* ಶರಣು ಹುಲ್ಲೂರು
ಮನೆ ಮೆಚ್ಚುವ ಚಿತ್ರಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮನಮೆಚ್ಚಿದ ಬಂಗಾರು ಬಿಡುಗಡೆ ಆಗಿದೆ. ಅದೂ ಕಣ್ಣೀರಿನ ಕತೆಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ. ಸಾಮಾನ್ಯವಾಗಿ ಸಾಯಿ ಪ್ರಕಾಶ್‌ರ ಚಿತ್ರಗಳು ಕೌಟುಂಬಿಕ ಹಿನ್ನೆಲೆಯಲ್ಲಿ ಮೂಡಿಬಂದವು. ತಾಯಿ ಮತ್ತು ಮಗಳ ಸೆಂಟಿಮೆಂಟ್‌ನಲ್ಲಿ ಅದ್ದಿ ತೆಗೆದವು. ಈ ಸಿನಿಮಾದಲ್ಲಿ ಅದಿಲ್ಲ. ಹಳ್ಳಿಯ ಮುಗ್ಧ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಜಾಲದ ಸುತ್ತ ಕತೆ ಇದೆ. ಅದಕ್ಕೊಂದು ಪ್ರೇಮದ ಕೊಂಡಿ ಬೆಸೆದಿದೆ. ಈ ಕಾರಣಕ್ಕಾಗಿ ಚಿತ್ರವು ಕೊಂಚ ಭಿನ್ನವಾಗಿ ನಿಲ್ಲುತ್ತದೆ.
ಬಂಗಾರು (ಬಂಗಾರು ಹನುಮಂತು) ಗ್ಯಾರೇಜ್ ನಡೆಸುವ ಯುವಕ. ಒಳ್ಳೆಯ ಗುಣದಿಂದಾಗಿ ಈತ ಎಲ್ಲರ ಅಚ್ಚುಮೆಚ್ಚು. ಮಮತಾ (ರೋಜಾ) ಹಳ್ಳಿಯ ಹುಡುಗಿ. ಮಲತಾಯಿಯ ಆಶ್ರಯದಲ್ಲಿ ಬೆಳೆದಾಕೆ. ಹಣದ ಆಸೆಗೆ ಮಲತಾಯಿಯೇ ಈಕೆಯನ್ನು ವೇಶ್ಯಾವಾಟಿಕೆಯ ಜಾಲಕ್ಕೆ ಮಾರುತ್ತಾಳೆ. ಆ ಕೂಪದಿಂದ ತಪ್ಪಿಸಿಕೊಂಡು ಬಂಗಾರು ಬಳಿ ಬರುವ ಮಮತಾ, ತನ್ನ ಹಿನ್ನೆಲೆಯನ್ನು ಹೇಳಿಕೊಳ್ಳುತ್ತಾಳೆ. ಅವಳನ್ನು ಕಾಪಾಡಲು ಬಂಗಾರು ಸಾಕಷ್ಟು ಕಷ್ಟಪಡುತ್ತಾನೆ. ಕೊನೆಯಲ್ಲಿ ಮಮತಾಳನ್ನು ಕಾಪಾಡುತ್ತಾನಾ ಅಥವಾ ದುಷ್ಟರ ಕೋಪಕ್ಕೆ ಬಲಿ ಆಗುತ್ತಾನಾ ಅನ್ನುವುದೇ ಸಿನಿಮಾದ ಕತೆ.
ಬಂಗಾರು ಪಾತ್ರ ನಿರ್ವಹಿಸಿದ ನಾಯಕ ಹನುಮಂತು, ಮೊದಲರ್ಧದಲ್ಲಿ ಇನ್ನಷ್ಟು ಪಳಗಬೇಕಿತ್ತು. ದ್ವಿತಿಯಾರ್ಧದಲ್ಲಿ ತಮ್ಮ ರಿಯಲ್ ಶಕ್ತಿಯನ್ನು ತೋರಿಸಿದ್ದಾರೆ. ಆರಡಿ ಎತ್ತರದ ಈ ಹುಡುಗನಲ್ಲಿ ಪ್ರತಿಭೆ ಇದೆ. ಅದು ಸಮರ್ಥವಾಗಿ ಬಳಕೆ ಆಗಬೇಕಷ್ಟೆ. ಸಾಹಸ ಸನ್ನಿವೇಶವನ್ನು ರಿಯಲ್ ಅನ್ನುವಂತೆ ಕಟ್ಟಿದ್ದಾರೆ. ಹೀಗಾಗಿ ಮಾಸ್ ಪ್ರೇಕ್ಷಕರಿಗೆ ಹೀರೋಯಿಸಂ ಕಡಿಮೆ ಅನಿಸುತ್ತದೆ. ಮರಕ್ಕೆ ನೇತು ಹಾಕಿದ ಸನ್ನಿವೇಶದಲ್ಲಂತೂ ಬಂಗಾರು ತುಂಬಾ ರಿಸ್ಕ್ ತೆಗೆದುಕೊಂಡು ಅಭಿನಯಿಸಿದ್ದಾರೆ.
ನಾಯಕನಿಗೆ ಹೋಲಿಸಿದರೆ, ನಾಯಕಿಯ ಅಭಿನಯ ಅಷ್ಟಕಷ್ಟೆ. ಪಾತ್ರವನ್ನು ನಿರ್ವಹಿಸುವಲ್ಲಿ ಸೋಲುವ ರೋಜಾ, ಒಂದೆರಡು ಹಾಡಿನಲ್ಲಿ ಮಾತ್ರ ಅಚ್ಚರಿ ಮೂಡಿಸುತ್ತಾರೆ. ಚಿತ್ರಕತೆಗೆ ಹೊಸ ತಿರುವು ನೀಡುವುದು ರವಿಶಂಕರ್. ಈವರೆಗೂ ಖಳನಾಯಕನಾಗಿ ಅಬ್ಬರಿಸಿರುವ ಇವರು, ಇಲ್ಲಿ ಮಂಗಳಮುಖಿಯಾಗಿದ್ದಾರೆ. ಆ ಪಾತ್ರವನ್ನೂ ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಇವರಾಡುವ ಸಂಭಾಷಣೆ ಮತ್ತು ಅಭಿನಯ ಮೆಚ್ಚುವಂಥದ್ದು.
ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ಅಷ್ಟಕಷ್ಟೆ. ಕ್ಯಾಮೆರಾ ಕೆಲಸದಲ್ಲಿ ಇನ್ನಷ್ಟು ಚುರುಕುತನ ಬೇಕಿತ್ತು. ನಾಯಕನ ಸಾಕು ತಂದೆಯಾಗಿ ರಮೇಶ್ ಭಟ್, ಪಿಂಪ್ ಪಾತ್ರದಲ್ಲಿ ನಾಗರಾಜ್, ಕೆಲವೇ ಸನ್ನಿವೇಶಗಳಲ್ಲಿ ಬಂದು ಹೋಗುವ ನಾಗರಾಜ್ ಕೋಟೆ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಕನ್ನಡ ಚಿತ್ರ