತ್ರ