ಮೇ 1ಕ್ಕೆ ಯೋಜನೆ ಆರಂಭ * 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ನೆರವು ಹೊಸದಿಲ್ಲಿ: ದೇಶದ ಐದು ಕೋಟಿ ಕಡು ಬಡ ಕುಟುಂಬಗಳಿಗೆ ಮೂರು ವರ್ಷಗಳ ಅವಧಿಯಲ್ಲಿ ಉಚಿತವಾಗಿ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಕಲ್ಪಿಸುವ ಮಹತ್ತ್ವಾಕಾಂಕ್ಷೆಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಮೇ 1ರಂದು ಚಾಲನೆ ನೀಡಲಿದ್ದಾರೆ. ಒಟ್ಟು 8,000 ಕೋಟಿ ರೂ.ಗಳ ಯೋಜನೆ ಇದಾಗಿದ್ದು, 1.13 ಕೋಟಿ ಎಲ್ಪಿಜಿ ಬಳಕೆದಾರರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಟ್ಟಿದ್ದ ಸಬ್ಸಿಡಿಯಿಂದ ಸರಕಾರಕ್ಕೆ ಉಳಿತಾಯವಾಗಿರುವ ಮೊತ್ತವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿಯವರು ಉತ್ತರಪ್ರದೇಶದಲ್ಲಿ ಮೇ 1ರಂದು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. 2015ರ ಜನವರಿಯಲ್ಲಿ ಅಡುಗೆ ಅನಿಲ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ' ಗಿವ್ ಇಟ್ ಅಪ್' ಯೋಜನೆಗೆ ಚಾಲನೆ ನೀಡಲಾಗಿತ್ತು. ನಂತರ 1.13 ಕೋಟಿ ಮಂದಿ ಎಲ್ಪಿಜಿ ಸಬ್ಸಿಡಿಯನ್ನು ತ್ಯಜಿಸಿದ್ದರು ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು. ಸಬ್ಸಿಡಿಗಳನ್ನು ಬಿಟ್ಟುಕೊಡುವುದರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, 16.44 ಲಕ್ಷ ಗ್ರಾಹಕರು ತ್ಯಜಿಸಿದ್ದಾರೆ. ಉತ್ತರಪ್ರದೇಶ ಎರಡನೇ ಸ್ಥಾನದಲ್ಲಿದೆ (13 ಲಕ್ಷ), ದಿಲ್ಲಿ (7.26 ಲಕ್ಷ) ಗುಜರಾತ್ (4.2 ಲಕ್ಷ) ಹಾಗೂ ಒಡಿಶಾದಲ್ಲಿ 1.3 ಲಕ್ಷ ಮಂದಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಎಲ್ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಟ್ಟಿರುವ 1.13 ಕೋಟಿ ಗ್ರಾಹಕರ ಪೈಕಿ ಸುಮಾರು ಅರ್ಧದಷ್ಟು ಮಂದಿ ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ ಮತ್ತು ಕರ್ನಾಟಕ ಮೂಲದವರಾಗಿದ್ದಾರೆ. ಮಾರುಕಟ್ಟೆ ದರದಲ್ಲಿ ಎಲ್ಪಿಜಿ ಸಿಲಿಂಡರ್ (14.2 ಕೆ.ಜಿ) ದರ 509.50 ರೂ.ಗಳಾಗಿವೆ. ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ನೀಡುವ ಎಲ್ಪಿಜಿ ಸಂಪರ್ಕದ ತಲಾ 1,600 ರೂ. ವೆಚ್ಚವನ್ನು ಸರಕಾರ ಭರಿಸಲಿದೆ. ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ 10,000 ಹೊಸ ಎಲ್ಪಿಜಿ ವಿತರಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ತಿಳಿಸಿದ್ದಾರೆ. ಈಗ ದೇಶದಲ್ಲಿ 18,000 ಗ್ಯಾಸ್ ಡಿಸ್ಟ್ರಿಬ್ಯೂಟರ್‌ಗಳು ಇದ್ದಾರೆ. ಮುಂದಿನ ಮೂರು ತಿಂಗಳಿನಲ್ಲಿ 2,000 ಹೊಸ ವಿತರಕರನ್ನು ನಿಯುಕ್ತಿಗೊಳಿಸಲಾಗುವುದು. ಪ್ರಸಕ್ತ ಸಾಲಿನ ಮುಕ್ತಾಯದೊಳಗೆ 8,000 ಮಂದಿಯನ್ನು ನಿಯುಕ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಮೇ 1ರಂದು ಚಾಲನೆ ನಿಡಲಿರುವ ಉಜ್ವಲ ಜೀವನ್ ಯೋಜನೆ ಕಾರ್ಯಕ್ರಮದ ಸಿದ್ಧತೆಗಳನ್ನು ಅವರು ವೀಕ್ಷಿಸಿದರು. ದೇಶದಲ್ಲಿ ಶೇ.61 ಕುಟುಂಬಗಳು ಅಡುಗೆ ಅನಿಲ ಬಳಸುತ್ತಿವೆ. ಉತ್ತರ ಪ್ರದೇಶದಲ್ಲಿ 53 ಪರ್ಸೆಂಟ್ ಕುಟುಂಬಗಳು ಎಲ್ಪಿಜಿ ಬಳಸುತ್ತಿವೆ. ಸರಕಾರವು ರಿಫೈನರೀಸ್‌ಗಳಲ್ಲಿ ಅಡುಗೆ ಅನಿಲದ ಉತ್ಪಾದನೆಯನ್ನು ಹೆಚ್ಚಿಸುವುದರ ಜತೆಗೆ, ಗ್ರಾಹಕರಿಗೆ ಪೂರೈಕೆಯನ್ನೂ ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದರು. ಸರಕಾರದ ಗಿವ್ ಇಟ್ ಅಪ್ ಅಭಿಯಾನದ ಅಡಿಯಲ್ಲಿ ಎಲ್ಪಿಜಿ ಸಬ್ಸಿಡಿಯನ್ನು ಬಿಟ್ಟುಕೊಟ್ಟವರು 1 ವರ್ಷದ ನಂತರ ಮತ್ತೆ ಸಬ್ಸಿಡಿಯನ್ನು ಪಡೆಯಲು ಕೋರಿಕೆ ಸಲ್ಲಿಸಬಹುದು ಎಂದೂ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
* 8,000 ಕೋಟಿ ರೂ.ಗಳ ಯೋಜನೆ
**
10 ಸಾವಿರ ಹೊಸ ಎಲ್ಪಿಜಿ ವಿತರಕರ ನೇಮಕ
↧
ಎಲ್ಪಿಜಿ ಉಚಿತ ಸಂಪರ್ಕ: ಮೇ 1ಕ್ಕೆ ಚಾಲನೆ
↧