ಬೆಂಗಳೂರು" ಲೋಕಾಯುಕ್ತ ಹುದ್ದೆಗೆ ನ್ಯಾ.ಎಸ್.ಆರ್. ನಾಯಕ್ ನೇಮಕ ಪ್ರಸ್ತಾವವನ್ನು ರಾಜ್ಯಪಾಲರು ಎರಡನೇ ಬಾರಿಗೆ ವಾಪಸ್ ಕಳುಹಿಸಿದ್ದಾರೆ. ಇದರೊಂದಿಗೆ ಈ ನೇಮಕ ಪ್ರಕ್ರಿಯೆಗೆ ಮತ್ತೊಮ್ಮೆ ಹಿನ್ನಡೆಯಾಗುವಂತಾಗಿದ್ದು, ಲೋಕಾಯುಕ್ತದ ಮುಖ್ಯಸ್ಥರ ಸ್ಥಾನವನ್ನೇ ಖಾಲಿ ಇಡಲು ಸರಕಾರ ಹೊರಟಿದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಮತ್ತೊಮ್ಮೆ ವಾಪಸ್ ಕಳುಹಿಸಿದ್ದರಿಂದ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೆ, ಯಾವುದೇ ಆರೋಪ ಹೊಂದಿಲ್ಲದವರನ್ನು ಈ ಹುದ್ದೆಗೆ ನಿಯುಕ್ತಿಗೊಳಿಸಲು ಮುಂದಾಗಬೇಕಿದ್ದ ಸರಕಾರ, ನಾಯಕ್ ಅವರನ್ನೇ ನೇಮಿಸಲು ಪಟ್ಟು ಹಿಡಿದಂತೆ ವರ್ತಿಸುತ್ತಿದೆ. ಈ ಮೂಲಕ ಈ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಲಾಗುತ್ತಿದೆಯೇ ಆಕ್ಷೇಪ ವ್ಯಕ್ತವಾಗುವಂತಾಗಿದೆ. ನ್ಯಾ. ನಾಯಕ್ ಹೆಸರನ್ನು ಲೋಕಾಯುಕ್ತ ಪದವಿಗೆ ಮೊದಲ ಬಾರಿ ಶಿಫಾರಸು ಮಾಡುತ್ತಿದ್ದಂತೆ ಅವರ ವಿರುದ್ಧ ನಿರ್ದಿಷ್ಟ ಆಪಾದನೆ ವ್ಯಕ್ತವಾಗಿತ್ತು. ರಾಜ್ಯಪಾಲರೂ ಈ ಪ್ರಸ್ತಾವನೆ ವಾಪಸ್ ಕಳುಹಿಸಿದ್ದರು. ಸರಕಾರ ಪುನಃ ನಾಯಕ್ ಹೆಸರು ಶಿಫಾರಸು ಮಾಡಿತ್ತು. ಇದರ ಮಧ್ಯೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಲಾಗಿದೆ. ಎಸಿಬಿ ಅಸ್ತಿತ್ವಕ್ಕೆ ಬಂದದ್ದರಿಂದ ಲೋಕಾಯುಕ್ತ ದುರ್ಬಲವಾಗಲಿದೆ ಎಂಬ ಆಕ್ರೋಶ ವ್ಯಾಪಕವಾಗಿ ಕೇಳಿ ಬಂದಿದೆ. ಹಾಗಾಗಿ ರಾಜಭವನದ ಅಸಮ್ಮತಿ ನಡುವೆಯೂ ಮತ್ತೆ ಮತ್ತೆ ನಾಯಕ್ ಹೆಸರು ಶಿಫಾರಸು ಮಾಡುತ್ತಿರುವುದು ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸುವ ಕಾರ್ಯತಂತ್ರದ ಭಾಗವೇ ಆಗಿದೆ ಎಂಬ ಶಂಕೆಗೆ ಆಸ್ಪದ ಒದಗಿಸುವಂತಾಗಿದೆ. ನ್ಯಾ. ಭಾಸ್ಕರರಾವ್ ಹುದ್ದೆ ತೆರವುಗೊಳಿಸಿದ ಬಳಿಕ ಕಳೆದ ಮೂರು ತಿಂಗಳಿಂದಲೂ ನೂತನ ಲೋಕಾಯುಕ್ತರ ನೇಮಕಕ್ಕೆ ಕಸರತ್ತು ನಡೆಯುತ್ತಿದೆ. ಈ ಸಂಬಂಧ ಮೊದಲ ಸಲಹಾ ಸಮಿತಿಯ ಸಭೆ ನಡೆಸಿದಾಗ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಉಪಸ್ಥಿತರಿದ್ದು, ನ್ಯಾ. ವಿಕ್ರಮ್‌ಜಿತ್ ಸೇನ್ ಹೆಸರು ಸೂಚಿಸಿದ್ದರು. ಇದನ್ನು ಪ್ರತಿಪಕ್ಷದ ನಾಯಕರೂ ಅನುಮೋದಿಸಿದ್ದರು. ಜತೆಗೆ ನ್ಯಾ.ಎನ್.ಕೆ. ಪಾಟೀಲ್, ನ್ಯಾ.ಎಸ್.ಆರ್. ನಾಯಕ್ ಹೆಸರು ಪರಿಶೀಲನೆಯಲ್ಲಿತ್ತು. ಬಳಿಕ ನಾಯಕ್ ಹೆಸರನ್ನು ಸರಕಾರ ರಾಜಭವನಕ್ಕೆ ಕಳುಹಿಸಿ ಕೊಟ್ಟಿತ್ತು. ಈ ಪ್ರಕ್ರಿಯೆಯ ಬೆನ್ನಿಗೇ ನ್ಯಾ. ನಾಯಕ್ ವಿರುದ್ಧ ಹೆಚ್ಚುವರಿ ನಿವೇಶನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜಮೀನು ಖರೀದಿಯ ಆರೋಪಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸ್ಪಷ್ಟೀಕರಣ ಕೇಳಿದರು. ಅದಾದ ಬಳಿಕ ಮತ್ತೊಮ್ಮೆ ಸಲಹಾ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಾಯಕ್ ಹೆಸರು ಸೂಚಿಸಿದರು. ಸಭೆಗೆ ಗೈರಾಗಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಇದಕ್ಕೆ ಸಹಮತ ವ್ಯಕ್ತಪಡಿಸಿ ಪತ್ರ ಕಳುಹಿದ್ದರು. ಆದರೆ, ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಶೆಟ್ಟರ್, ಈಶ್ವರಪ್ಪ, ಮೇಲ್ಮನೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರೋಧಿಸಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪುನಃ ನ್ಯಾ. ವಿಕ್ರಮ್‌ಜಿತ್ ಸೇನ್ ಹೆಸರು ಸೂಚಿಸಿ ಪತ್ರ ಕಳುಹಿದ್ದರು ಎಂದು ವರದಿಯಾಗಿತ್ತು. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನುಸಾರ ಮೊದಲ ಸಭೆ ನಡೆದಿರಲಿಲ್ಲ. ಹಾಗಾಗಿ ಮತ್ತೊಂದು ಸಭೆ ನಡೆಸಿ ನಾಯಕ್ ಹೆಸರು ಶಿಫಾರಸು ಮಾಡಿರುವುದಾಗಿ ನಂತರ ಸರಕಾರ ಹೇಳಿಕೊಂಡಿತ್ತು. ಪತ್ರದ ಸಾರಾಂಶ ಇಷ್ಟೆಲ್ಲ ಜಂಜಾಟದ ನಂತರವೂ ನ್ಯಾ. ನಾಯಕ್ ಅವರನ್ನು ಲೋಕಾಯುಕ್ತರಾಗಿ ನಿಯುಕ್ತಿಗೊಳಿಸುವ ಶಿಫಾರಸಿಗೆ ರಾಜ್ಯಪಾಲರು ಅಸ್ತು ಎಂದಿಲ್ಲ. ಪುನಃ ಸ್ಪಷ್ಟೀಕರಣ ಕೇಳಿರುವ ಅವರು, ಸರಕಾರಕ್ಕೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ನಾಯಕ್ ಹೆಸರು ಶಿಫಾರಸಿಗೆ ಈ ಬಾರಿಯೂ ಸಲಹಾ ಸಮಿತಿಯಲ್ಲಿ ಬಹುಮತವಿರಲಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಅನ್ವಯ ಈ ನೇಮಕದ ಸಾಧಕ, ಬಾಧಕದ ಬಗ್ಗೆ ವಿವರವಾದ ಚರ್ಚೆಯಾಗಿಲ್ಲ. ನಾಯಕ್ ವಿರುದ್ಧದ ಆಪಾದನೆಯ ಗಂಭೀರತೆ ಬಗ್ಗೆಯೂ ಪರಾಮರ್ಶೆಯಾಗಿಲ್ಲವೆಂದು ರಾಜ್ಯಪಾಲರ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. -------------------------------------------- ಇದೇ ಮೊದಲಲ್ಲ ರಾಜ್ಯ ಸರಕಾರದ ನಾನಾ ಶಿಫಾರಸಿಗೆ ರಾಜ್ಯಪಾಲರು ಸ್ಪಷ್ಟೀಕರಣ ಬಯಸಿದ್ದು ಇದೇ ಮೊದಲಲ್ಲ. ಉಪ ಲೋಕಾಯುಕ್ತ ಹುದ್ದೆಗೆ ನ್ಯಾ.ಕೆ.ಎಲ್. ಮಂಜುನಾಥ್ ಅವರನ್ನು ನೇಮಿಸುವಂತೆ ಸರಕಾರ ಎರಡು ಬಾರಿ ಮಾಡಿದ್ದ ಶಿಫಾರಸನ್ನು ರಾಜ್ಯಪಾಲರು ವಾಪಸ್ ಕಳುಹಿದ್ದರು. ನಂತರ ಈ ಹುದ್ದೆಗೆ ನ್ಯಾ. ಆನಂದ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕ ಪ್ರಸ್ತಾವವನ್ನೂ ವಾಪಸ್ ಕಳುಹಿಸಿದ್ದರು. ಬದಲಿ ಹೆಸರು ಶಿಫಾರಸಿಗೆ ಸೂಚನೆ ನ್ಯಾ.ಎಸ್.ಆರ್. ನಾಯಕ್ ವಿರುದ್ಧ ಗುರುತರ ಆಪಾದನೆಯಿರುವ ಮಾಹಿತಿಯಿದೆ. ಹಾಗೆಯೇ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದವರು ಈ ಹುದ್ದೆಗೆ ನೇಮಕವಾಗಬಹುದಾ ಎನ್ನುವ ಕುರಿತೂ ಸ್ಪಷ್ಟತೆಯಿಲ್ಲ. ಜತೆಗೆ ಈ ನೇಮಕಕ್ಕೆ ಸಲಹಾ ಸಮಿತಿಯಲ್ಲಿ ಬಹುಮತವೂ ಇರಲಿಲ್ಲ. ಈ ಹಿಂದೊಮ್ಮೆ ಉಪ ಲೋಕಾಯುಕ್ತರ ಹುದ್ದೆಗೆ ನ್ಯಾ. ಚಂದ್ರಶೇಖರಯ್ಯ ಅವರನ್ನು ನೇಮಿಸುವಾಗ ಸುಪ್ರೀಂ ಕೋರ್ಟ್ ಆದೇಶದಂತೆ ಈ ಸ್ಥಾನಕ್ಕೆ ಅವರು ಅರ್ಹರಿದ್ದಾರೆಯೇ ಎನ್ನುವ ಬಗ್ಗೆ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಇಲ್ಲಿ ಅಂತಹ ಪ್ರಕ್ರಿಯೆ ನಡೆದಿಲ್ಲ. ಜತೆಗೆ ಇಂತಹ ವಿವಾದಾತ್ಮಕ ನೇಮಕ ಕೈಗೊಳ್ಳುವುದಕ್ಕಿಂತ ಬದಲಿ ಹೆಸರು ಶಿಫಾರಸು ಮಾಡುವಂತೆಯೂ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಸಿಎಂ ಮಾತುಕತೆ ನಡೆಸಿದ್ದರು ನ್ಯಾ.ಎಸ್.ಆರ್. ನಾಯಕ್ ನೇಮಕಕ್ಕೆ ವೈಯಕ್ತಿಕವಾಗಿ ಒಲವು ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರನ್ನು ಭೇಟಿಯಾಗಿದ್ದಾಗ ಈ ಬಗ್ಗೆ ಚರ್ಚಿಸಿದ್ದರು. ನಾಯಕ್ ವಿರುದ್ಧದ ಆಪಾದನೆ ಬಗ್ಗೆಯೂ ವಿವರಣೆ ನೀಡಿದ್ದರಲ್ಲದೆ, ಈ ನೇಮಕಕ್ಕೆ ಸಮ್ಮತಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.
↧
ನೇಮಕ ವಿಳಂಬದ ಹಿಂದೆ ಲೋಕಾ ನಿಷ್ಕ್ರಿಯದ ತಂತ್ರ
↧