- ಶರಣು ಹುಲ್ಲೂರು
ಕನಸುಗಾರನ ಹೊಸ ಕನಸು ಈ 'ಅಪೂರ್ವ'. ಇದು ಲಿಫ್ಟ್‌ನಲ್ಲಿ ನಡೆಯುವ ಕತೆ ಅನ್ನುವ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಪರದೆಯ ಮೇಲೆ ಕಲರ್‌ಫುಲ್ ಜಗತ್ತನ್ನೇ ಸೃಷ್ಟಿಸುವ ಈ ಕ್ರೇಜಿಸ್ಟಾರ್, ಪುಟ್ಟ ಲಿಫ್ಟ್‌ನಲ್ಲಿ ಬಣ್ಣ ಬಣ್ಣದ ಕನಸು ಕಾಣಲು ಸಾಧ್ಯವಾ? ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕಿತ್ತು. ತಾನು ಮಾತ್ರ ವರ್ಣರಂಜಿತ ಕನಸು ಕಂಡು, ಪ್ರೇಕ್ಷಕರ ತಲೆಗೆ ಹುಳ ಬಿಡುತ್ತಾರೆ ರವಿಚಂದ್ರನ್.
ಅವರೇ ಹೇಳಿದಂತೆ ಇದೊಂದು ಪ್ರಯೋಗಾತ್ಮಕ ಚಿತ್ರ. ಹೀಗಾಗಿ ಮತ್ತೆ ಏಕಾಂಗಿ ಹೋರಾಟಕ್ಕೆ ನಿಂತಿದ್ದಾರೆ ರವಿಚಂದ್ರನ್. ಸಿನಿಮಾದ ಅಷ್ಟೂ ವಿಭಾಗದಲ್ಲೂ ಕೈಯಾಡಿಸಿದ್ದರ ಪರಿಣಾಮ, ಬೇಡವೆಂದರೂ 'ಏಕಾಂಗಿ' ಚಿತ್ರವೇ ನೆನಪಾಗುತ್ತದೆ. 'ಕಲಾವಿದ' ಮುಂದೆ ಬಂದು ನಿಲ್ಲುತ್ತಾನೆ. ಮತ್ತೆ 'ಹಠವಾದಿ'ಯ ಛಾಯೆ ಎದ್ದು ಕಾಣುತ್ತದೆ. ಹೀಗಾಗಿ 'ಅಪೂರ್ವ' ಸಾಮಾನ್ಯ ಪ್ರೇಕ್ಷಕನಿಗೆ ದಕ್ಕುವುದು ಕೊಂಚ ಕಷ್ಟ.
ಆಯ್ಕೆ ಮಾಡಿಕೊಂಡ ಕತೆಯ ಬಗ್ಗೆ ಎರಡು ಮಾತಿಲ್ಲ. ಆದರೆ, ಅದನ್ನು ಪರಿಣಾಮಕಾರಿಯಾಗಿ ಕಟ್ಟುವಲ್ಲಿ ನಿರ್ದೇಶಕ ರವಿಚಂದ್ರನ್ ಎಡವಿದ್ದಾರೆ. ಅವನು ಬಾಲ್ಯದಿಂದಲೂ ಪ್ರೀತಿಯನ್ನೇ ಕಾಣದ ರಾಜಶೇಖರ್ (ರವಿಚಂದ್ರನ್). 61ರ ವಯಸ್ಸಿನ ಈ ಚಿತ್ರ ಕಲಾವಿದನಿಗೆ, 19ರ ವಯಸ್ಸಿನ ಅಪೂರ್ವ ಜತೆ ಪ್ರೇಮಾಂಕುರ ಆಗುತ್ತದೆ. ಅದೂ ಮಾಲ್‌ವೊಂದರ ಲಿಫ್ಟ್‌ನಲ್ಲಿ. ಸಾವಿನ ಭಯದಿಂದ ಪ್ರೇಮಿಗಳಾಗುವ ಇವರು, ಆ ಸಂಕಟ ದಾಟಿಕೊಂಡ ಮೇಲೆ ಒಂದಾಗಿರುತ್ತಾರಾ ಅಥವಾ ಬೇರ್ಪಡುತ್ತಾರಾ ಅನ್ನುವುದೇ ಸಿನಿಮಾ.
ನಿರ್ದೇಶಕರಾಗಿ ರವಿಚಂದ್ರನ್ ನಿರಾಸೆ ಮೂಡಿಸಿದರೂ, ನಟನಾಗಿ ಗೆದ್ದಿದ್ದಾರೆ. ಅದರಲ್ಲೂ ಸುದೀಪ್ ಮತ್ತು ರವಿಶಂಕರ್ ಪಾತ್ರಗಳು ಸಾಕಷ್ಟು ಕಾಡುತ್ತವೆ. ಮೂರ್ನಾಲ್ಕು ದೃಶ್ಯಗಳಲ್ಲಿ ಮಾತ್ರ ಕಣ್ಣಿಗೆ ಕಾಣಿಸುವ ಇವರು, ಆ ನಂತರ ಕೇವಲ ಧ್ವನಿಯಿಂದ ಗಮನ ಸೆಳೆಯುತ್ತಾರೆ. ಪ್ರಕಾಶ್ ರೈ ಮತ್ತು ತಾರಾ ಕಣ್ಣಿಗೆ ಕಾಣದೇ ಇದ್ದರೂ ಮಾತಿನಿಂದಲೇ ಮನಸು ಆವರಿಸಿಕೊಳ್ಳುತ್ತಾರೆ. ಈ ಪ್ರಯೋಗಕ್ಕೆ ನಿರ್ದೇಶಕರಿಗೆ ಫುಲ್‌ಮಾರ್ಕ್ಸ್.
ಬಹುತೇಕ ಚಿತ್ರವನ್ನು ಲಿಫ್ಟ್‌ನಲ್ಲೇ ಶೂಟ್ ಮಾಡಲಾಗಿದೆ. ಸಣ್ಣ ಜಾಗದಲ್ಲೂ ಅವರು ತುಂಟತನ ಬಿಡುವುದಿಲ್ಲ. ಎಂದಿನಂತೆ ಬಣ್ಣದ ಬಾಟ್ಲಿಗಳು ಖಾಲಿ ಆಗುತ್ತವೆ. ಕಲರ್‌ಫುಲ್ ಪೇಪರ್ಸ್ ಹಾರುತ್ತವೆ. ಆಪಲ್ ಕಾಣುತ್ತದೆ. ಬಗೆಬಗೆಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ. ರವಿಚಂದ್ರನ್ ಅವರ ಟಿಪಿಕಲ್ ಮೇಕಿಂಗ್ ಇಲ್ಲೂ ಮುಂದುವರಿದಿದೆ. ಆದರೆ, ಈ ಬಾರಿ ಪ್ರತಿ ದೃಶ್ಯಕ್ಕೂ ಸಬ್‌ಟೈಟಲ್ ಜತೆ ಸನ್ನಿವೇಶಕ್ಕೆ ತಕ್ಕ ಭಾವ ಸೂಸುವ ಇಂಗ್ಲಿಷ್ ಕ್ವೊಟೇಶನ್ ಬಳಸುತ್ತಾರೆ. ಅದಂತೂ ದೃಶ್ಯದ ಅಂದ ಕೆಡಿಸಿದೆ. ರಾಜಶೇಖರ್ ಪಾತ್ರವನ್ನು ಆದರ್ಶ ವ್ಯಕ್ತಿ ಎಂಬಂತೆ ಬಿಂಬಿಸಿ, ಕ್ಲೈಮ್ಯಾಕ್ಸ್‌ನಲ್ಲಿ ಅಪ್ಪಟ ಸ್ವಾರ್ಥಿಯನ್ನಾಗಿಸಿದ್ದಾರೆ. ಅದನ್ನು ಒಪ್ಪಿಕೊಳ್ಳುವುದು ಕೊಂಚ ಕಷ್ಟವೆನಿಸುತ್ತದೆ.
'ಅಪೂರ್ವ' ಚಿತ್ರ ರವಿಚಂದ್ರನ್ ಅವರ ರೆಗ್ಯುಲರ್ ಸಿನಿಮಾವಲ್ಲ. ಹಾಗಂತ ಕಲಾತ್ಮಕ ಚಿತ್ರವೂ ಅಲ್ಲ. ಈ ಝೋನರ್ ಅರ್ಥ ಮಾಡಿಕೊಳ್ಳಲಾದರೂ, ನೀವು ಸಿನಿಮಾನ್ನೊಮ್ಮೆ ನೋಡಬೇಕು.
ಕನ್ನಡ ಚಿತ್ರ : ಅಪೂರ್ವ