ದೇಶೀಯ ಹಾಗೂ ಜಾಗತಿಕ ಹೂಡಿಕೆದಾರರ 'ಹ್ಯಾಪನಿಂಗ್ ಹರಿಯಾಣಾ' ಸಮಾವೇಶದಲ್ಲಿ ಮಾತನಾಡಿದ ಅವರು, ''ಹೂಡಿಕೆದಾರರಿಗೆ ಅಗತ್ಯವಾದ ಆರ್ಥಿಕ, ಔದ್ಯಮಿಕ ಹಾಗೂ ರಾಜಕೀಯ ಪರಿಸರ ನಿರ್ಮಾಣ ಮಾಡುವವರು ಲಾಭ ಹೊಂದುತ್ತಾರೆ. ಯಾರು ಬದಲಾವಣೆಗೆ ತೆರೆದುಕೊಳ್ಳುವುದಿಲ್ಲವೋ, ಆ ರಾಜ್ಯದ ಜನತೆ ಪ್ರಯೋಜನದಿಂದ ವಂಚಿತರಾಗುತ್ತಾರೆ'' ಎಂದು ಎಚ್ಚರಿಸಿದರು.''ಬದಲಾಗಿ ಇಲ್ಲವೇ ಹಾಳಾಗಿ ಹೋಗಿ ಎಂಬುದು ಇಂದಿನ ಸತ್ಯವಾಗಿದೆ'' ಎಂಬ ಎಚ್ಚರಿಕೆಯ ಮಾತುಗಳನ್ನೂ ಆವರು ಆಡಿದರು.
''ಸಹಕಾರ ಒಕ್ಕೂಟ ವ್ಯವಸ್ಥೆಯ ಜೊತೆಗೆ ಭಾರತವು ಸ್ಪರ್ಧಾ ಒ್ಕಕೂಟ ವ್ಯವಸ್ಥೆಯಾಗಿಯೂ ಬದಲಾಗುತ್ತಿದೆ. ಭವಿಷ್ಯವು ಸ್ಪರ್ಧಾ ಒಕ್ಕೂಟ ವ್ಯವಸ್ಥೆಯದ್ದೇ ಆಗಲಿದೆ. ಏಕೆಂದರೆ ಹೂಡಿಕೆ ಆಕರ್ಷಿಸಲು ಕೇಂದ್ರ- ರಾಜ್ಯ ಸಂಬಂಧಗಳಿಗಿಂತ ಮುಖ್ಯವಾಗಿ, ರಾಜ್ಯರಾಜ್ಯಗಳ ನಡುವಣ ಸ್ಪರ್ಧೆ ಏರ್ಪಡಲಿದೆ'' ಎಂದು ಜೇಟ್ಲಿ ಹೇಳಿದರು.
ಈ ಸಂದರ್ಭದಲ್ಲಿ ಜಾಟರಿಗೆ ಮೀಸಲಾತಿ ಕುರಿತ ಪ್ರಶ್ನೆಗೆ, ''ಕಪ್ಪು ಮೋಡ ಕರಗಿದೆ'' ಮತ್ತು ರಾಜ್ಯಕ್ಕೆ ಪುಟಿದೇಳಬಲ್ಲ ಸಾಮರ್ಥ್ಯವಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಗುರ್‌ಗಾಂವ್ : ಆರ್ಥಿಕ ಸುಧಾರಣೆಗೆ ತೆರೆದುಕೊಳ್ಳದಿದ್ದಲ್ಲಿ ನಾಶ ಖಂಡಿತ ಎಂದು ರಾಜ್ಯಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಚ್ಚರಿಸಿದ್ದಾರೆ. ಉದ್ಯಮ ಸ್ನೇಹಿ ನೀತಿಗಳಿದ್ದರೆ ಮಾತ್ರ ಹೂಡಿಕೆ ಹರಿದುಬರಲು ಸಾಧ್ಯ. ಜಡ್ಡುಗಟ್ಟಿದ ನೀತಿಗಳನ್ನು ಹೂಡಿಕೆದಾರರು ಇಷ್ಟಪಡುವುದಿಲ್ಲ. ಎಲ್ಲಿ ತಮಗೆ ಹೆಚ್ಚು ಅನುಕೂಲಕರವಾದ ವಾತಾವರಣ ಇದೆಯೋ ಅತ್ತ ಅವರು ಹೋಗುತ್ತಾರೆ. ಆದ್ದರಿಂದ ಅಭಿವೃದ್ಧಿ ಹೊಂದುವ ಆಸೆಯಿದ್ದರೆ ನೀತಿಗಳಲ್ಲಿ ಸುಧಾರಣೆ ತರಬೇಕು ಎಂದು ಜೇಟ್ಲಿ ವಿವರಿಸಿದ್ದಾರೆ.