- ಶರಣು ಹುಲ್ಲೂರು
ಸಾಂಸಾರಿಕ ಚಿತ್ರಗಳು ಅಂದಾಕ್ಷಣ ಸಾಮಾನ್ಯವಾಗಿ ತ್ಯಾಗಮಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗಂಗಾ ಸಿನಿಮಾದಲ್ಲೂ ಅಂಥದ್ದೇ ಕತೆ ಇದೆ. ಕಣ್ಣೀರಿನ ಕತೆಯ ಜತೆಗೆ ಆ್ಯಕ್ಷನ್ ದೃಶ್ಯಗಳನ್ನು ಅರೆದು, ಖಾರಾಬಾತ್ ಮಾಡಿದ್ದಾರೆ ನಿರ್ದೇಶಕ ಓಂ ಸಾಯಿಪ್ರಕಾಶ್.
ಗಂಗಾ ಚಿತ್ರದಲ್ಲಿ ಮಾಲಾಶ್ರೀ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಆಟೋ ಡ್ರೈವರ್ ಪಾತ್ರವಾದರೆ, ಮತ್ತೊಂದು ಗೃಹಿಣಿ. ಅಳುಮುಂಜಿ ಪಾತ್ರವು ಗುಲಗಂಜಿಯಷ್ಟಿದ್ದು, ಡ್ರೈವರ್ ಪಾತ್ರದಲ್ಲಿ ಖಡಕ್ಕಾಗಿಯೇ ಪಂಚ್ ಕೊಟ್ಟಿದ್ದಾರೆ. ಮಾಲಾಶ್ರೀ ಚಿತ್ರದಲ್ಲಿದ್ದರೆ, ಅಲ್ಲಿ ನಾಯಕರಿಗೆ ಪ್ರವೇಶವಿಲ್ಲ. ಈ ಚಿತ್ರದಲ್ಲೂ ಇವರೇ ನಾಯಕ ಕಂ ನಾಯಕಿ. ಹೀಗಾಗಿ ಮಾಲಾಶ್ರೀಯನ್ನೇ ಮನಸ್ಸಲ್ಲಿಟ್ಟುಕೊಂಡು ಕತೆ ಬರೆದಂತಿದೆ.
ಇಲ್ಲಿರುವುದು ಹೊಸ ಕತೆಯೇನೂ ಅಲ್ಲ. ತಮ್ಮನನ್ನೋ ತಂಗಿಯನ್ನೋ ಓದಿಸಲಿಕ್ಕೆ ಕಷ್ಟಪಡುವ ಅಕ್ಕನ ಕತೆ ನೋಡಿದ್ದೇವೆ. ಇಲ್ಲಿ ತಮ್ಮ ಮತ್ತು ತಂಗಿಯ ಸ್ಥಾನವನ್ನು ಅಕ್ಕನ ಮಕ್ಕಳು ತುಂಬಿದ್ದಾರೆ. ಅವರಿಗಾಗಿ ಗಂಗಾ ಕಷ್ಟಪಡುತ್ತಾಳೆ. ಜತೆಗೆ ಸಮಾಜದಲ್ಲಿಯ ಓರೆಕೋರೆ ತಿದ್ದಲು ರೌಡಿಗಳ ಜತೆ ಕಾಳಗ ಮಾಡುತ್ತಾಳೆ. ಅವಳ ಸುತ್ತಲೂ ಖಳರೇ ತುಂಬಿಕೊಂಡಾಗ, ಅದರಿಂದ ಅವಳು ಹೇಗೆ ಪಾರಾಗುತ್ತಾಳೆ?; ತನ್ನ ಕುಟುಂಬವನ್ನೂ ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬ ಕತೆ ಇಲ್ಲಿದೆ.
ಸೀರೆಯುಟ್ಟ ಗಂಗಮ್ಮನಿಗಿಂತ ಆಟೋ ಡ್ರೈವರ್ ಗಂಗಾನೇ ಹೆಚ್ಚು ಇಷ್ಟವಾಗುತ್ತಾಳೆ. ಕಾರಣ, ಅಳುಮುಂಜಿ ಪಾತ್ರಕ್ಕಿಂತಲೂ ಮಾಲಾಶ್ರೀ ಫೇಮಸ್ ಆಗಿದ್ದು ರೆಬಲ್ ಪಾತ್ರಗಳಿಂದ. ಈ ಚಿತ್ರದಿಂದ ಮಾಲಾಶ್ರೀ ಅವರಿಗೆ ಡಬ್ ಮಾಡಿದ್ದು ದೀಪಾ. ಹೀಗಾಗಿ ಹೊಸ ಮಾಲಾಶ್ರೀಯನ್ನು ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಕಮರ್ಷಿಯಲ್ ಸಿನಿಮಾ ಎನ್ನುವ ಕಾರಣಕ್ಕಾಗಿ ಡಬ್ಬಲ್ ಮೀನಿಂಗ್ ಡೈಲಾಗ್, ಒಪ್ಪುವುದಕ್ಕೆ ಆಗದೇ ಇರುವಂತಹ ಸಾಹಸ ದೃಶ್ಯಗಳನ್ನು ಜೋಡಿಸಲಾಗಿದೆ. ನೋಡುಗರಿಗೆ ಇವು ಖಂಡಿತಾ ಕಿರಿಕಿರಿ ಉಂಟು ಮಾಡುತ್ತವೆ.
ಶ್ರೀನಿವಾಸ್ ಮೂರ್ತಿ, ಪವಿತ್ರಾ ಲೋಕೇಶ್ ಮತ್ತು ಹೇಮಾ ಚೌಧರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶರತ್‌ಲೋಹಿತಾಶ್ವ ಅಬ್ಬರ ಜೋರಾಗಿದೆ. ರಂಗಾಯಣ ರಘು ಕಚಗುಳಿ ಇಟ್ಟರೆ, ಸಾಧುಕೋಕಿಲಾ ಕಪಿಚೇಷ್ಟೆ ಮಾಡಿದ್ದಾರೆ. ಅರ್ಜುನ್ ಜನ್ಯ ಪಕ್ಕಾ ಟಿಪಿಕಲ್ ಸಂಗೀತ ನೀಡಿದ್ದಾರೆ. ಈ ಕಡೆ ದುರ್ಗಿ ಮತ್ತು ಆ ಕಡೆ ಮಾಲಾಶ್ರೀ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನೋಡಬಹುದಾಗಿದೆ.
ಕನ್ನಡ ಚಿತ್ರ : ಗಂಗಾ