ಬೆಂಗಳೂರು: ಎರಡು ವಿಷಯಗಳ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಶನಿವಾರ ಇರುವುದರಿಂದ ತಮ್ಮ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತದೆ, ಹಾಗಾಗಿ ಆ ವಿಷಯಗಳ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿ ಕ್ರೈಸ್ತ ಧರ್ಮದ ಒಂದು ಪಂಗಡದವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸೌತ್ ಸೆಂಟ್ರಲ್ ಇಂಡಿಯನ್ ಯೂನಿಯನ್ ಮತ್ತು ಸೆವೆಂತ್ ಡೇ ಅಡ್ವೆಂಟಿಸ್ಟ್ ಸಂಘ ಹಾಗೂ ಮಾಸ್ಟರ್ ಜಸ್ಟಿನ್ ಜೋಷ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯಪೀಠ, ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿತು. ಅಲ್ಲದೆ, ''ವಿದ್ಯಾರ್ಥಿ ಸಬ್ಬತ್ ದಿನ ವಿದ್ಯಾಭ್ಯಾಸ ಮುಂದುವರಿಸಿದರೆ ಅದು ಅವರ ಧಾರ್ಮಿಕ ಆಚರಣೆಯ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲ.ವಾರ ಯಾವ ದಿನ ಬೇಕಾದರೂ ಆರಂಭವಾಗಬಹುದು, ಏಳನೇ ದಿನ ಯಾವ ದಿನ ಬೇಕಾದರೂ ಬೀಳಬಹುದು. ಅಲ್ಲದೆ ಶನಿವಾರದಂದು ವಿದ್ಯಾರ್ಥಿ ಓದಬಾರದು ಎಂದು ಯಾವ ಸಂಪ್ರದಾಯದಲ್ಲೂ ಇಲ್ಲ, ಓದುವುದರಿಂದ ಅವರ ಧಾರ್ಮಿಕ ಹಕ್ಕಿಗೆ ಚ್ಯುತಿಯಾಗುವುದಿಲ್ಲ. ಹಾಗಾಗಿ ಪರೀಕ್ಷೆ ಮುಂದೂಡಿಕೆ ಕೋರಿಕೆಯಲ್ಲಿ ಅರ್ಥವಿಲ್ಲ'' ಎಂದು ನ್ಯಾಯಪೀಠ ಹೇಳಿತು. ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ ''ಸಂವಿಧಾನದ 25(1)ನೇ ವಿಧಿ ಅನ್ವಯ ದೇಶದ ಪ್ರತಿಯೊಬ್ಬರೂ ತನ್ನಿಷ್ಟದ ಧರ್ಮ ಪಾಲನೆ, ಆಚರಣೆ ಹಕ್ಕಿದೆ. ಆದರೆ ಪರೀಕ್ಷೆ ವಿಷಯದಲ್ಲಿ ಧಾರ್ಮಿಕ ಆಚರಣೆ ತರಬಾರದು ''ಎಂದು ಅಭಿಪ್ರಾಯಪಟ್ಟಿತು. ಅರ್ಜಿಗೆ ತೀವ್ರ ಆಕ್ಷೇಪ ಎತ್ತಿದ ಸರಕಾರಿ ವಕೀಲರು ''ಸುಮಾರು 2.72ಲಕ್ಷ ಮಂದಿ ದ್ವಿತೀಯ ಪಿಯಸಿ ಪೂರಕ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಮೊದಲೇ ಅತಿ ಕಡಿಮೆ ಸಮಯವಿದೆ. ಅಂತಹುದರಲ್ಲಿ ಮತ್ತೆ ಮುಂದೂಡಿದರೆ ಎಲ್ಲ ವಿದ್ಯಾರ್ಥಿಗಳಿಗೂ ತೊಂದರೆ ಆಗಲಿದೆ''ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಜು.2 ಹಾಗೂ ಜು.9ರಂದು ಶನಿವಾರವಾಗಿರುವುದರಿಂದ ಅಂದು ಸಬ್ಬತ್ ಇದೆ, ಆದ್ದರಿಂದ ಅಂದು ನಿಗದಿಯಾಗಿರುವ ಪರೀಕ್ಷೆಗಳನ್ನು ಮುಂದೂಡುವಂತೆ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
↧
ಪಿಯುಸಿ ಪೂರಕ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ
↧