ಮುಂಬಯಿ: ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ನಡುವೆ ಶುರುವಾದ ಅಫೇರ್ ಜಟಾಪಟಿ ಇದೀಗ ಗಂಭೀರ ಹಂತ ತಲುಪಿದೆ. ಹೃತಿಕ್ ಅವರನ್ನು ಬಂಧಿಸಬೇಕು ಎಂದು ಕಂಗನಾ ಪೊಲೀಸ್ ಆಯುಕ್ತರನ್ನು ಮನವಿ ಮಾಡಿಕೊಂಡಿದ್ದಾರೆ.
ತಮ್ಮಿಬ್ಬರ ನಡುವೆ ವಿನಿಮಯವಾದ ಖಾಸಗಿ ಸಂದೇಶ ಹಾಗೂ ಫೋಟೊಗಳನ್ನು ಹೃತಿಕ್ ರೋಷನ್ ಇಮೇಲ್ ಮೂಲಕ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ. ಇದರಿಂದ ತಮ್ಮ ಘನತೆಗೆ ಧಕ್ಕೆ ಬಂದಿದೆ ಎಂದು ಆರೋಪಿಸಿರುವ ಕಂಗನಾ, ಕ್ರಿಮಿನಲ್ ಉದ್ದೇಶ ಹೊಂದಿರುವ ಹೃತಿಕ್ ಅವರನ್ನು ಬಂಧಿಸುವಂತೆ ಮುಂಬಯಿ ಪೊಲೀಸ್ ಆಯುಕ್ತರನ್ನು ಕೇಳಿಕೊಂಡಿದ್ದಾರೆ.
''ಹೃತಿಕ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಮಾನಹಾನಿ ಮಾಡಿದ್ದು, ಮಾಧ್ಯಮಗಳಲ್ಲಿ ಈ ವಿಷಯ ಬಯಲಾಗಿ ಘನತೆಗೆ ಧಕ್ಕೆ ಉಂಟಾಗಿದೆ. ಹೃತಿಕ್ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ'' ಎಂದು ಕಂಗನಾ ಆರೋಪಿಸಿದ್ದಾರೆ.
ಕಂಗನಾ ಅವರ ಪರ ವಕೀಲ ರಿಜ್ವಾನ್ ಸಿದ್ಧಿಕಿ ಅವರು ಈ ಸಂಬಂಧ ಮುಂಬಯಿ ಪೊಲೀಸ್ ಆಯುಕ್ತರಿಗೆ ಏಪ್ರಿಲ್ 6ರಂದು ಪತ್ರ ಬರೆದಿದ್ದು, ಪ್ರಕರಣ ಕುರಿತು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.
''ಶೂಟಿಂಗ್ ಮತ್ತಿತರ ಸಮಯದಲ್ಲಿ ನನ್ನ ಕಕ್ಷಿದಾರರಾದ ಕಂಗನಾ ಅವರು ಹೃತಿಕ್ ಅವರೊಂದಿಗಿದ್ದಾಗ ತೆಗೆಸಿಕೊಂಡಿದ್ದ ಫೋಟೊಗಳು ಹಾಗೂ ಅವರಿಬ್ಬರ ನಡುವೆ ವಿನಿಮಯವಾಗಿದ್ದ ಸಂದೇಶಗಳನ್ನು ಹೃತಿಕ್ ತಮ್ಮ ಸ್ನೇಹಿತರು, ಮಾಧ್ಯಮದವರೊಂದಿಗೆ ಇ ಮೇಲ್ ಮೂಲಕ ಹಂಚಿಕೊಂಡಿದ್ದಾರೆ. ಹೃತಿಕ್ ಅವರು ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿರುವ ಕಾರಣ ಅವರ ವಿರುದ್ಧ ಸೆಕ್ಷನ್ 149 ಮತ್ತು 150ರ ಅಡಿ ಪ್ರಕರಣ ದಾಖಲಿಸಿ ಕ್ರಿಮಿನಲ್ ಆರೋಪದ ಮೇಲೆ ಬಂಧಿಸಿ,'' ಎಂದು ರಿಜ್ವಾನ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
*ತಾರೆಯರ ಜಟಾಪಟಿ ಜೋರು