* ಎಚ್. ಮಹೇಶ್ ಇದುವರೆಗೂ ಪ್ರೇಕ್ಷಕ ದೆವ್ವಗಳು ಎಂದರೆ ಮಾನವರಿಗೆ ಕೆಟ್ಟದು ಮಾಡುತ್ತವೆ, ಅವುಗಳಿಂದ ರಕ್ಷಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗುವುದು , ದೇವರ ಮೊರೆ ಹೋಗುವ ಚಿತ್ರಗಳನ್ನು ನೋಡಿದ್ದಾನೆ. ಆದರೆ ಫಾರ್ ಎ ಚೇಂಜ್ ಈ ಚಿತ್ರದಲ್ಲಿ ದೆವ್ವವೊಂದು (ಸಿಂಧು ಲೋಕನಾಥ್ ) ತನ್ನ ಸಾವಿಗೆ ಕಾರಣನಾದವನ (ನವರಸನ್) ಮೇಲೆ ಸೇಡು ತೀರಿಸಿಕೊಳ್ಳದೇ ಪ್ರೀತಿ ಮಾಡಲು ಶುರು ಮಾಡಿಕೊಳ್ಳುತ್ತದೆ. ಚಿತ್ರದ ನಾಯಕ ನವರಸನ್ ಮನೆಯಲ್ಲಿ ದೆವ್ವ ಸೇರಿಕೊಂಡು ನಾಯಕನಿಗೆ ಯಾರು ಯಾರು ಕಷ್ಟ ಕೊಡುತ್ತಾರೋ ಅವರನ್ನು ಬಲಿ ಪಡೆಯುತ್ತದೆ. ಹಾಗಾಗಿ ದೆವ್ವ ಹಾಗೂ ಹುಡುಗನೊಬ್ಬನ ನಡುವೆ ನಡೆಯುವ ಲವ್ ಸ್ಟೋರಿಯನ್ನು ದೃಶ್ಯ ರೂಪದಲ್ಲಿ ತೋರಿಸಿರುವ ರೀತಿ ವಿಭಿನ್ನವಾಗಿದೆ. ಚಿತ್ರದ ಕತೆ ಡಿಫರೆಂಟ್. ಚಿತ್ರಕತೆ ಕೂಡ ಅಷ್ಟೇ ಡಿಫರೆಂಟ್. ಆದರೆ ಪಾತ್ರಧಾರಿಗಳ ಆಯ್ಕೆಯಲ್ಲಿ ಎಡವಟ್ಟಾಗಿದೆ ಅನಿಸುತ್ತದೆ.
ಇದು ತಮಿಳಿನ ಸೂಪರ್ ಹಿಟ್ ಚಿತ್ರ ಪಿಶಾಚು ಚಿತ್ರದ ರಿಮೇಕ್. ತಮಿಳಿನ ಖ್ಯಾತ ನಿರ್ದೇಶಕ ಮಿಸ್ಕಿಕ್ ಚಿತ್ರ ನಿರ್ದೇಶಿಸಿದ್ದರು. ಕನ್ನಡದಲ್ಲಿ ನಿರ್ದೇಶಕ ಆಶ್ರಫ್ ಮೂಲ ಕತೆಗೆ ಜೋತು ಬಿದ್ದಿದ್ದಾರೆ. ಸೀನ್ ಟು ಸೀನ್ ರೀಮೇಕ್ ಚಿತ್ರವೇ. ಅಲ್ಲಿನ ಕಲಾವಿದರು ಬೇರೆ, ಇಲ್ಲಿನವರು ಬೇರೆ ಎನ್ನುವುದು ಬಿಟ್ಟರೆ ಉಳಿದಂತೆ ಎಲ್ಲವೂ ಮೂಲ ಚಿತ್ರದಂತೆಯೇ ಇದೆ. ಆದರೆ ಮೂಲ ಚಿತ್ರದಲ್ಲಿ ದೆವ್ವವನ್ನು ಕಂಪ್ಯೂಟರ್ ಗ್ರಾಫಿಕ್‌ನಲ್ಲಿ ತೋರಿಸಿ ಸೈ ಅನಿಸಿಕೊಂಡಿದ್ದರು. ಇಲ್ಲಿ ಬಜೆಟ್ ಕಾರಣಕ್ಕೋ ಏನೋ ಗ್ರಾಫಿಕ್ ದೆವ್ವ ಎಂದು ಸುಲಭವಾಗಿ ಗೊತ್ತಾಗಿಬಿಡುತ್ತದೆ. ತಮಿಳು ನಟ ನವರಸನ್ ಇಲ್ಲಿ ಚಿತ್ರದ ನಾಯಕ ಅಷ್ಟೇ ಅಲ್ಲ, ನಿರ್ಮಾಪಕ ಕೂಡ. ಹಾಗಾಗಿ ಅವರಿಗೆ ಹೆಚ್ಚು ಸ್ಕೋಪ್ ಸಿಕ್ಕಿದೆ. ತಮಿಳು ನಟ ವಿಶಾಲ್ ತಂದೆ ಇಲ್ಲಿ ಸಿಂಧು ಲೋಕನಾಥ್ ತಂದೆಯ ಪಾತ್ರಧಾರಿಯಾಗಿ ನಟಿಸಿದ್ದಾರೆ. ಅವರ ನಟನೆಗೆ ಪೂರ್ತಿ ಅಂಕ. ಸಿಂಧು ದೆವ್ವವಾಗಿ ಜನರನ್ನು ಬೆಚ್ಚಿ ಬೀಳಿಸುತ್ತಾರೆ. ಅವರ ನಟನೆ ಹಾಗೂ ಪ್ರೀತಿ ನಿವೇದಿಸಿಕೊಳ್ಳುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಿತ್ರದ ಕತೆ ವಿಭಿನ್ನವಾಗಿರುವುದರಿಂದ ಇದೊಂದು ಸಾಮಾನ್ಯ ಹಾರರ್ ಚಿತ್ರ ಎಂದು ಅನಿಸುವುದಿಲ್ಲ. ಚಿತ್ರದ ಕ್ಲೈಮಾಕ್ಸ್ ದೃಶ್ಯವಂತೂ ಮನ ಕಲಕುತ್ತದೆ. ಕಡಿಮೆ ಬಜೆಟ್‌ನಲ್ಲಿ ಹೊಸ ಕಲಾವಿದರನ್ನು ಇಟ್ಟುಕೊಂಡು ನಿರ್ದೇಶಕ ಆಶ್ರಫ್ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಸಿನಿಮಾ ಮಾಡಿದ್ದಾರೆ. ಚೆಂದದ ಲವ್ ಸ್ಟೋರಿಗೆ ಹಾರರ್ ಟಚ್ ಕೊಟ್ಟು ಚಿತ್ರ ನೋಡಿಸಿಕೊಂಡು ಹೋಗುವಂತೆ ಮಾಡಿದ್ದಾರೆ. ಚಿತ್ರದ ಕ್ಯಾಮೆರಾ ಕೆಲಸ ಹಾಗೂ ಹಿನ್ನೆಲೆ ಸಂಗೀತ ಹಾರರ್ ಚಿತ್ರಕ್ಕೆ ಅನುಗುಣವಾಗಿದೆ. ಹಾರರ್ ಚಿತ್ರಗಳನ್ನು ನೋಡಲು ಇಷ್ಟಪಡುವ ಮಂದಿ ಚಿತ್ರ ನೋಡಿ ಎನ್‌ಜಾಯ್ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಹೆದರಿಕೊಳ್ಳುವುದು ಗ್ಯಾರಂಟಿ.
ಕನ್ನಡ ಚಿತ್ರ