- ಪದ್ಮಿನಿ ಜೈನ್ ಎಸ್. ಹಿರಿಯ ನಟ ಶ್ರೀನಾಥ್ ನಟನೆಯ 'ಸುಳಿ' ಚಿತ್ರ ಮೇ 27ಕ್ಕೆ ಬಿಡುಗಡೆ ಆಗಲಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾದ ಟಿ.ಎಸ್. ಸತ್ಯನಾರಾಯಣ ಹಾಗೂ ಗೀತಾ ಶ್ರೀನಾಥ್ ಸಿನಿಮಾದ ಸ್ಕ್ರಿಪ್ಟ್, ನಿರ್ಮಾಣ ಮತ್ತು ಶೂಟಿಂಗ್ ಅನುಭವಗಳನ್ನು ಖುಷಿ ಖುಷಿಯಾಗಿ ಹಂಚಿಕೊಂಡಿದ್ದಾರೆ. 'ಮಾನಸ ಸರೋವರ' ನಂತರ 'ಸುಳಿ' ಚಿತ್ರ ತಮ್ಮ ಪತಿಯ ಕರಿಯರ್‌ಗೆ ದೊಡ್ಡ ಬ್ರೇಕ್ ಕೊಡಲಿದೆ ಅನ್ನುವುದು ಗೀತಾ ಶ್ರೀನಾಥ್ ನಂಬಿಕೆ. 'ನಾನು ದಿಯಾ ಕಮ್ಯನಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಕಟ್ಟಿದ್ದೇ ಶ್ರೀನಾಥ್‌ಗಾಗಿ. ಈಗ ಅವರಿಗೆ ಸಿಗುತ್ತಿರುವ ಪಾತ್ರಗಳು ಪ್ರೇಕ್ಷಕನ ನೆನಪಿನಲ್ಲಿ ಉಳಿಯುತ್ತಿಲ್ಲ. ಹಾಗಾಗಿ ನಾನು ಅವರ ವಯಸ್ಸಿಗೆ ಹೊಂದುವಂತಹ ಕ್ಯಾರೆಕ್ಟರ್ ಹಾಗೂ ಕತೆ ಹುಡುಕುತ್ತಿದ್ದೆ. ನಿರ್ದೇಶಕ ವಿಶ್ವನಾಥ್ ಅವರ ಕತೆ ಇಷ್ಟವಾಯಿತು. ಹೀಗಾಗಿ ಸಿನಿಮಾ ಮಾಡಲು ಮುಂದಾದೆ' ಅಂತಾರೆ ಗೀತಾ. ಚಿತ್ರದಲ್ಲಿ ಶ್ರೀನಾಥ್ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಇದರ ಹಿಂದೆಯೂ ಗೀತಾ ಅವರ ಕೈಚಳಕವಿದೆ. 'ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯಾಗಿ ಶ್ರೀನಾಥ್ ನಟಿಸಿದ್ದಾರೆ. ಟಿಪಿಕಲ್ ಮುಸ್ಲಿಂ ಲುಕ್ ಅದು. ಅವರು ಗಡ್ಡ ಬಿಡಬೇಕಿತ್ತು. ಅದಕ್ಕೆ ಅವರು ಒಪ್ಪಲಿಲ್ಲ. ಈ ವಿಚಾರದಲ್ಲಿ ಜಗಳ ಮಾಡಿ, ಕೊನೆಗೂ ಒಪ್ಪಿಸಿದೆ. ಶೂಟಿಂಗ್‌ನಲ್ಲಿದ್ದಾಗ ಇವರೇ ಶ್ರೀನಾಥ್ ಅಂತ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆ ಜಾಗದಲ್ಲಿದ್ದ ಮುಸ್ಲಿಂ ಜನರು, ತಮ್ಮವರೇ ಇರಬೇಕೆಂದು ಭಾವಿಸಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ಮೇಕ್ ಓವರ್‌ನ ಪ್ರಭಾವ ಬೀರಿತ್ತು' ಅನ್ನುತ್ತಾರೆ ಗೀತಾ. ತುಂಬ ವರ್ಷಗಳ ಬಳಿಕ ಸದಭಿರುಚಿಯ ಚಿತ್ರವೊಂದನ್ನು ನಿರ್ಮಿಸಿದ ಖುಷಿ ಇನ್ನೊಬ್ಬ ನಿರ್ಮಾಪಕ ಟಿ.ಎಸ್. ಸತ್ಯನಾರಾಯಣ ಅವರದ್ದು. 'ನಿರ್ದೇಶಕರು ಬರೆದ ಕತೆಯಲ್ಲಿದ್ದ ಸಾಮಾಜಿಕ ಬದ್ಧತೆ ನನಗೆ ಹಿಡಿಸಿತು. ಅದು ದೇಶದ ಹಾಗೂ ವಿಶ್ವದ ಬದ್ಧತೆ ಆಗಬೇಕು ಅನಿಸಿತು. ಮುಸ್ಲಿಂ ಫ್ಯಾಮಿಲಿಯೊಂದರ ನೋವು ನಲಿವಿನ ಕತೆ ಇದಾಗಿದ್ದರಿಂದ ನನಗೆ ಹಿಡಿಸಿತು. ಹೀಗಾಗಿ ನಿರ್ಮಿಸಲು ಮುಂದಾದೆ' ಎನ್ನುತ್ತಾರೆ ಸತ್ಯನಾರಾಯಣ. ಇವರು ಈ ಚಿತ್ರದಲ್ಲಿ ಪಟೇಲನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಅವಕಾಶ ಸಿಕ್ಕಿದ್ದು ಆಕಸ್ಮಿಕವಂತೆ. 'ನಾನು ಶೂಟಿಂಗ್ ನೋಡಲು ಹೋಗಿದ್ದು ಕಡಿಮೆ. ಒಂದು ಸಾರಿ ಹೋದಾಗ ಪಟೇಲನ ಪಾತ್ರಕ್ಕೆ ನನ್ನನ್ನೇ ನಿಲ್ಲಿಸಿಬಿಟ್ಟರು. ನನಗೋ ಅಚ್ಚರಿ. ಇದು ನಿರೀಕ್ಷಿಸದೆ ಬಂದ ಅವಕಾಶ' ಅಂತಾರೆ. -------------------------------- ಫೋಟೊ: ಗೀತಾ ಶ್ರೀನಾಥ್ ಹಾಗೂ ಟಿ.ಎಸ್. ಸತ್ಯನಾರಾಯಣ
↧
ಸುಳಿಯ ಕತೆ ಮೆಚ್ಚಿ ಸಿನಿಮಾ ಮಾಡಿದರು
↧